ಮಣಿಪಾಲ: ಹೊಸದಿಲ್ಲಿಯ ಸಂಗೀತ ನಾಟಕ ಅಕಾಡೆಮಿಯಿಂದ ದೇಶಾದ್ಯಂತ ಅಮೃತ ಯುವ ಕಲೋತ್ಸವ ನಡೆಸುವ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ, ವಿಕಸಿತ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಕಲಾವಿದರು ದಿಲ್ಲಿಗೆ ಬರಬೇಕಾಗಿಲ್ಲ. ಅಕಾಡೆಮಿಯೇ ಹಳ್ಳಿ (ಗಲ್ಲಿ)ಗೆ ಬರಲಿದೆ ಎಂದು ಅಕಾಡೆಮಿ ಅಧ್ಯಕ್ಷೆಯೂ ಆದ ಡಬ್ಲ್ಯೂ-20 ಶೃಂಗಸಭೆ ಅಧ್ಯಕ್ಷೆ ಡಾ| ಸಂಧ್ಯಾ ಪುರೇಚ ಹೇಳಿದರು.
ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಕಲಾವಿದರು ಮುಕ್ತವಾಗಿ ನೋಂದಣಿ ಮಾಡಿಕೊಳ್ಳಬಹುದು. ಅನಂತರ ಪರಿಶೀಲಿಸಿ ಅವಕಾಶ ಒದಗಿಸುತ್ತೇವೆ. ಈಗಾಗಲೇ ಚೆನ್ನೈ, ಅಸ್ಸಾಂ, ಮಧ್ಯಪ್ರದೇಶ, ಜಮ್ಮು, ಮಹಾರಾಷ್ಟ್ರ ಹಾಗೂ ಲಕ್ನೋದಲ್ಲಿ ಕಾರ್ಯಕ್ರಮ ಮುಗಿಸಿ ಮಣಿಪಾಲಕ್ಕೆ ಬಂದಿದ್ದೇವೆ. ಫೆ. 1ರ ವರೆಗೂ ಇಲ್ಲಿ ವಿವಿಧ ಸಾಂಸ್ಕೃತಿಕ ಕಲೋತ್ಸವ ನಡೆಯಲಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವುದರಿಂದ 75 ಕಡೆಗಳಲ್ಲಿ ಇದನ್ನು ನಡೆಸಲಿದ್ದೇವೆ ಎಂದು ಸೋಮವಾರ ಮಣಿಪಾಲದ ಮಧುವನ್ ಸೆರಾಯ್ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರ್ಷಪೂರ್ತಿ ಕಾರ್ಯಕ್ರಮ
ಜಿ-20 ಶೃಂಗಸಭೆಯ ಭಾಗವಾಗಿ ವಿವಿಧ ಆಯಾಮ ರೂಪಿಸಲಾಗಿದೆ. ಅದರಲ್ಲಿ ಡಬ್ಲ್ಯೂ-20 (ಮಹಿಳಾ-20)ಒಂದಾಗಿದೆ. ಮಹಿಳಾ ಉದ್ಯಮಶೀಲತೆ, ಗ್ರಾಮೀಣ ನಾಯಕತ್ವ, ಲಿಂಗ ಸಮಾನತೆ, ಶಿಕ್ಷಣ- ಕೌಶಲತೆ ಹಾಗೂ ಶುದ್ಧ ಪರಿಸರ ಹೀಗೆ ಐದು ಪ್ರಮುಖ ವಿಷಯದ ಆಧಾರದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಮತ್ತು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಮಾಹೆಯೊಂದಿಗೆ “ಜ್ಞಾನದ ಬಲವರ್ಧನೆ’ಯ ವಿಷಯವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಭಾಗವಾಗಿ ಮಾಹೆ ವಿ.ವಿ.ಯ ಬೆಂಗಳೂರು ಕ್ಯಾಂಪಸ್‌ನಲ್ಲಿ ದೇಶದ ವಿ.ವಿ.ಗಳ ಮಹಿಳಾ ಕುಲಪತಿಗಳ ಸಮ್ಮೇಳನವನ್ನು ಜೂನ್ ನಲ್ಲಿ ನಡೆಸಲು ಯೋಚಿಸುತ್ತಿದ್ದೇವೆ. ಹಲವು ಕಾರ್ಯಕ್ರಮಗಳನ್ನು ಮಾಹೆ ವಿವಿಯ ಸಹಯೋಗದಲ್ಲಿ ನಡೆಸಲಿದ್ದೇವೆ ಎಂದರು.