ಬೆಂಗಳೂರು: ಅಲ್ಲಿ ನಿತ್ಯವೂ ನೂರಾರು ಮೀಟರ್ ಉದ್ದದ ಸಾಲು. ಕನಿಷ್ಠ 2 ಸಾವಿರ ಮಂದಿ ಅಲ್ಲಿಗೆ ನಿತ್ಯವೂ ಭೇಟಿ ನೀಡುತ್ತಾರೆ! ಎಲ್ಲರ ಬಾಯಿಯಲ್ಲೂ ಒಂದೇ ಜಪ, “ರಮಣ ರಮಣ’!
ಅದ್ಯಾವ ದೇವರು “ರಮಣ’? ಅಲ್ಲೇನು ಪವಾಡ ನಡೆಯುತ್ತೆ? ಎಂಬ ಪ್ರಶ್ನೆ ನಿಮ್ಮೊಳಗೆ ಏಳುವುದು ಸಹಜ. ಆದರೆ, ಇದು ಪವಾಡ ಮಾಡುವ ದೇವರ ಸುದ್ದಿ ಅಲ್ಲ. ಎಂಬಿಬಿಎಸ್ ಓದಿ, ರೋಗಿಗಳ ಕಣ್ಣಿಗೆ ದೇವರಾದ ವೈದ್ಯರ ಕತೆ. ಅವರು ಡಾ. ಬಿ. ರಮಣರಾವ್! ಅವರ ಕ್ಲಿನಿಕ್ಕಲ್ಲಿ ಕಾಣುವುದು ಆರೋಗ್ಯದ ಬೆಳಕು.
ಸತತ 44 ವರ್ಷಗಳಿಂದ ತಮ್ಮ ಕ್ಲಿನಿಕ್ ಅನ್ನು ಉಚಿತವಾಗಿ ನಡೆಸುತ್ತಿರುವ ಇವರು, ನಿತ್ಯವೂ ಸಹಸ್ರಾರು ಬಡವರ ಆರೋಗ್ಯ ವಿಚಾರಿಸುತ್ತಾರೆ. ಎಂಬಿಬಿಎಸ್ ಪದವಿ ಪಡೆದ ಮರುದಿನದಿಂದಲೇ ಈ ಸೇವೆಯನ್ನು ಪ್ರಾರಂಭಿಸಿರುವ ಇವರು, ನಾಲ್ಕು ದಶಕಗಳಲ್ಲಿ 20 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಜಗತ್ತಿನ ನಾನ್ ಸ್ಟಾಪ್ ಕ್ಲಿನಿಕ್ ಎಂಬ ಖ್ಯಾತಿ ಇವರ ಆಸ್ಪತ್ರೆಗಿದೆ.
ಡಾ. ರಮಣ ರಾವ್ ಮೂಲತಃ ಆಂಧ್ರಪ್ರದೇಶದವರು. 1973ರಲ್ಲಿ ಡಾಕ್ಟರ್ ಡಿಗ್ರಿ ಪಡೆದ ಇವರು ಅದೇ ವರ್ಷ, ಬೆಂಗಳೂರಿನಿಂದ 35 ಕಿ.ಮೀ. ದೂರದ ಟಿ. ಬೇಗೂರಿನಲ್ಲಿ ಬಡವರ ಸೇವೆಗಾಗಿ ಕ್ಲಿನಿಕ್ ಆರಂಭಿಸಿದರು. ದೀರ್ಘಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಉಚಿತ ಆಸ್ಪತ್ರೆ ಎಂದು (world’s longest-running free clinic) ಜಾಗತಿಕವಾಗಿ ಹೆಸರು ಮಾಡಿರುವ ಈ ಕ್ಲಿನಿಕ್, ಬಡವರ ಪಾಲಿಗೆ ಬೆಳಕಾಗಿದೆ. ಪ್ರತಿನಿತ್ಯ ಕನಿಷ್ಠಪಕ್ಷ 2 ಸಾವಿರ ರೋಗಿಗಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಲಕ್ಷಾಂತರ ರೂಪಾಯಿ ಹಣ ಪಾವತಿಸಿದರೂ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ, ಇಲ್ಲಿ ಯಾವ ರೋಗಿಯನ್ನೂ ಕಡೆಗಣಿಸುವುದಿಲ್ಲ ಎಂಬುದಕ್ಕೆ ಕ್ಲಿನಿಕ್‌ನ ಮುಂದಿನ ರೋಗಿಗಳ ಸಾಲೇ ಸಾಕ್ಷಿ. ಇಲ್ಲಿ ಎಲ್ಲರಿಗೂ ನಗುಮೊಗದ ಸೇವೆ ಲಭ್ಯ. ಕೇವಲ ಔಷಧ, ಚುಚ್ಚುಮದ್ದುಗಳಷ್ಟೇ ಅಲ್ಲದೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಹಲ್ಲು ಹಾಗೂ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಿಗೂ ಉಚಿತ ಚಿಕಿತ್ಸೆ ಸಿಗುತ್ತದೆ.
ಡಾ. ರಮಣ್ ರಾವ್ ಅವರ ಪತ್ನಿ ಹಾಗೂ ಮಕ್ಕಳು ಕೂಡ ವೈದ್ಯರಾಗಿದ್ದು, ಅವರ ಒಳ್ಳೆಯ ಕೆಲಸಗಳಿಗೆ ಕೈ ಜೋಡಿಸಿದ್ದಾರೆ. ಇಡೀ ಕುಟುಂಬ ಬಡವರ ಸೇವೆಗಾಗಿ ಟೊಂಕ ಕಟ್ಟಿ ನಿಂತಿರುವುದು ಶ್ಲಾಘನೀಯ. ರೋಗಿಗಳು ಸರದಿಯಲ್ಲಿ ನಿಂತು ಕಾಯುವಾಗ ಅವರಿಗೆ ಉಚಿತ ಊಟವನ್ನೂ ನೀಡಲಾಗುತ್ತದೆ. ಅವರ ಹಳೆಯ ರೋಗಿಗಳಲ್ಲಿ ಕೆಲವರು ಕ್ಲಿನಿಕ್‌ನಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ. ರಮಣ್ ಅವರ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.