Advertisement

ಡಾ. ಟಿ.ಎಂ.ಎ. ಪೈ -ಟಿ.ಎ. ಪೈ: ಸಾಧನೆಗಳ ಮೇರು ಶಿಖರ

03:54 PM May 30, 2019 | mahesh |

ಒಂದೇ ಕುಟುಂಬದ ಹಲವರು ಉನ್ನತ ಸಾಧಕರಾಗಿ ಪ್ರಸಿದ್ಧ ವ್ಯಕ್ತಿಗಳಾಗುವುದು ವಿರಳ. ಆದರೆ ಮಣಿಪಾಲದ ಪೈ ಕುಟುಂಬದ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈ ಇವರಿಬ್ಬರೂ ಉನ್ನತ ಸಾಧಕರುಗಳಾಗಿ ಮಹಾಪುರುಷರಾದರು. ಈ ಇಬ್ಬರು ಮಹಾಸಾಧಕರ ಸ್ಮತಿ ದಿನವಾದ ಇಂದು ಅವರ ಜೀವನ, ಸಾಧನೆ, ಚಿಂತನೆ ವಿಚಾರ ಧಾರೆ ಮತ್ತು ಆದರ್ಶಗಳನ್ನು ನೆನೆಪಿಸಿಕೊಳ್ಳುವ ದಿನವೂ ಆಗಿದೆ.

Advertisement

1898ರ ಎ.30ರಂದು ಜನಿಸಿದ ಡಾ| ಟಿ.ಎಂ.ಎ.ಪೈ ವೈದ್ಯರಾಗಿ, ಬ್ಯಾಂಕರ್‌ ಆಗಿ, ಶಿಕ್ಷಣ ಸಂಸ್ಥೆಗಳ ಮತ್ತು ಉದ್ದಿಮೆಗಳ ಸ್ಥಾಪಕರಾಗಿ, ಆಡಳಿತಗಾರರಾಗಿ ಅಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಚಿಂತನೆಗಳನ್ನು ಹೊಂದಿದವರಾಗಿದ್ದರೂ ಅವರ ಪ್ರತಿಯೊಂದು ಹೊಸ ಹೆಜ್ಜೆ ಹೊಸ ಯೋಜನೆ ಹೊಸ ಸೃಷ್ಟಿ ಮತ್ತು ಆವಿಷ್ಕಾರ ಕ್ರಾಂತಿಕಾರಿಯಾಗಿಯೇ ಇತ್ತು.

ಹಣಕಾಸಿನ ಸೇರ್ಪಡೆ: 60-70 ವರ್ಷಗಳ ಅನಂತರದ ಜನರ ಬೇಕುಗಳನ್ನು ಮತ್ತು ಅವಶ್ಯಕತೆಗಳನ್ನು ಡಾ. ಪೈ 1920, 1930 ಮತ್ತು 1940 ದಶಕಗಳಲ್ಲೇ ಮನಗಂಡಿದ್ದರು ಮತ್ತು ಅವುಗಳನ್ನು ಕೃತಿಗಿಳಿಸಲು ಶ್ರಮಿಸುತ್ತಿದ್ದರು. ಸರಕಾರ ಹಲವು ದಶಕಗಳ ನಂತರ ಅಳವಡಿಸಿಕೊಂಡ ಹೊಸ ನೀತಿ ಮತ್ತು ಹೊಸ ಯೋಜನೆಗಳನ್ನು ಡಾ. ಪೈ 70-80 ವರ್ಷಗಳ ಮುಂಚೆಯೇ ಕೃತಿಗಿಳಿಸಿದ ಉದಾಹರಣೆಗಳಿವೆ. 2004-05ರಲ್ಲಿ ಡಾ.ಮನಮೋಹನ ಸಿಂಗ್‌ ಸರಕಾರ ಅನುಷ್ಠಾನಗೊಳಿ ಸಲಾರಂಭಿಸಿದ ಹಣ ಕಾಸಿನ ಸೇರ್ಪಡೆ ಯೋಜನೆಯನ್ನು ಡಾ. ಪೈ 1928ರಲ್ಲೇ “ಪಿಗ್ಮಿ’ ಯೋಜನೆಯ ಮೂಲಕ ಅನುಷ್ಠಾನಗೊಳಿಸಿದ್ದರು. ಸಮಾಜದ ಕೃಶ ವರ್ಗಕ್ಕೆ ಜನರು ಮತ್ತು ಅತಿ ಕಡಿಮೆ ಆದಾಯ ವಿರುವವರೂ ಸೇರಿದಂತೆ ಎಲ್ಲರಿಗೂ ಎಟಕಬಲ್ಲ ಆವಿಷ್ಕಾರ ಪಿಗ್ಮಿ ಯೋಜನೆ. “ಪಿಗ್ಮಿ’ ಯೋಜನೆ ಹಣಕಾಸಿನ ಸೇರ್ಪಡೆಯ ಪ್ರಮುಖ ಮತ್ತು ಪರಿಣಾಮಕಾರಿ ಆಯುಧ ಎಂಬುದರಲ್ಲಿ ಎರಡು ಮಾತಿಲ್ಲ.

ಸಾಲ ನೀಡಿಕೆಯಲ್ಲಿ ಹೊಸತನ: ಡಾ. ಟಿ.ಎಂ.ಎ. ಪೈಯವರು ಸಿಂಡಿಕೇಟ್‌ ಬ್ಯಾಂಕಿನಲ್ಲಿ ಸಾಲ ನೀಡಿಕೆಯಲ್ಲಿ ಹೊಸತನ ತೋರಿಸಿ ದರು. ಬ್ಯಾಂಕುಗಳು ಕೃಷಿ ಸಾಲ ನೀಡಬಾರದೆಂಬ ಭಾರತೀಯ ರಿಸರ್ವ್‌ ಬ್ಯಾಂಕಿನ ಆದೇಶವನ್ನು ಉಲ್ಲಂ ಸಿ ಡಾ| ಪೈ ಸಿಂಡಿಕೇಟ್‌ ಬ್ಯಾಂಕಿನಲ್ಲೇ ಕೃಷಿ ಸಾಲ ನೀಡಲು ಆರಂಭಿಸಿದರು. ಬ್ಯಾಂಕುಗಳ ಮೇಲೆ ಸಾಮಾಜಿಕ ಹತೋಟಿ ಜಾರಿಗೆ ಬಂದ ನಂತರ ಮತ್ತು ರಾಷ್ಟ್ರೀಕರಣೋತ್ತರ ಅವಧಿಯಲ್ಲಿ ಕೃಷಿ ಸಾಲ ನೀಡಿಕೆ ಒಂದು ರಾಷ್ಟ್ರೀಯ ನೀತಿಯಾಯಿತು ಮತ್ತು ಆದ್ಯತೆಯಾಯಿತು.

ಇತರ ಬ್ಯಾಂಕುಗಳು ವಸೂಲಾತಿ ಸುಲಭವಾಗುವಂತೆ ಮಾಡಿಕೊಳ್ಳಲು ತುಂಬಾ ಹಣವಿದ್ದವರಿಗೆ ಮತ್ತು ಅತಿ ಶ್ರೀಮಂತರಿಗೆ ಮಾತ್ರ ಸಾಲ ನೀಡುತ್ತಿದ್ದವು. ಆದರೆ ಸಿಂಡಿಕೇಟ್‌ ಬ್ಯಾಂಕ್‌ ಬಡವರಿಗೆ, ಕೃಷಿಕರಿಗೆ, ಮೀನುಗಾರರಿಗೆ, ಕೈಮಗ್ಗದ ಉದ್ದಿಮೆ ನಡೆಸುವವರಿಗೆ ಮತ್ತು ಇತರ ವೃತ್ತಿನಿರತರಿಗೆ ಸಾಲ ನೀಡಲಾರಂಭಿಸಿತು. ಶಿಕ್ಷಣಕ್ಕೆ ಸಾಲ ನೀಡುವ ಯೋಜನೆಯನ್ನು ಸಿಂಡಿಕೇಟ್‌ ಬ್ಯಾಂಕ್‌ ಆರಂಭಿಸಿತು. ಕಿರು ಹಣಕಾಸು ಯೋಜನೆ(Micro Finance) ಈಗ ಅತಿ ಹೆಚ್ಚು ಒತ್ತು ಹೊಂದಿರುವ ಯೋಜನೆಗಳಲ್ಲೊಂದು. ಕಿರು ಹಣಕಾಸು ಪರಿಕಲ್ಪನೆಯ ಮೂಲ ಶಿಲ್ಪಿ ಡಾ| ಪೈಗಳು.

Advertisement

ಪ್ರಾದೇಶಿಕ ಬ್ಯಾಂಕುಗಳ ಪರಿಕಲ್ಪನೆಯ ಮೂಲ ಶಿಲ್ಪಿ ಕೂಡ ಡಾ| ಟಿ.ಎಂ.ಎ. ಪೈಗಳಾಗಿದ್ದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಾದೇಶಿಕ ಬ್ಯಾಂಕುಗಳನ್ನು ಸ್ಥಾಪಿಸುವ ಗುರಿ ಡಾ| ಪೈಗಳಿಗಿತ್ತು. ಮಹಾರಾಷ್ಟ್ರ ಅಪೆಕ್ಸ್‌ ಬ್ಯಾಂಕ್‌ ಮತ್ತು ಸದರ್ನ್ ಇಂಡಿಯಾ ಅಪೆಕ್ಸ್‌ ಬ್ಯಾಂಕ್‌ ಎಂಬ ಎರಡು ಪ್ರಾದೇಶಿಕ ಬ್ಯಾಂಕುಗಳನ್ನು ಡಾ| ಪೈ ಆರಂಭಿಸಿದರು.

ಬ್ಯಾಂಕಿಂಗ್‌ ಪ್ರತಿನಿಧಿಗಳ ಮೂಲಕ ಬ್ಯಾಂಕಿಂಗ್‌ ವ್ಯವಹಾರವನ್ನು ನಡೆಸುವುದನ್ನು ಪ್ರಥಮವಾಗಿ ಆರಂಭಿಸಿದವರು ಡಾ| ಪೈಗಳು. ಈ ಯೋಜನೆಯ ಮೂಲ ಶಿಲ್ಪಿ ಕೂಡ ಡಾ| ಪೈ. ಈಗ ರಿಸರ್ವ್‌ ಬ್ಯಾಂಕ್‌ ನೀತಿಯಂತೆ ಎಲ್ಲಾ ಬ್ಯಾಂಕ್‌ಗಳೂ ಬ್ಯಾಂಕಿಂಗ್‌ ಪ್ರತಿಗಳ ಮೂಲಕ ವ್ಯವಹಾರ ನಡೆಸುತ್ತಿವೆ. 1966ರಲ್ಲಿ ಡಾ| ಪೈಗಳು ಜನರಲ್ಲಿ ಶೇರು ವ್ಯವಹಾರ ಹೆಚ್ಚಿಸಲು ಇನ್ವೆಸ್ಟರ್ ಏಜನ್ಸಿ ವಿಭಾಗ ಆರಂಭಿಸಿದರು.

ವೈದ್ಯಕೀಯ,ಎಂಜಿನಿಯರ್‌ ಕಾಲೇಜ್‌ಗಳ ಸಹಿತ ಡಾ| ಪೈಯವರು ಸ್ಥಾಪಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳು ಯಶಸ್ಸು ಗಳಿಸಿವೆ. ಅವರು ಸ್ಥಾಪಿಸಿದ ವಿಮಾ ಸಂಸ್ಥೆ ಕೆನರಾ ಮ್ಯೂಚುವಲ್‌ ಇನ್ಶೂರೆನ್ಸ್‌ ಕಂಪೆನಿ 1956ರಲ್ಲಿ ನಡೆದ ರಾಷ್ಟ್ರೀಕರಣದ ಫ‌ಲವಾಗಿ ಭಾರತೀಯ ಜೀವ ವಿಮಾ ನಿಗಮದ ಭಾಗವಾಯಿತು.

ಶಾಶ್ವತ ವ್ಯವಸ್ಥೆಗೆ ಒತ್ತು: ಡಾ| ಪೈ ಯಾವಾಗಲೂ ಶಾಶ್ವತ ವ್ಯವಸ್ಥೆಗೆ ಒತ್ತು ನೀಡಿದವರು. “ತಾತ್ಕಾಲಿಕ’ ಎಂದರೆ ಅವರಿಗಾಗದು. ಒಮ್ಮೆ ಪ್ರೊ| ಕೆ. ಆರ್‌. ಹಂದೆಯವರು ಉಡುಪಿಯ ಶಿಕ್ಷಣ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾಗ ಡಾ| ಪೈಯವರನ್ನು ಭೇಟಿಯಾಗಿ ಕಾಲೇಜಿನ ವಾರ್ಷಿಕೋತ್ಸವಕ್ಕೆ ಒಂದು ತಾತ್ಕಾಲಿಕ ಸ್ಟೇಜ್‌ ನಿರ್ಮಿಸಲು ಮಂಜೂರಾತಿಗಾಗಿ ವಿನಂತಿಸಿದರಂತೆ. ಆಗ ಡಾ| ಪೈಯವರು, “Prof. Hande, you are temporary, I am temporary but the things we create must be permanent. Let us create permanent things alone’ಎಂದು ಹೇಳಿ ಕಾಲೇಜಿಗೆ ಶಾಶ್ವತ ಸ್ಟೇಜನ್ನು ಕಟ್ಟಿಸಿಕೊಟ್ಟರು.

ಡಾ| ಪೈಯವರು ದೇಶದಾದ್ಯಂತ ಒಂದೇ ತೆರಿಗೆ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿದ್ದರು. ಒಂದು ರಾಷ್ಟ್ರ ಒಂದು ತೆರಿಗೆ ಸಿದ್ಧಾಂತದನ್ವಯ ಆರಂಭಿಕವಾಗಿ ಕಡಿಮೆ ತೆರಿಗೆ ಮತ್ತು ಕ್ರಮೇಣ ಶೂನ್ಯ ತೆರಿಗೆಯಿರಬೇಕೆಂಬ ವಾದ ಅವರದ್ದಾಗಿತ್ತು. ಸರಕು ಸೇವಾ ತೆರಿಗೆಯ (ಜಿ.ಎಸ್‌.ಟಿ.) ಯ ಅನುಷ್ಠಾನದಿಂದ ಡಾ| ಟಿ.ಎಂ.ಎ. ಪೈ ಪ್ರತಿಪಾದಿಸುತ್ತಿದ್ದ ಒಂದು ರಾಷ್ಟ್ರ ಒಂದು ತೆರಿಗೆ ಸಿದ್ಧಾಂತ ಈಗ ಅನುಷ್ಠಾನಗೊಂಡಂತಾಗಿದೆ.

ಕೃತಿ ರೂಪದ ಉತ್ತರ: ಡಾ| ಪೈಯವರು ತಮ್ಮ ಯೋಜನೆಗಳನ್ನು ಟೀಕಿಸಿದವರಿಗೆ ಮತ್ತು ತಮ್ಮ ವಿವಿಧ ಯೋಜನೆಗಳ ಕುರಿತಾಗಿ ತಿರಸ್ಕಾರ ದೃಷ್ಟಿಯಿಂದ ಮಾತಾಡಿದವರಿಗೆ ಉತ್ತರಿಸಿದ್ದು ತಮ್ಮ ಯೋಜನೆಗಳನ್ನು ಕೃತಿಗಿಳಿಸುವ ಮೂಲಕ. ಕೃತಿ ರೂಪದ ಉತ್ತರ ಅವರದ್ದಾಗಿತ್ತು, ಬಾಯಿ ಮಾತಿನ ಟೀಕೆಯಲ್ಲ.

ಡಾ| ಪೈಗಳು ಹುಟ್ಟು ಕನಸುಗಾರ. ಆಧುನಿಕ ಮಣಿಪಾಲ ಅವರ ಕನಸಿನ ಫ‌ಲ. ಡಾ| ಪೈ ತಮ್ಮ ಹೆಚ್ಚಿನ ಕನಸುಗಳನ್ನು ತಾವು ಬದುಕಿರುವಾಗಲೇ ನನಸಾಗಿಸಿಕೊಂಡರು. ಅವರ ಎರಡು ಕನಸುಗಳು ಮಾತ್ರ ಅವರು ಬದುಕಿದ್ದಾಗ ನನಸಾಗಲಿಲ್ಲ. ಅವುಗಳೆಂದರೆ ಮಣಿಪಾಲ ವಿಶ್ವವಿದ್ಯಾನಿಲಯದ ಸ್ಥಾಪನೆ ಮತ್ತು ಒಂದು ರಾಷ್ಟ್ರ ಒಂದು ತೆರಿಗೆ ಸಿದ್ಧಾಂತ ಆಧಾರಿತ ಅತಿ ಕಡಿಮೆ ತೆರಿಗೆ ವ್ಯವಸ್ಥೆ ಮತ್ತು ಅಂತಿಮವಾಗಿ ತೆರಿಗೆ ರಹಿತ ಸಮಾಜದ ಸೃಷ್ಟಿ. ಅವರ ನಿಧನವಾದ ತರುವಾಯ ಮಣಿಪಾಲ ವಿಶ್ವ ವಿದ್ಯಾನಿಲಯ; ಅಂದರೆ “ಮಾಹೆ’ ಸ್ಥಾಪನೆಯಾಗಿದೆ. ಇದೀಗ ಜಿ.ಎಸ್‌.ಟಿ.ಯ ಅನುಷ್ಠಾನದಿಂದ ಡಾ| ಪೈ ಪ್ರತಿಪಾದಿಸಿದ ತೆರಿಗೆ ವ್ಯವಸ್ಥೆಯ ಮೂಲ ತತ್ವ ಕೂಡ ಅನುಷ್ಠಾನಗೊಂಡಂತಾಗಿದೆ. ಕಡಿಮೆ ತೆರಿಗೆಯ ಮತ್ತು ಅಂತಿಮವಾಗಿ ಶೂನ್ಯ ತೆರಿಗೆಯ ಗುರಿ ಮಾತ್ರ ಸಾಧಿಸಲ್ಪಟ್ಟಿಲ್ಲ.

ಡಾ| ಪೈಗಳಂತೆ ತಮ್ಮ ಹೆಚ್ಚಿನ ಎಲ್ಲಾ ಕನಸುಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾದವರು ವಿರಳ. ಡಾ| ಪೈ ಮುಟ್ಟದ ಕ್ಷೇತ್ರವಿರಲಿಲ್ಲ. ರಾಜಕೀಯವೊಂದನ್ನು ಬಿಟ್ಟು ಇತರ ಎಲ್ಲಾ ಕ್ಷೇತ್ರಗಳಿಗೆ ಅವರು ನುಗ್ಗಿದ್ದರು. ತಾವು ಪ್ರವೇಶಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಅವರು ಪವಾಡ ಸದೃಶಸಾಧನೆಗಳನ್ನು ತೋರಿಸಿದರು. ಡಾ| ಪೈಗಳ ಅಪೂರ್ವ ಯಶಸ್ಸಿಗೆ ಕಾರಣವಾದ ಮಹತ್ವದ ಅಂಶಗಳೆಂದರೆ ಅವರು ಹೊಂದಿದ್ದ ದೂರದೃಷ್ಟಿ ಮತ್ತು ಮುನ್ನೋಟ ರೂಪಣೆಯ ಮತ್ತು ಆವಿಷ್ಕಾರ ರೂಪಣೆಯ ಸಾಮರ್ಥ್ಯ ಹಾಗೂ ರೂಪಿಸಿ ಅಳವಡಿಸಿಕೊಂಡ ಕನಸು ಮತ್ತು ಅನುಷ್ಠಾನಗೊಳಿಸುವ ಛಲ.

ಮಹಾನ್‌ ನಾಯಕ ಟಿ.ಎ.ಪೈ
ಉಡುಪಿಯಲ್ಲಿ 1922ರ ಜನವರಿ 17ರಂದು ಜನಿಸಿದ ಟಿ.ಎ. ಪೈ ಭಾರತದ ಸಾರ್ವಜನಿಕ ರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಧ್ರುವ ತಾರೆಯಂತೆ ಮೆರೆದ ಧೀಮಂತ ನಾಯಕರುಗಳಲ್ಲಿ ಅಗ್ರಗಣ್ಯರು. ರಾಷ್ಟ್ರೀಯ ನಾಯಕರುಗಳಲ್ಲೊಬ್ಬರಾಗಿ ಕೇಂದ್ರ ಸಂಪುಟದಲ್ಲಿ ರೈಲ್ವೆ ಮತ್ತು ಕೈಗಾರಿಕಾ ಸಚಿವ ಹುದ್ದೆಯೂ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಬಹಳಷ್ಟು ಜವಾಬ್ದಾರಿಯಿಂದ ಪರಿಣಾಮಕಾರಿಯಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿ ರಾಷ್ಟ್ರೀಯ ಪ್ರಗತಿಗೆ ಟಿ.ಎ. ಪೈ ನೀಡಿರುವ ಕೊಡುಗೆ ಮಹತ್ತರವಾದುದು. 1981ರ ಮೇ 29ರಂದು ನಮ್ಮನ್ನಗಲಿದ ಟಿ.ಎ. ಪೈ ತಮ್ಮ 59 ವರ್ಷಗಳ ಜೀವನಾವಧಿಯಲ್ಲಿ ಒಬ್ಬ ವ್ಯಕ್ತಿ ನೂರು ವರ್ಷಗಳಲ್ಲಿ ಕೂಡ ಮಾಡಲಾಗದ ಸಾಧನೆಗಳನ್ನು ಮಾಡಿದ್ದಾರೆ.

ಬ್ಯಾಂಕಿಂಗ್‌ ಮತ್ತು ಹಸಿರು ಕ್ರಾಂತಿ: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಟಿ.ಎ. ಪೈ ನಡೆಸಿದ ಹೊಸ ಹಾಗೂ ಅಪೂರ್ವ ಪ್ರಯೋಗಗಳು ಮತ್ತು ಅವರು ಸಿಂಡಿಕೇಟ್‌ ಬ್ಯಾಂಕಿನಲ್ಲಿ ಅಳವಡಿಸಿಕೊಂಡು ಕೃತಿಗಿಳಿಸಿದ ಬ್ಯಾಂಕಿಂಗ್‌ ನೀತಿ ಮತ್ತು ಧೋರಣೆಗಳು ರಾಷ್ಟ್ರೀಕರಣೋತ್ತರ ಅವಧಿಯಲ್ಲಿ ರಾಷ್ಟ್ರೀಯ ಬ್ಯಾಂಕಿಂಗ್‌ ಧೋರಣೆಗಳಾಗಿ ಅಂಗೀಕರಿಸಲ್ಪಟ್ಟ ಇಡೀ ದೇಶದಲ್ಲಿ ಬ್ಯಾಂಕಿಂಗ್‌ ಕ್ರಾಂತಿಗೆ ಕಾರಣವಾದವು.

ಭಾರತೀಯ ಜೀವವಿಮಾ ನಿಗಮದ ಅಧ್ಯಕ್ಷರಾಗಿ ಆ ಬೃಹತ್‌ ಸಂಸ್ಥೆಗೆ ಟಿ.ಎ. ಪೈ ಹೊಸ ಪಥವನ್ನು ಒದಗಿಸಿ ಅದರ ಅಭ್ಯುದಯದ ರೂವಾರಿಯಾದರು ಮಾತ್ರವಲ್ಲದೆ ಸೇರ್ಪಡೆಯ ವಿಮಾ ಯೋಜನೆಗಳ ಶಿಲ್ಪಿಯಾದರು. ಭಾರತೀಯ ಆಹಾರ ನಿಗಮದ ಅಧ್ಯಕ್ಷರಾಗಿ ಆಹಾರ ಸಮಸ್ಯೆಗೆ ಶಾಶ್ವತ ಪರಿಹಾರವನ್ನೊದಗಿಸುವ ಸಲುವಾಗಿ ಸಿ. ಸುಬ್ರಹ್ಮಣ್ಯಮ್‌ ಅವರಂತಹ ರಾಷ್ಟ್ರೀಯ ನಾಯಕರೊಂದಿಗೆ ಸೇರಿ ಹಸಿರು ಕ್ರಾಂತಿಗೆ ನಾಂದಿ ಹಾಡಿದರು.

ಉದ್ದಿಮೆ ಕ್ಷೇತ್ರಕ್ಕೆ ಹೊಸ ಆಯಾಮ: ಕೇಂದ್ರ ರೈಲ್ವೆ ಸಚಿವರಾಗಿ ಟಿ.ಎ. ಪೈ ರೈಲು ಉದ್ದಿಮೆಗೆ ಕಾಯಕಲ್ಪ ನೀಡಿ ಅದರ ಅಭ್ಯುದಯ ಮತ್ತು ಆಧುನೀಕರಣದ ಶಿಲ್ಪಿಯಾದರು. ದೇಶದ ಕೈಗಾರಿಕಾ ಸಚಿವರಾಗಿ ಹೊಸ ಕೈಗಾರಿಕಾ ನೀತಿಯ ರೂಪಣೆ ಮತ್ತು ಅಳವಡಿಕೆ ಹಾಗೂ ಕೈಗಾರಿಕಾ ಪರವಾನಿಗೆ ನೀತಿಯ ಉದಾರೀಕರಣದ ಮೂಲಕ ಉದ್ದಿಮೆ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಅದರ ತ್ವರಿತ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ನಿರ್ವಹಣಾ ಶಿಕ್ಷಣವೂ ಸೇರಿದಂತೆ ಶಿಕ್ಷಣ ರಂಗದಲ್ಲಿ ಮಹತ್ತರ ಸೇವೆ ನೀಡಿರುವ ಟಿ.ಎ. ಪೈ ಶಿಕ್ಷಣ ಸುಧಾರಣೆ ಮತ್ತು ಪಾಠಪಟ್ಟಿ ಸುಧಾರಣೆಗೆ ಸಂಬಂಧಿಸಿದ ಸಮಿತಿಗಳಲ್ಲೂ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆನೇಜ್‌ಮೆಂಟ್‌ನ ಸ್ಥಾಪನೆಗೆ ಟಿ.ಎ.ಪೈ ಬಹಳಷ್ಟು ಶ್ರಮಿಸಿದರು ಮತ್ತು ಅದನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಅದರ ಅಧ್ಯಕ್ಷರಾಗಿ ಕೂಡ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಬ್ಯಾಂಕ್‌ ನಿರ್ವಹಣಾ ಸಂಸ್ಥೆ (NIBM)ಯ ಸ್ಥಾಪನೆಗಾಗಿ ಕೂಡ ಟಿ.ಎ. ಪೈ ಬಹಳಷ್ಟು ದುಡಿದರು. ಅದರ ಪ್ರಥಮ ನಿರ್ದೇಶಕರನ್ನಾಗಿ ಡಾ| ಎನ್‌.ಸಿ. ಮೆಹ್ತಾರ ಹೆಸರನ್ನು ಸೂಚಿಸಿದವರೂ ಟಿ.ಎ. ಪೈ. ಮಣಿಪಾಲದಲ್ಲಿ ನಿರ್ವಹಣಾ ಸಂಸ್ಥೆಯನ್ನು ಟಿ.ಎ. ಪೈ ಸ್ಥಾಪಿಸಿದರು. ಈಗ ಅವರ ಹೆಸರಲ್ಲಿ ಟಿ.ಎ. ಪೈ ಮೇನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಇದೆ.

ಪ್ರಭಾವಿ ಸಂಸದೀಯ ಪಟು: ಟಿ.ಎ. ಪೈ ತಮ್ಮ 29ನೆಯ ವಯಸ್ಸಿನಲ್ಲಿಯೇ ಶಾಸಕರಾದರು. ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ತಮ್ಮ ಪಕ್ಷ ಸೋತು ವಿರೋಧ ಪಕ್ಷದಲ್ಲಿದ್ದಾಗ ವಿರೋಧ ಪಕ್ಷದ ಪ್ರಭಾವಿ ನಾಯಕರುಗಳಲ್ಲೊಬ್ಬರಾಗಿ, ಉತ್ತಮ ಸಂಸದೀಯ ಪಟುವಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ, ಎಐಸಿಸಿ ಸದಸ್ಯರಾಗಿ ರಾಜ್ಯ ಕಾಂಗ್ರೆಸ್‌ ಪದಾಧಿಕಾರಿಯಾಗಿ ಕೂಡ ಟಿ.ಎ. ಪೈ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ನೀತಿ ರೂಪಣೆ: ಟಿ.ಎ. ಪೈ ಕೇಂದ್ರ ಸರಕಾರದ ವಿವಿಧ ರಾಷ್ಟ್ರೀಯ ನೀತಿ ಮತ್ತು ಧೋರಣೆಗಳ ರೂಪಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಇಂದಿರಾಗಾಂಧಿಯವರ 20 ಅಂಶ ಕಾರ್ಯಕ್ರಮದ ರೂಪಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಇಪ್ಪತ್ತು ಅಂಶಗಳ ಪೈಕಿ ಹದಿನಾರು ಅಂಶಗಳನ್ನು ಟಿ.ಎ. ಪೈ ಸ್ವತಃ ಸೂಚಿಸಿದ್ದರು.

ಟಿ.ಎ. ಪೈ ತಮ್ಮ 59 ವರ್ಷಗಳ ಜೀವಮಾನವಿಡೀ ವೇಗದ ಮತ್ತು ಅವಸರದ ಕಾರ್ಯಾಚರಣೆಗೆ ಒತ್ತು ನೀಡಿದರು. ಅವರಿಗೆ ಎಲ್ಲ ಕೆಲಸ ಬೇಗ ಆಗಬೇಕು. ನಿಧಾನ ಕೆಲಸ ಅವರಿಗಾಗದು. ತಾವು ದುಡಿದ ಎಲ್ಲಾ ಸಂಸ್ಥೆಗಳ ಮತ್ತು ಸಚಿವಾಲಯದಲ್ಲಿ ತ್ವರಿತ ಕಾರ್ಯಾಚರಣೆಗೆ ಒತ್ತು ನೀಡಿದರು.40ನೇ ವಯಸಿನಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಆಡಳಿತ ನಿರ್ದೇಶಕರಾದರು. 42ರ ವಯಸ್ಸಿನಲ್ಲಿ ಭಾರತೀಯ ಆಹಾರ ನಿಗಮದ ಅಧ್ಯಕ್ಷರಾದರು. 48ನೆಯ ವಯಸ್ಸಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷರಾದರು. 50ನೆಯ ವಯಸ್ಸಿನಲ್ಲಿ ಕೇಂದ್ರ ಸಚಿವರಾದರು.

ಹಲವು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದ ಟಿ.ಎ. ಪೈ ಪದ್ಮಭೂಷಣ ಪ್ರಶಸ್ತಿ ವಿಜೇತರೂ ಹೌದು. ಎಲ್ಲರಲ್ಲೂ ಪ್ರತಿಭೆಗಳನ್ನು ಮತ್ತು ಸಾಮರ್ಥ್ಯಗಳನ್ನು ಕಂಡ ಪೈಗಳು ಯಾರಲ್ಲೂ ದೌರ್ಬಲ್ಯಗಳನ್ನು ಕಾಣಲಿಲ್ಲ. ತನ್ನೊಂದಿಗೆ ಕೆಲಸ ಮಾಡಿದ ಸರಕಾರಿ ನೌಕರಶಾಹಿಯೂ ಸೇರಿದಂತೆ ಎಲ್ಲರಲ್ಲೂ ಪೈಗಳು “ತಾವು ಪೈಗಳೊಂದಿಗೆ ದುಡಿಯುವ ದೊಡ್ಡ ಮನುಷ್ಯ’ರೆಂಬ ಭಾವನೆ ಬೆಳೆಯುವಂತೆ ಮಾಡಿದರು. ಜಿ.ಕೆ. ಚೆಸ್ಟರ್‌ಸನ್‌ ಹೇಳಿರುವಂತೆ ದೊಡ್ಡ ಮನುಷ್ಯನೊಬ್ಬ ಎಲ್ಲರಲ್ಲೂ ತಾವು ಸಣ್ಣ ಮನುಷ್ಯರೆಂಬ ಭಾವನೆ ಬೆಳೆಯುವಂತೆ ಮಾಡುತ್ತಾನೆ. ಆದರೆ ನಿಜವಾದ ದೊಡ್ಡ ಮನುಷ್ಯ ಇತರರನ್ನು ದೊಡ್ಡವರನ್ನಾಗಿ ಮಾಡುತ್ತಾನೆ. ಟಿ.ಎ. ಪೈಯವರು ಅಂತಹ ನಿಜವಾದ ದೊಡ್ಡ ಮನುಷ್ಯರಾಗಿದ್ದರು. ನಿಜವಾದ ದೊಡ್ಡ ಜನನಾಯಕರಾಗಿದ್ದರು.

(ನಾಳೆ ಟಿ.ಎಂ.ಎ. ಪೈ -ಟಿ.ಎ. ಪೈ ಸ್ಮತಿ ದಿ ನ)

Advertisement

Udayavani is now on Telegram. Click here to join our channel and stay updated with the latest news.

Next