ಕೋಟ: ಮಳೆಗಾಲ ಆರಂಭವಾದರೂ, ಚರಂಡಿ ನಿರ್ವಹಣೆ ಮಾಡದ್ದರಿಂದ ಕೋಟಿಗಟ್ಟಲೆ ರೂ. ವ್ಯಯಮಾಡಿ ನಿರ್ಮಾಣವಾದ ಜಿಲ್ಲಾ ರಸ್ತೆಯೇ ಹಾಳಾಗುತ್ತಿದೆ. ಚರಂಡಿಯಲ್ಲಿ ಹೂಳು, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳು ತುಂಬಿದ್ದು, ನೀರು ಹರಿಯುತ್ತಿಲ್ಲ.
ರಸ್ತೆಗಳಲ್ಲಿ ಹೊಂಡ
ಎರಡು ವರ್ಷದ ಹಿಂದೆ ಬ್ರಹ್ಮಾವರ-ಜನ್ನಾಡಿ ರಸ್ತೆ ಸುಮಾರು 4.86 ಕೋಟಿ ರೂ. ವೆಚ್ಚದಲ್ಲಿ ಮತ್ತು ಕೋಟ-ಗೋಳಿಯಂಗಡಿ ರಸ್ತೆ 5.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಆದರೆ ಚರಂಡಿ ಸರಿಯಾಗಿಲ್ಲದೆ, ನೀರು ರಸ್ತೆಯಲ್ಲಿ ಹರಿದು ಹೊಂಡಗಳು ಸೃಷ್ಟಿಯಾಗುತ್ತಿವೆ.
ಸಮಸ್ಯೆ ಇರೋದೆಲ್ಲಿ?
ಕೋಟ ಗೋಳಿಯಂಗಡಿ ಮುಖ್ಯ ರಸ್ತೆಯ ಸಾೖಬ್ರಕಟ್ಟೆ ಮೆಸ್ಕಾಂ ಕಚೇರಿ ಸಮೀಪ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿ ಸಮಸ್ಯೆ ಇದೆ. ಅದೇ ರೀತಿ ಯಡ್ತಾಡಿ, ಬಾರ್ಕೂರು, ಶಿರಿಯಾರ, ವಡ್ಡರ್ಸೆ, ಬನ್ನಾಡಿ, ಉಪ್ಲಾಡಿ, ಬಿಲ್ಲಾಡಿ, ಶಿರೂರುಮೂರ್ಕೈ ಮುಂತಾದ ಕಡೆಗಳಲ್ಲಿ ರಸ್ತೆಯ ಮೇಲೆ ಮೇಲೆ ನೀರು ಹರಿಯುತ್ತಿದೆ.
ಪರಿಸರವೇ ಹಾಳು
ಕೋಟ ಮೂರುಕೈಯಿಂದ ಬೆಟ್ಲಕ್ಕಿ ಹಡೋಲಿನ ತನಕ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಈ ಭಾಗದಲ್ಲಿ ಹೇರಳ ಪ್ರಮಾಣದದಲ್ಲಿ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಎಸೆಯಲಾಗುತ್ತಿದೆ. ಹೀಗಾಗಿ ಮಳೆ ನೀರಿನ ಜತೆಗೆ ತ್ಯಾಜ್ಯ ಕೂಡ ಬೆರೆತು ಇಡೀ ಪರಿಸರವೇ ಹಾಳಾಗಿದೆ. ನಾಲ್ಕೈದು ವರ್ಷಗಳಿಂದ ಸ್ಥಳೀಯರು ಈ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ.
– ರಾಜೇಶ್ ಗಾಣಿಗ ಅಚ್ಲಾಡಿ