ದಾವಣಗೆರೆ: ಅತ್ಯಂತ ವೈಜ್ಞಾನಿಕ ಆಚರಣೆಯ ಹಿನ್ನೆಲೆ ಹೊಂದಿರುವ ಬಸವಧರ್ಮ ಪ್ರಚಾರದಂತೆ ಕಾರ್ಯರೂಪಕ್ಕೂ ಬರುವಂತಾಗಬೇಕು ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿ ಅಭಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಡಾ| ಸದ್ಯೋಜಾತ ಹಿರೇಮಠದಲ್ಲಿ ನಡೆದ ಡಾ| ಸದ್ಯೋಜಾತ ಶಿವಾಚಾರ್ಯರ 9ನೇ ವರ್ಷದ ಸಂಸ್ಮರಣೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಡಾ| ಸದ್ಯೋಜಾತ ಶಿವಾಚಾರ್ಯರು ಬಸವ ಧರ್ಮದ ಆಚರಣೆ ವೈಜ್ಞಾನಿಕವಾದುದು ಎಂಬುದನ್ನು ಸದಾ ಹೇಳುತ್ತಿದ್ದರು. ಅವರು ಬಸವಧರ್ಮ ಪ್ರಚಾರ ಮಾಡುವಂತೆಯೇ ಪ್ರಾಯೋಗಿಕವಾಗಿಯೂ ಜೀವನದಲ್ಲಿ ಆಚರಿಸುತ್ತಿದ್ದರು. ಅಂತಹ ರೀತಿಯಲ್ಲಿ ಬಸವ ಧರ್ಮದ ಪ್ರಚಾರ ನಡೆಸಬೇಕು ಎಂದರು.
ಬಸವಧರ್ಮದಲ್ಲಿ ವಿಭೂತಿ, ಕುಂಕುಮ ಧಾರಣೆಗೆ ಒಂದು ಮಹತ್ವದ ವೈಜ್ಞಾನಿಕ ಹಿನ್ನೆಲೆ ಇದೆ ಎನ್ನುತ್ತಿದ್ದ ಡಾ| ಸದ್ಯೋಜಾತರು ನಾವೆಲ್ಲರೂ ಚಾಚೂ ತಪ್ಪದೆ ಪಾಲಿಸುವಂತೆ ಪ್ರೇರಣೆ ನೀಡುತ್ತಿದ್ದರು. ಈಗ ಕಾಲ ಬದಲಾಗಿದೆ. ಹಿಂದಿನಂತೆ ಒಟ್ಟು ಕುಟುಂಬವೇ ಇಲ್ಲ. ಹಿರಿಯರ ಮಾತುಗಳನ್ನು ಕಿರಿಯರ ಕೇಳದ ವಾತಾವರಣದ ನಡುವೆಯೂ ಅತ್ಯಂತ ಪ್ರಾಯೋಗಿಕವಾಗಿ ಬಸವಧರ್ಮದ ಪ್ರಚಾರ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.
ಹಿರೇಮಠದ ಪಟ್ಟಾಧ್ಯಕ್ಷ, ಕಾಲೇಜು ಪ್ರಾಚಾರ್ಯ… ಹೀಗೆ ಡಾ| ಸದ್ಯೋಜಾತ ಶಿವಾಚಾರ್ಯರು ಎಲ್ಲವೂ ಆಗಿದ್ದರು. ಹಿರೇಮಠಕ್ಕೆ ಬಂದ ಅನೇಕ ಭಕ್ತರಿಗೆ, ಶಿವಾಚಾರ್ಯರಿಗೆ ಸ್ವತಃ ತಾವೇ ಅಡುಗೆ ಸಿದ್ಧಪಡಿಸಿ, ಉಣ ಬಡಿಸುತ್ತಿದ್ದಂತಹ ಮಾತೃ ಹೃದಯಿ. ಅನೇಕ ಶಿವಾಚಾರ್ಯರಿಗೆ ಹಿರೇಮಠ ತವರುಮನೆಯಾಗಿತ್ತು.
ಸ್ವಾಮೀಜಿಯಾದವರು ಅಡುಗೆ ಮಾಡಿ, ಬಡಿಸುವುದೇ ಎಂದು ಕೇಳಿದಾಗ, ಅತಿಥಿಗಳ ಸೇವೆ ತಪ್ಪಲ್ಲ ಎನ್ನುತ್ತಿದ್ದಂತಹ ಸ್ವಾಮಿಗಳನ್ನು ಈಗ ಕಾಣಲಿಕ್ಕೆ ಆಗದು ಎಂದು ತಿಳಿಸಿದರು. ಯಾವುದೇ ಜಾತಿ, ಮತ ಎನ್ನದೆ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಅನೇಕ ಸಂದರ್ಭದಲ್ಲಿ ಆಟೋದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದುಂಟು.
ಭಕ್ತರು ಕಾರು ಕೊಡಿಸಲಿಕ್ಕೆ ಮುಂದಾದಾಗ, ಭಕ್ತರ ಕಾರುಗಳೆಲ್ಲಾ ತಮ್ಮವೇ ಎನ್ನುತ್ತಿದ್ದರು. ಅನೇಕ ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದರು. ಎಂದಿಗೂ ಕಾಣಿಕೆ ಪಡೆದವರಲ್ಲ ಎದು ಸ್ಮರಿಸಿದರು. ಹಿರಿಯ ಸಹಕಾರಿ ಧುರೀಣ ಎನ್.ಎಂ.ಜೆ.ಬಿ. ಆರಾಧ್ಯ ಅಧ್ಯಕ್ಷತೆ, ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ| ಸ್ವಾಮಿ ತ್ರಿಭುವಾನಂದ ಸ್ವಾಗತಿಸಿದರು.