ಧಾರವಾಡ: ಡಾ|ದ.ರಾ.ಬೇಂದ್ರೆ ರಾಷ್ಟ್ರೀ ಯ ಸ್ಮಾರಕ ಟ್ರಸ್ಟ್ ನೀಡುವ 2019ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ ಡಾ| ಎಸ್.ಎಲ್.ಭೈರಪ್ಪ ಭಾಜನ ರಾಗಿದ್ದಾರೆ. ಹಿರಿಯ ಸಾಹಿತಿ ಡಾ|ಗುರುಲಿಂಗ ಕಾಪಸೆ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಡಾ|ಭೈರಪ್ಪ ಅವರ ಹೆಸರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ಒಂದು ಲಕ್ಷ ರೂ.ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಬೇಂದ್ರೆ ಅವರ 125ನೇ ಜನ್ಮದಿನದ ಅಂಗವಾಗಿ ಜ.31ರಂದು ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಸಂಜೆ ಐದು ಗಂಟೆಗೆ ನಡೆಯುವ ಸಮಾರಂಭದಲ್ಲಿ ಹಿರಿಯ ವಿಮರ್ಶಕ ಡಾ|ಕಾಪಸೆ ಪ್ರಶಸ್ತಿ ಪ್ರದಾನ ಮಾಡಲಿ ದ್ದಾರೆ. ಪ್ರೊ|ತೇಜಸ್ವಿ ಕಟ್ಟಿಮನಿ ಹಾಗೂ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿಂದ ಭೈರಪ್ಪ ಅವರ ಜೊತೆಗೆ ಸಾಹಿತ್ಯ ಸಂವಾದ ಸಹ ಏರ್ಪಡಿಸಲಾಗಿದೆ. ಅವರ ಎಲ್ಲ ಕೃತಿಗಳ ಪ್ರದರ್ಶನವೂ ಇರಲಿದೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಡಾ|ಡಿ.ಎಂ.ಹಿರೇಮಠ, ಈ ವರ್ಷದಿಂದ ಪ್ರಶಸ್ತಿಯ ಮೊತ್ತವನ್ನು ರಾಜ್ಯ ಸರ್ಕಾರ 10 ಸಾವಿರಕ್ಕೆ ಇಳಿಸಿದೆ. ಆದರೂ ಸಹ ಮೊದಲಿನಂತೆ ಒಂದು ಲಕ್ಷ ರೂ. ಮೊತ್ತವನ್ನೇ ನೀಡಲಾಗುತ್ತಿದೆ. ಬೇಂದ್ರೆ ಕುಟುಂಬದವರು 1.24 ಲಕ್ಷ ರೂ.ನಿಧಿಯನ್ನು 2,000ರಲ್ಲಿ ಠೇವಣಿ ಇಟ್ಟಿದ್ದರು. ಇದೀಗ ಆ ಹಣ ಬಡ್ಡಿ ಸಮೇತ 3.90 ಲಕ್ಷವಾಗಿದ್ದು, ಈ ಪೈಕಿ 90 ಸಾವಿರ ಹಾಗೂ ಸರ್ಕಾರದ 10 ಸಾವಿರ ಸೇರಿ ಒಟ್ಟು ಒಂದು ಲಕ್ಷ ರೂ.ಪ್ರಶಸ್ತಿ ಮೊತ್ತ ನೀಡಲು ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕಡಿಮೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಠೇವಣಿ ಹಣ ಬಳಸಿ ಪ್ರಶಸ್ತಿ ಮೊತ್ತ ನೀಡಲಾಗುತ್ತಿದೆ. ಹೆಚ್ಚಿನ ಅನುದಾನ ನೀಡುವಂತೆ ಕೆಲ ದಿನಗಳ ಹಿಂದೆ ಸಚಿವರು ನಡೆಸಿದ ಸಭೆಯಲ್ಲಿ ಮನವಿ ಮಾಡಲಾಗಿದೆ. ಅನುದಾನ ನೀಡಲಿದ್ದಾರೆ ಎಂಬ ಭರವಸೆಯೂ ಇದೆ ಎಂದರು. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಟ್ರಸ್ಟ್ ಸದಸ್ಯ ರಾಜೇಂದ್ರ ನಾಯಕ, ಪ್ರಕಾಶ ಬಾಳಿಕಾಯಿ ಇದ್ದರು.
ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವಂತೆ ವರಕವಿ ಡಾ| ದ.ರಾ.ಬೇಂದ್ರೆ ಅವರ ಜನ್ಮದಿನವನ್ನು ಕವಿ ದಿನವನ್ನಾಗಿ ಆಚರಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಬಾರಿ ಬೇಂದ್ರೆ ಅವರ 125ನೇ ಜನ್ಮದಿನ ಇರುವ ಕಾರಣಕ್ಕೆ ಈ ವರ್ಷವೇ ಕವಿ ದಿನ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
-ಡಾ| ಡಿ.ಎಂ.ಹಿರೇಮಠ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ