Advertisement

ಡಾ. ರಾಜ್ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ನವರಸ ನಾಯಕ ಜಗ್ಗೇಶ್

12:35 PM Apr 13, 2020 | Mithun PG |

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಅವರಿಗೆ ವರನಟ ಡಾ. ರಾಜ್‌ಕುಮಾರ್ ಅವರನ್ನು ಕಂಡರೆ ಅಪಾರ ಗೌರವ. ಜಗ್ಗೇಶ್‌ ಆಗಾಗ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ನಟಸಾರ್ವಭೌಮ ಅವರ ಕೆಲವೊಂದು ನೆನಪುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ‘ರಾಜ್ ಪುಣ್ಯಸ್ಮರಣೆ’  ಹಿನ್ನೆಲೆಯಲ್ಲಿ 2006ರ ಆ ದಿನ ಹೇಗಿತ್ತು ಎಂಬುದನ್ನು ಜಗ್ಗೇಶ್‌ ನೆನಪು ಮಾಡಿಕೊಂಡಿದ್ದಾರೆ. ಆ ಕುರಿತು ಬರಹ ಇಲ್ಲಿದೆ.

Advertisement

2006, ಶ್ರೀರಂಗಪಟ್ಟಣದಲ್ಲಿ ‘ಪಾಂಡವರು’ ಚಿತ್ರದ ಚಿತ್ರೀಕರಣದ ವಿರಾಮದಲ್ಲಿ ಅಂಬರೀಶ್ ರವರ ಊಟದ ಆತಿಥ್ಯ ಪಡೆದು ಕಾರಲ್ಲಿ ನಿದ್ರಿಸುತ್ತಿದ್ದೆ! ನನ್ನ ಸಹಾಯಕ, ‘ರಾಜಣ್ಣ ಹೋದರು’ ಅಂದ! ಮೇಕಪ್ ತೆಗೆಯದೇ ಬೆಂಗಳೂರಿಗೆ ಬಂದೆ. ಕಾವೇರಿ ಚಿತ್ರಮಂದಿರದ ಹತ್ತಿರ ಅಣ್ಣನ ದೇಹಹೊತ್ತ ವಾಹನ ಅಭಿಮಾನಿಗಳ ಕೈಯಲ್ಲಿತ್ತು. ಆ ವಾಹನದಲ್ಲಿ ನೂರಾರು ಜನ ಇಷ್ಟಬಂದಂತೆ ವರ್ತಿಸುತ್ತಿದ್ದರು.

ಸಿಟ್ಟು ತಡೆಯಲಾಗಲಿಲ್ಲಾ. ಟಿವಿ ನಟ ಗಣೇಶ, ನಾನು ಹಾಗೂ ಅಣ್ಣನ ಕೊನೆಗಾಲದವರೆಗಿನ ಸಹಾಯಕ ಹನುಮಂತ ಸೇರಿ ಜನರನ್ನು ಚದುರಿಸಿ, ಹೆದರಿಸಿ ಆ ವಾಹನ ಅಪಹರಣ ಮಾಡಿ ಸ್ಯಾಂಕಿ ಟ್ಯಾಂಕ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿಕೊಂಡು ಕ್ಷೇಮವಾಗಿ ಅಣ್ಣನ ಪಾರ್ಥಿವ ಶರೀರವನ್ನು ಮನೆಗೆ ಸೇರಿಸುವ ಸಲುವಾಗಿ ಕಾರ್ಯರೂಪಿಸಲು ಮೊಬೈಲ್ ಕೈಗೆ ತೆಗೆದುಕೊಂಡೆ. ಗಲಾಟೆ ಜಾಸ್ತಿಯಾದ ಕಾರಣ ಮೊಬೈಲ್ ನಿಂತುಹೋಯಿತು.

ಏನು ಮಾಡಲು ತೋಚದೆ ಅಣ್ಣನ ಮುಖ ಆಗ ನೋಡಿದೆ. ಆಗಷ್ಟೇ ನಟಿಸಿ ಬಣ್ಣ ತೆಗೆದಂತೆ ಸೌಮ್ಯ ಮುಖ. ಅವರು ನನ್ನ ಜೊತೆ ಆಡಿದ ಮಾತುಗಳು ಮನದಲ್ಲಿ ಮಲ್ಲಗೆ ಒಂದೊಂದೆ ನೆನಪಾಗುತ್ತಿತ್ತು! ಅವರು ಹೇಳಿದ ಮಾತು ಒಂದು ನನ್ನನ್ನು ಇಂದಿಗು ಮರೆಯದಂತೆ ಮನದಲ್ಲಿ ಉಳಿಸಿದೆ. ‘ನಾವು ಯಾರು, ನಮಗೆ ಗೊತ್ತಿಲ್ಲದೆ ಯಾರೋ ಕೊಟ್ಟ ಭಿಕ್ಷೆಗೆ ಏನೋ ಆದಂತೆ ಬೀಗುತ್ತೇವೆ.. ನಮ್ಮ ಗುಣನಡತೆ ಸರಿಯಿಲ್ಲದಿದ್ದರೆ ನಮಗೆ ಅನ್ನಹಾಕುವ ದೇವರು ಮೃಷ್ಟಾನ್ನವನ್ನು ಭಿಕ್ಷಾನ್ನವಾಗಿ ಮಾಡುತ್ತಾನೆ! ಬಂದಾಗ ಹಿಗ್ಗದೆ, ಹೋದಾಗ ಕುಗ್ಗದೆ ಇದ್ದವನೆ ನಿಜಮಾನವ. ನಮ್ಮ ಜೀವನ ಇರುವುದು ಅಭಿಮಾನಿಗಳ ಕೈಯಲ್ಲಿ. ಅದಕ್ಕೆ ಅಭಿಮಾನಿ ದೇವರು ಎಂದು ಕರೆಯುವುದು! ಏನು ಇಲ್ಲದ ನಮ್ಮನ್ನ ರಾಜಕುಮಾರ ಮಾಡಿದರು ನನ್ನ ಮೊದಲ ನಮಸ್ಕಾರ ಎಂದು ಅವರಿಗೆ..’

ಅವರು ದೇವರ ಸೇರುವ ಒಂದು ತಿಂಗಳ ಹಿಂದೆ, ಅವರ ಸಹೋದರನ ಸಾವಲ್ಲಿ ಅವರು ಹಿಡಿದಿಟ್ಟ ದುಃಖ ನೋಡಿ, ಅಯ್ಯೋ ಇವರು ಹೊರಟರು ಅನ್ನಿಸಿತು! ಹಾಗೆ ತಿಂಗಳಲ್ಲಿ ಹೋಗೆಬಿಟ್ಟರು.. ನನ್ನ ಉಸಿರಲ್ಲಿ ಬೆರತ ನಟ ದೇವರು ತಂದೆ.. ಮಾರ್ಗದರ್ಶಕ.. ನೆಪಕ್ಕೆ ಹೋಗಿದ್ದಾರೆ ಮಾನಸದಲ್ಲಿ ಜೀವಂತ ಉಳಿದಿದ್ದಾರೆ.. ಮುತ್ತಿನಂತ ಮಕ್ಕಳ ಉಳಿಸಿದ್ದಾರೆ! ರಾಜಣ್ಣ ನನಗೆ ರಾಯರಂತೆ..’ ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next