ಕೆಂಗೇರಿ: ಶ್ರೀ ಭುವನೇಶ್ವರಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ, ವಳಗೇರಹಳ್ಳಿಯ ಶ್ರೀ ಮಯೂರ ಡಾ.ರಾಜ್ ಸೇನಾ ಸಮಿತಿ ಹಾಗೂ ಕಸ್ತೂರಿ ಡಾ.ರಾಜ್ ಕಟ್ಟೆ ವತಿಯಿಂದ ಕೆಂಗೇರಿ ಉಪನಗರದಲ್ಲಿ ನಟಸಾರ್ವಭೌಮ ಡಾ.ರಾಜಕುಮಾರ್‌ರವರ 90ನೇ ಹುಟ್ಟಹಬ್ಬ ಆಚರಿಸಲಾಯಿತು.
ಇಲ್ಲಿನ ಕುವೆಂಪು ರಸ್ತೆಯ ಡಾ.ರಾಜ್ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ, ಶ್ರೀ ಭುವನೇಶ್ವರಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಅನ್ನಸಂತರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ರ.ಆಂಜನಪ್ಪ, ಮುಖಂಡರಾದ ಮಂಜುನಾಥಯ್ಯ, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ಜೆ.ರಮೇಶ್, ಆನಂದ್ ಬಾಬು ಮತ್ತಿತರರು ಹಾಜರಿದ್ದರು.
ವಳಗೇರಹಳ್ಳಿಯ ಶ್ರೀ ಮಯೂರ ಡಾ.ರಾಜ್ ಸೇನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ, ಗ್ರಾಮದ ಹಿರಿಯ ಮುಖಂಡ ಎಂ.ರಾಮಸ್ವಾಮಿ ಅವರು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕನ್ನಡ ನಾಡು ಎಂದೂ ಮರೆಯಲಾರದ ಮೇರುನಟ ಡಾ.ರಾಜಕುಮಾರ್. ಜೀವನದ ಕಡೆಯವರೆಗೂ ತಮ್ಮದೇ ಆದರ್ಶಗಳನ್ನು ಪಾಲಿಸಿಕೊಂಡು ಬಂದ ಅವರು, ನಮಗೆಲ್ಲಾ ಮಾದರಿ ಎಂದರು.
ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಕದರಪ್ಪ ಮಾತನಾಡಿ, ಕನ್ನಡ ನೆಲ, ಜಲದ ಅಸ್ತಿತ್ವಕ್ಕೆ ಧಕ್ಕೆಯಾದಾಗ ಹೋರಾಟದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಡಾ.ರಾಜ್, ಹೋರಾಟಗಾರರಿಗೆ ಹುರುಪು ತುಂಬುತ್ತಿದ್ದರು ಎಂದು ಸ್ಮರಿಸಿದರು.
ಸಮಿತಿ ಅಧ್ಯಕ್ಷ ಲೋಕೇಶ್, ಗ್ರಾಮದ ಹಿರಿಯರಾದ ಶಿವನಂಜಪ್ಪ, ಮುನಿನರಸಪ್ಪ, ಅಶೋಕ್,ನಾಗಪ್ಪ, ವರದರಾಜು ಹಾಗೂ ಡಾ.ರಾಜ್ ಅಭಿಮಾನಿಗಳು ಭಾಗವಹಿದ್ದರು.
ಕೆಂಗೇರಿ ಉಪನಗರದ ಕಸ್ತೂರಿ ಡಾ.ರಾಜ್ ಕಟ್ಟೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ, ಅನ್ನಸಂತರ್ಪಣೆ ಮಾಡಲಾಯಿತು. ಅಧ್ಯಕ್ಷ ಶಿವಕುಮಾರ್, ಪಾಲಿಕೆ ಸದಸ್ಯ ವಿ.ವಿ.ಸತ್ಯನಾರಾಯಣ, ನವೀನ್ ಯಾದವ್, ಮತ್ತಿತರರು ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪì ಸಮರ್ಪಿಸಿದರು.