Advertisement

ಶತಮಾನದಾಚೆಯ ಮಣಿಪಾಲವನ್ನು ಕಟ್ಟಿದ ಮಹಾನುಭಾವ

12:53 AM Apr 30, 2021 | Team Udayavani |

ಕಣ್ಣುಗಳು ದರ್ಶಿಸಲು ಅಸಾಧ್ಯವಾದವುಗಳನ್ನು ಕಾಣುವ ಕಲೆಯೇ ದೂರದರ್ಶಿತ್ವ. ಜೊನಾಥನ್‌ ಸ್ವಿಫ್ಟ್

Advertisement

ನಮ್ಮ ಆಲೋಚನೆಗಳಂತೆ ನಾವು. ಹೀಗಾಗಿ ಉನ್ನತವಾದುದನ್ನೇ ಆಲೋಚಿಸಿ. ಸ್ವಾಮಿ ವಿವೇಕಾನಂದ

ಭವಿಷ್ಯವನ್ನು ಕಲ್ಪಿಸಿಕೊಂಡು  ಅದನ್ನು ಸಾಕಾರಗೊಳಿಸುವತ್ತ ಛಲ ತೊಡುವುದೇ ಯಶಸ್ವಿ ನಾಯಕತ್ವದ ಸಾರ. ರೊನಾಲ್ಡ್‌ ರೇಗನ್‌

ಈ ಮೂರು ಹೇಳಿಕೆಗಳು ಆಧುನಿಕ ಮಣಿಪಾಲದ ನಿರ್ಮಾತೃ ಡಾ| ಟಿಎಂಎ ಪೈ ಅವರ ವ್ಯಕ್ತಿತ್ವ, ನಾಯಕತ್ವ, ಮುಂಗಾಣೆಕೆಯ ಶಕ್ತಿ ಸಾಮರ್ಥ್ಯ ಗಳನ್ನು ಸ್ಥೂಲವಾಗಿ ಕಟ್ಟಿಕೊಡಬಲ್ಲಂಥವು. ಡಾ| ಪೈಯವರು ಜನಿಸಿದ ಕಾಲಘಟ್ಟ, ಆ ಕಾಲಕ್ಕೆ ಅವರಿದ್ದ ಉಡುಪಿ- ಮಣಿಪಾಲದ ಸ್ಥಿತಿಗತಿ ಮತ್ತು ಅವರು ಹುಟ್ಟು ಹಾಕಿದ ಸಂಸ್ಥೆಗಳು ಇಂದು ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಹೊಂದಿರುವ ಸ್ಥಾನಮಾನ ಹಾಗೂ ಅವರಿದ್ದ ಕಾಲದಲ್ಲಿ ಈ ಪ್ರದೇಶಕ್ಕೆ ದೇಶಮಟ್ಟದಲ್ಲಿದ್ದ ಸ್ಥಾನಮಾನ – ಇವಿಷ್ಟನ್ನು ತುಲನೆ ಮಾಡಿದರೆ  ಮೇಲಿನ ಹೇಳಿಕೆಗಳು ಮತ್ತು ಡಾ| ಪೈಯವರ ವ್ಯಕ್ತಿತ್ವದ ಮಹತ್ವ  ಕಲ್ಪನೆಗೆ ನಿಲುಕುತ್ತದೆ. ತೋನ್ಸೆ ಮಾಧವ ಅನಂತ ಪೈ (ಟಿಎಂಎ ಪೈ) ಅವರ ಜನನವಾದದ್ದು 1898ರ ಎಪ್ರಿಲ್‌ 30ರಂದು ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ. ಎಪ್ರಿಲ್‌ 30 ಟಿಎಂಎ ಪೈ ಅವರ 123ನೇ ಜನ್ಮದಿನ. ಅವರು ಜನಿಸಿದ, ಬದುಕಿದ್ದ ಕಾಲಕ್ಕೆ ಉಡುಪಿ-ಮಣಿಪಾಲ ಒಂದು ಪುಟ್ಟ ಊರು; ದೇಶ ಮಟ್ಟದಲ್ಲಿ ಉಡುಪಿ ಎಂದರೆ ಶ್ರೀಕೃಷ್ಣ ಮಠ ಎಂದಷ್ಟೇ ತಿಳಿವಳಿಕೆ ಇದ್ದ ಕಾಲಘಟ್ಟ.

ಭಿನ್ನ ದಾರಿಯಲ್ಲಿ ನಡೆದರು : ಡಾ| ಟಿಎಂಎ ಪೈ ಅವರು ಸ್ಥಳೀಯ ಸಮಸ್ಯೆ ಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಪರಿಹಾರ ವನ್ನು ಕಂಡುಕೊಳ್ಳಲು ನಿರಂತರ ಪ್ರಯತ್ನಶೀಲ ರಾಗಿ ಯಶಸ್ಸನ್ನು ಸಾಧಿಸಿದ್ದರು. ಜನಸೇವೆ ಯಲ್ಲೂ ಇವರ ಈ ಮನೋಧೋರಣೆಯೇ ಪ್ರೇರಣೆಯಾಯಿತು. ಅಂದಿನ ದಿನಗಳಲ್ಲಿ ಜನರನ್ನು ಕಾಡುತ್ತಿದ್ದ ಮೂರು ಮುಖ್ಯ ಸಮಸ್ಯೆ ಗಳಾದ ಅನಕ್ಷರತೆ, ಅನಾರೋಗ್ಯ ಮತ್ತು ಬಡತನ ಗಳನ್ನು ಶಿಕ್ಷಣ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುವುದರಿಂದ ನಿವಾರಿಸಬಹುದು ಎಂಬುದು ಅವರ ಪ್ರತಿಪಾದನೆಯಾಗಿತ್ತು.

Advertisement

ಪದ್ಮಶ್ರೀ ಟಿ.ಎಂ.ಎ. ಪೈ ಅವರು ಸಮು ದಾಯದ ನಾಯಕರಾಗಿದ್ದರು. ಪ್ರತಿಫ‌ಲಾಪೇಕ್ಷೆ ಇಲ್ಲದೆ ಮನು ಕುಲದ ಒಳಿತಿಗಾಗಿ ಬದ್ಧತೆಯಿಂದ ಸೇವೆ ಸಲ್ಲಿಸುವುದರ ಬಗ್ಗೆ ಅಚಲವಾದ ನಂಬಿಕೆ ಇರಿಸಿದ್ದರು. ತಮ್ಮ ಸಾಮರ್ಥ್ಯವನ್ನು ಸಂಪೂರ್ಣ ವಾಗಿ ಬಳಸಿಕೊಂಡು ಯಾವುದೇ ಕಾರ್ಯವನ್ನು ನಿಷ್ಠೆಯಿಂದ ಪೂರ್ಣಗೊಳಿಸಿದರೆ ಯಶಸ್ಸು ಲಭಿಸುತ್ತದೆ ಎಂದು ಬಲವಾಗಿ ನಂಬಿದ್ದರು. ಶೈಕ್ಷಣಿಕ ವ್ಯವಸ್ಥೆಗಳ ಸುಧಾರಣೆಗೆ ತಮ್ಮ ಸಂಪೂರ್ಣ ಬದ್ಧತೆಯನ್ನು ತೋರ್ಪಡಿಸಿದರು. ತಮ್ಮ ನಂಬಿಕೆ ಮತ್ತು ಅಚಲ ಶ್ರದ್ಧೆಯ ಫ‌ಲವಾಗಿಯೇ ಆ ಕಾಲದಲ್ಲಿ ಅರಣ್ಯ ಮತ್ತು ಗುಡ್ಡಗಳಿಂದ ಆವೃತ್ತವಾಗಿದ್ದ ಮಣಿಪಾಲದ ಸುಮಾರು 107 ಎಕ್ರೆ ಜಾಗವನ್ನು “ಶೈಕ್ಷಣಿಕ ತಾಣ’ವಾಗಿ ಪರಿವರ್ತಿಸಿದರು.

ಮೂಲ ಶಿಕ್ಷಣ, ಉನ್ನತ ಶಿಕ್ಷಣದ ಕ್ರಾಂತಿ :

ಮಣಿಪಾಲ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನರ್ಸರಿ ಮತ್ತು ಪ್ರಾಥಮಿಕ ಶಾಲೆ ಗಳನ್ನು ತೆರೆಯುವ ಮೂಲಕ ಈ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಿಸಿದ ಡಾ| ಟಿಎಂಎ ಪೈ ಅವರು ಆ ಬಳಿಕ ಹಂತಹಂತವಾಗಿ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಿದರು. 1942ರಲ್ಲಿ ಅಕಾ ಡೆಮಿ ಆಫ್ ಜನರಲ್‌ ಎಜುಕೇಶನ್‌ ಆರಂಭಿಸಿ ವೃತ್ತಿ ತರಬೇತಿ ಕೋರ್ಸ್‌ಗಳನ್ನು ಪರಿಚಯಿಸಿ ದರು. ಇದರಿಂದಾಗಿ ಮಾಧ್ಯಮಿಕ ಪೂರೈಸಿದ ಬಳಿಕ ಶಿಕ್ಷಣವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳು ಈ ವೃತ್ತಿಪರ ಕೋರ್ಸ್‌ಗಳಲ್ಲಿ ತರಬೇತಿ ಪಡೆದು ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.

ಡಾ| ಪೈಯವರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ತೆರೆದು ಈ ಪ್ರದೇಶಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿ ಕೊಂಡರು. 1949ರಲ್ಲಿ ಉಡುಪಿಯಲ್ಲಿ ಆರಂಭ ವಾದ ಮಹಾತ್ಮಾ ಗಾಂಧಿ ಮೆಮೋರಿಯಲ್‌ ಕಾಲೇಜು ಇವುಗಳಲ್ಲಿ ಮೊದಲನೆಯದು. ಆ ಬಳಿಕ ಕುಂದಾಪುರ, ಕಾರ್ಕಳ, ಮೂಲ್ಕಿ, ಮೂಡು ಬಿದಿರೆ ಮತ್ತು ಶೃಂಗೇರಿಯಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳನ್ನು ತೆರೆದರು.

ಸ್ಥಳೀಯ ಮುಖಂಡರು ಮತ್ತು ಜನರ ಸಹಕಾರವನ್ನು ಪಡೆದುಕೊಂಡು ಶಿಕ್ಷಣ ಸಂಸ್ಥೆ ಗಳನ್ನು ತೆರೆದು ಅವುಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಟಿ.ಎಂ.ಎ. ಪೈ ಅವರದ್ದು. ಜನರ ಪಾಲ್ಗೊಳ್ಳುವಿಕೆ ಮತ್ತು ಸಹಕಾರದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯ ಎಂಬುದನ್ನೂ ಅವರು ಸಾಬೀತು ಪಡಿಸಿದರು. ಇದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವರಿಗೆ ಪ್ರೇರಣೆಯಾಯಿತು. ಜತೆಗೆ ಹಲವು ಔದ್ಯೋಗಿಕ ಸಂಸ್ಥೆಗಳ ನೆಲೆಯಾದ ಮಣಿಪಾಲ್‌ ಗ್ರೂಪ್‌ನ ಆಲೋಚನೆಗೆ ಸ್ಪೂರ್ತಿ ಯಾದ ಕೀರ್ತಿಯೂ ಇವರದ್ದು.

ಭದ್ರ ಬುನಾದಿಯ ಮೇಲೆ ಬೆಳೆದ ಹೆಮ್ಮರ :

ಡಾ| ಟಿಎಂಎ ಪೈ ಅವರು 1942ರಲ್ಲಿ ಆರಂಭಿಸಿದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಪ್ರಾಯೋಜಕತ್ವದಲ್ಲಿ ಸಾರ್ವಜನಿಕರ ಬೆಂಬಲ ಮತ್ತು ಸಹಕಾರದಿಂದ ಹಲವಾರು ಪ್ರೌಢಶಾಲೆಗಳು, ಪ್ರಥಮ ದರ್ಜೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು ಮತ್ತು 1953ರಲ್ಲಿ ಮೆಡಿಕಲ್‌ ಕಾಲೇಜ್‌ ಆರಂಭಿಸಿದರು.  ಈ ಮೂಲಕ ಮಣಿಪಾಲದಲ್ಲಿ ವಿಶ್ವವಿದ್ಯಾನಿಲಯ ಆರಂಭಕ್ಕೆ ಭದ್ರ ಬುನಾದಿ ಹಾಕಿದರು. ಅವರ ಪುತ್ರ ಡಾ|ರಾಮದಾಸ್‌ ಎಂ. ಪೈ ಅವರು ತಂದೆಯ ಪರಂಪರೆಯನ್ನು ಮುಂದುವರಿಸಿ 1993ರಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಸ್ಥಾಪಿಸಿದರು.

ಡಾ|ರಾಮದಾಸ್‌ ಪೈ ಅವರು ಮಣಿಪಾಲವನ್ನು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಕೇಂದ್ರವಾಗಿ ಬೆಳೆಸಿದರಲ್ಲದೆ ಮಣಿಪಾಲ ಸಮೂಹ ಸಂಸ್ಥೆಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟರು. ರಾಮದಾಸ ಪೈ ಅವರ ಪುತ್ರ ಡಾ| ರಂಜನ್‌ ಆರ್‌. ಪೈ ಅವರು ಈಗ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ಆರೋಗ್ಯ ವಿಮಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಡಾ|ಟಿ.ಎಂ.ಎ. ಪೈ ಅವರ ಕುಟುಂಬದ ಮೂರನೇ ಪೀಳಿಗೆಯನ್ನು ಪ್ರತಿನಿಧಿಸುತ್ತಿರುವ ಡಾ| ರಂಜನ್‌ ಪೈ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ಗಳಿಸಿದ್ದಾರೆ. ಬದ್ಧತೆ, ಪರಿಶ್ರಮ, ಸಮಗ್ರತೆ ಮತ್ತು ನಮ್ರತೆಯ ಉನ್ನತ ಮೌಲ್ಯಗಳು ಈ ಕುಟಂಬ ಮತ್ತು ವಿಶ್ವವಿದ್ಯಾನಿಲಯವನ್ನು ತನ್ನದೇ ಆದ ಹಾದಿಯಲ್ಲಿ ಮುನ್ನಡೆಸುತ್ತಿವೆ.

ನೀವು ಜನಸಾಮಾನ್ಯನಿಗೆ ನೆರವು  ನೀಡಿದಲ್ಲಿ ಆತ ನಿಮ್ಮ ಮೇಲೆ ನಂಬಿಕೆ, ವಿಶ್ವಾಸವಿರಿಸುತ್ತಾನೆ. ಇದು ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ಬಡತನ, ಕಾಯಿಲೆ ಮತ್ತು ಅಜ್ಞಾನ ಭಾರತೀಯ ಸಮಾಜದ ಮೂಲ ಸಮಸ್ಯೆಗಳಾಗಿದ್ದು, ಎಲ್ಲರಿಗೂ ಶಿಕ್ಷಣ  ಮತ್ತು ಆರೋಗ್ಯ  ಸೇವೆ ನೀಡಿದರೆ ಈ ಸಮಸ್ಯೆಗಳಿಂದ ಸಮಾಜವನ್ನು ಯಶಸ್ವಿಯಾಗಿ ಪಾರು ಮಾಡಬಹುದು. ಡಾ|ಟಿಎಂಎ ಪೈ

ನಮ್ಮ ಪರಂಪರೆ ಮತ್ತು ಉನ್ನತ  ಮೌಲ್ಯಗಳನ್ನು ಗಮನದಲ್ಲಿರಿಸಿಕೊಂಡು ಮುನ್ನಡೆಯುವ ಮತ್ತು ಡಾ| ಟಿಎಂಎ ಪೈ ಅವರ ಹಾದಿಯಲ್ಲಿ ಸಾಗುವ ಗುರಿಯನ್ನು ಹೊಂದಿದ್ದೇವೆ. ಡಾ| ರಂಜನ್‌ ಪೈ, ಮಾಹೆಯ ಅಧ್ಯಕ್ಷ ಮತ್ತು ಮಣಿಪಾಲ್‌  ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ಚೇರ್‌ಮನ್‌

ಡಾ|ಟಿಎಂಎ ಪೈ ಅವರು ನಮ್ಮ ಪರಂಪರೆಯ  ಬಗೆಗೆ ಬಲವಾದ ನಂಬಿಕೆ ಇರಿಸಿಕೊಂಡಿದ್ದರು. ಇದುವೇ ಮಣಿಪಾಲ್‌ ಗ್ರೂಪ್‌ನ ಶಕ್ತಿ.   -ಡಾ| ಎಚ್‌.ಎಸ್‌. ಬಲ್ಲಾಳ್‌,  ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌  ಎಜುಕೇಶನ್‌ಸಹ ಕುಲಾಧಿಪತಿ.

ವಿಶ್ವದ ಭೂಪಟದಲ್ಲಿ ಮಣಿಪಾಲವನ್ನು ಗುರುತಿಸುವಂತೆ ಮಾಡಿದ ಅವರ ಸಾಧನೆಯ ಬಗೆಗೆ ನಮಗೆ ಹೆಮ್ಮೆ ಇದೆ.  ಲೆ|ಜ| ಡಾ| ಎಂ.ಡಿ. ವೆಂಕಟೇಶ್‌,  ಮಣಿಪಾಲ ಅಕಾಡೆಮಿ ಆಫ್ ಹೈಯರ್‌  ಎಜುಕೇಶನ್‌ಕುಲಪತಿ

ಉದ್ಯಮಶೀಲತೆ, ಪ್ರಗತಿಪರ ದೃಷ್ಟಿಕೋನ, ಕೈಗೆತ್ತಿಕೊಂಡ ಯಾವುದೇ ಕೆಲಸ ಅಥವಾ ಯೋಜನೆ ಗಳನ್ನು ಅತ್ಯಂತ ಬದ್ಧತೆಯಿಂದ ಯಶಸ್ವಿಯಾಗಿ ಪೂರ್ಣಗೊಳಿಸುವುದು, ಸೋಲೊಪ್ಪಿಕೊಳ್ಳ ದಿರುವ ಛಲ – ಇವು ಡಾ|ಟಿಎಂಎ ಪೈ ಎಂಬ ಮಹಾನ್‌ ವ್ಯಕ್ತಿತ್ವದ ಪ್ರಧಾನ ಗುಣಗಳು. ಏನು ಸಾಧ್ಯ ಮತ್ತು ಯಾವುದು ಸಾಧ್ಯ ಎಂಬ ಬಗೆಗೆ ಅವರಲ್ಲಿನ ಖಚಿತ ದೃಷ್ಟಿಕೋನ, ಬೇರೆಯವರು ಅಸಾಧ್ಯ ಎಂದು ಕೈಚೆಲ್ಲಿದ ಹೊಸ  ಸಂಸ್ಥೆಗಳನ್ನು ಸ್ಥಾಪಿಸುವಲ್ಲಿನ ಧೈರ್ಯ ಮತ್ತು ಸೇವಾ ಮನೋಭಾವ ಅವರ ಯಶಸ್ಸಿನ ಪ್ರಮುಖ ಕಾರಣಗಳಾಗಿದ್ದವು. ಈ ಗುಣಗಳಿಂದಾಗಿಯೇ ಡಾ| ಟಿ.ಎಂ.ಎ. ಪೈ ಅವರು ಇನ್ನೂ ಜನಮಾನಸ ದಲ್ಲಿ ಹಚ್ಚಹಸುರಾಗಿಯೇ ಉಳಿದಿದ್ದಾರೆ.  ಟಿ. ಸತೀಶ್‌ ಯು. ಪೈ, ಚೇರ್‌ಮನ್‌, ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.

 

Advertisement

Udayavani is now on Telegram. Click here to join our channel and stay updated with the latest news.

Next