Advertisement

ಡಾ.ರಾಜ್‌ಕುಮಾರ್‌ ರಂಗಮಂದಿರ ಲೋಕಾರ್ಪಣೆ

02:58 PM Aug 16, 2022 | Team Udayavani |

ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಜಿಲ್ಲೆಯ ರಜತ ಮಹೋತ್ಸವದ ಸವಿನೆನಪಿ ನಲ್ಲಿ ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ನಿರ್ಮಾಣ ಮಾಡಲಾಗಿರುವ 7.55 ಕೋಟಿ ರೂ. ವೆಚ್ಚದ ವರನಟ ಡಾ. ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರವನ್ನು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೋಮವಾರ ಲೋಕಾರ್ಪಣೆಗೊಳಿಸಿದರು

Advertisement

ಜಿಲ್ಲೆಯ ಮೈಲಿಗಲ್ಲು: ಕನ್ನಡದ ಮೇರುನಟ, ಜಿಲ್ಲೆಯ ಹೆಮ್ಮೆಯ ಪುತ್ರ ಡಾ. ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ನಿರ್ಮಿಸಿರುವ ರಂಗಮಂದಿ ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ವಾತಂತ್ರÂದ ಅಮೃತ ಮಹೋತ್ಸವ ಹಾಗೂ ಜಿಲ್ಲೆ ರೂಪುಗೊಂಡು 25 ವರ್ಷಗಳನ್ನುಪೂರ್ಣಗೊಳಿಸುತ್ತಿರುವ ರಜತ ಮಹೋತ್ಸವದ ಅಮೃತ ಘಳಿಗೆಯಲ್ಲಿ ಡಾ. ರಾಜ್‌ ಕುಮಾರ್‌ ಅವರ ಹೆಸರಿನ ರಂಗಮಂದಿರ ಉದ್ಘಾಟನೆಯಾಗುತ್ತಿರುವುದು ಜಿಲ್ಲೆಯ ಮೈಲಿಗಲ್ಲು ಹಾಗೂ ಐತಿಹಾಸಿಕ ದಿನವೆಂದು ಬಣ್ಣಿಸಿದರು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಂಗಮಂದಿರವನ್ನು ಆ. 15ರಂದು ಉದ್ಘಾಟಿಸಲು ಅನುವಾಗುವಂತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೆ. ಅದರಂತೆ ಇಂದು ರಂಗಮಂದಿರ ಲೋಕಾರ್ಪಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಕಟ್ಟಡಗಳಾಗಲಿ ಬಹಳ ವರ್ಷಗಳಿಂದಲೂ ಪೂರ್ಣವಾಗದಿದ್ದರೆ ಬೇಸರವಾಗುತ್ತದೆ. ಹೀಗಾಗಿ ಯಾವುದೇ ಕಟ್ಟಡಗಳು ಪೂರ್ಣವಾಗಲು ತ್ವರಿತವಾಗಿ ಕ್ರಮ ಕೈಗೊಳ್ಳುವ ಸಂಬಂಧ ಅಧಿಕಾರಿಗಳು ಸಭೆ ನಡೆಸಬೇಕು ಎಂದು ಸಚಿವರು ತಿಳಿಸಿದರು.

ರಂಗಮಂದಿರ ತುಂಬಾ ಚೆನ್ನಾಗಿ ಹಾಗೂ ವ್ಯವಸ್ಥಿತವಾಗಿ ಮೂಡಿಬಂದಿದೆ. ರಂಗಮಂದಿರದ ಬಾಕಿ ಕಾಮಗಾರಿಗೂ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ರಾಜಕುಮಾರ್‌ ಸಾಧನೆ ಮುಂದಿನ  ಪೀಳಿಗೆಗೂ ತಿಳಿಸೋಣ: ಡಾ. ರಾಜ್‌ಕುಮಾರ್‌ ಅವರು ಚಾಮ ರಾಜನಗರ ಜಿಲ್ಲೆಯವರು ಎಂಬ ಹೆಮ್ಮೆ ನಮಗಿದೆ. ರಾಜ್‌ಕುಮಾರ್‌ ಅವರ ಕುಟುಂಬದ ಹಿನ್ನೆಲೆ, ಅವರು ನಡೆದು ಬಂದ ದಾರಿ, ಸಾಧನೆ ಕುರಿತು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸೋಣ. ಡಾ. ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ರಂಗಮಂದಿರದಲ್ಲಿ ರಾಜ್‌ ಕುಮಾರ್‌ ಕುಟುಂಬದವರನ್ನು ಸೇರಿಸಿ ಕೊಂಡು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದರು.

ವರನಟ ರಾಜ್‌ಕುಮಾರ್‌ ರಾಜ್ಯ, ರಾಷ್ಟ್ರದ ಸಂಪತ್ತು. ಅವರ ಪುತ್ರ ಪುನೀತ್‌ ರಾಷ್ಟ್ರಕ್ಕೆ ಹೆಮ್ಮೆ. ಜಿಲ್ಲೆಗೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗುವುದು. ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲಾಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡದಲ್ಲೇ ಸ್ಪರ್ಧಾತ್ಮಕ ಪರೀûಾ ಕೇಂದ್ರಗಳ ಕಟ್ಟಡ ಸಹ ನಿರ್ಮಾಣವಾಗುತ್ತಿದ್ದು, ಇದು ಸಹ ತ್ವರಿತವಾಗಿ ಪೂರ್ಣವಾಗಬೇಕಿದೆ. ಜಿಲ್ಲೆಯ ಅಭಿವೃದ್ಧಿ ಚಿಂತನೆಗಳಿಗೆ ಎಲ್ಲರೂ ಕೈಜೋಡಿಸಬೇಕಿದೆ. ಡಾ. ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಲೋಕಾರ್ಪಣೆಯಾಗಿರುವ ರಂಗಮಂದಿರ ಜಿಲ್ಲೆಯ ಕಲಾವಿದರಿಗೆ ಸದುಪಯೋಗವಾಗಲಿ ಎಂದು ಸೋಮಣ್ಣ ಆಶಿಸಿದರು.

Advertisement

ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಆಧ್ಯಕ್ಷ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಸಿ.ಎಂ. ಆಶಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರರಾಜು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ವಿನಯ್‌ಕುಮಾರ್‌, ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಆರ್‌. ಜಯಪ್ರಕಾಶ್‌, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next