ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Dr Shiva Rajkumar) ಅಭಿನಯದ ʼಮಫ್ತಿʼ ಖ್ಯಾತಿಯ ನರ್ತನ್ (Narthan) ಆ್ಯಕ್ಷನ್ ಕಟ್ ಹೇಳಿರುವ ʼಭೈರತಿ ರಣಗಲ್ʼ (Bhairathi Ranagal) ಚಿತ್ರದ ಟ್ರೇಲರ್ (Trailer) ಮಂಗಳವಾರ (ನ.5ರಂದು) ರಿಲೀಸ್ ಆಗಿದೆ.
ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ʼಭೈರತಿ ರಣಗಲ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಸೌಂಡ್ ಮಾಡಿರುವ ʼಭೈರತಿ ರಣಗಲ್ʼ ನ ಟ್ರೇಲರ್ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಟ್ರೇಲರ್‌ನಲ್ಲಿ ಏನಿದೆ?: ಬರಡು ಭೂಮಿಯಂತಿರುವ ಜಾಗದಲ್ಲಿ ನೀರಿನ ಟ್ಯಾಂಕರ್‌ವೊಂದು ಬಿದ್ದಿದ್ದು, ಊರಿನ ಜನರೆಲ್ಲ ನೀರಿಗಾಗಿ ಹಾತೊರೆದಿದ್ದಾರೆ. ಅಲ್ಲೊಬ್ಬ ಹುಡುಗ “ಬರೀ ಒಂದು ವೈಟ್ ಪೇಪರ್ ಮೇಲೆ ನೀರು ಬೇಕು ಅಂಥ ಬರೆದುಕೊಟ್ರೆ ನೀರು ಕೊಡ್ತಾರಾ ಅಪ್ಪ..” ಎಂದು ಪ್ರಶ್ನೆ ಮಾಡಿರುವುದನ್ನು ತೋರಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬದವರ ಜಾಗದ ಮೇಲೆ ಆಧುನಿಕತೆ ಎಂಬ ಅಭಿವೃದ್ಧಿ ಸವಾರಿ ಮಾಡುವಂತೆ ದೊಡ್ಡ ದೊಡ್ಡ ಮಂದಿ ಊರಿಗೆ ಬಂದು ಭೂಮಿಯನ್ನು ಕಿತ್ತುಕೊಂಡು ಬಿಲ್ಡಿಂಗ್ ಕಟ್ಟುವಂತೆ ದೃಶ್ಯವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ತಮ್ಮವರ ಜಾಗವನ್ನು ಉಳ್ಳವರು ಕಿತ್ತುಕೊಳ್ಳುವಾಗ ಅದನ್ನು ರಕ್ಷಿಸಲು ಬರುವವನೇ ʼಭೈರತಿ ರಣಗಲ್ʼ ಎನ್ನುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಶಿವರಾಜ್ ಕುಮಾರ್ ತಮ್ಮವರ ತಂಟೆಗೆ ಬಂದರೆ ಮಚ್ಚು ಹಿಡಿಯುವುದಕ್ಕೂ ಸಿದ್ಧವೆನ್ನುವ ಮಾಸ್ ಶೇಡ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಜನರಿಗೆಗೋಸ್ಕರ ನಾನು ಯಾರನ್ನು ಬೇಕಾದ್ರು ಕಳೆದುಕೊಳ್ಳುತ್ತೇನೆ ಆದರೆ ಜನರನ್ನೇ ಕಳೆದುಕೊಳ್ಳುವುದಕ್ಕೆ ಇಷ್ಟಪಡಲ್ಲ.. ಇನ್ಮೇಲಿನಿಂದ ರೋಣಪುರದಲ್ಲಿರುವುದು ಸರ್ವೆ ಕಲ್ಲುಗಳಲ್ಲ, ರಣಗಲ್ ಸಾಮ್ರಾಜ್ಯದ ಮೈಲಿಗಲ್ಲುಗಳು.. ಎನ್ನುವ ಪವರ್ ಫುಲ್ ಡೈಲಾಗ್ಸ್ ಟ್ರೇಲರ್‌ನಲ್ಲಿದೆ.
ವಕೀಲನ ಪಾತ್ರ ಶಿವರಾಜ್ ಕುಮಾರ್ ಇಲ್ಲಿ ಕಾಣಿಸಿಕೊಂಡಿದ್ದು, ನ್ಯಾಯಕ್ಕಾಗಿ ಕಪ್ಪು ಕೋಟ್ ತೊಟ್ಟಿದ್ದಾರೆ. ಅನ್ಯಾಯ ಮಾಡಿದವರ ವಿರುದ್ಧ ಮಚ್ಚು ಹಿಡಿದು ಬುದ್ಧಿ ಕಲಿಸಿದ್ದಾರೆ.
ದೇವರಾಜ್, ಅವಿನಾಶ್,ರಾಹುಲ್ ಭೋಸ್, ರುಕ್ಮಿಣಿ ವಸಂತ್ ಅವರ ಪಾತ್ರದ ಝಲಕ್ ತೋರಿಸಲಾಗಿದೆ.
ಇದೇ ನವೆಂಬರ್ 15 ರಂದು ಸಿನಿಮಾ ರಿಲೀಸ್ ಆಗಲಿದ್ದು, ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ಭೈರತಿ ರಣಗಲ್ ಚಿತ್ರಕ್ಕಿದೆ.