Advertisement
ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬುಧವಾರ ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ರಾಜಕುಮಾರ್ ಅವರ ಭಾವಚಿತ್ರವಿರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ, ರಾಜಕುಮಾರ್ ಅವರ ಗಾನಸುಧೆ ಉಣಬಡಿಸಲಾಯಿತು. ಹೀಗಾಗಿ ಅರಮನೆಗಳ ನಗರಿಯ ತುಂಬೆಲ್ಲಾ ಹಬ್ಬದ ವಾತಾವರಣ ಕಂಡುಬಂತು.
Related Articles
Advertisement
ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಡಾ.ರಾಜಕುಮಾರ್ ಕನ್ನಡದ ಕಣ್ಮಣಿಯಾಗಿ ಗುರುತಿಸಿಕೊಂಡಿದ್ದು, ಎರಡು ರಾಷ್ಟ್ರೀಯ ಪ್ರಶಸ್ತಿ, ಪದ್ಮಭೂಷಣ, ಕರ್ನಾಟಕ ರತ್ನ ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗೋಕಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಕನ್ನಡಕ್ಕಾಗಿ ಹೋರಾಟ ನಡೆಸಿದ್ದಾರೆ. ಹೆಮ್ಮೆಯ ಕನ್ನಡಿಗರಾದ ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಪ್ರತಿಯೊಬ್ಬ ಕನ್ನಡಿಗರೂ ಹಬ್ಬದಂತೆ ಆಚರಿಸಬೇಕು ಎಂದರು.
ಯದುವೀರ್ ನೆನಪು: ಡಾ.ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ತಾತ, ಮೈಸೂರು ಸಂಸ್ಥಾನದ ಕೊನೆಯ ಅರಸು ಜಯಚಾಮರಾಜ ಒಡೆಯರ್ ಅವರು ಡಾ.ರಾಜ್‌ಕುಮಾರ್ ಅವರನ್ನು ಸನ್ಮಾನಿಸುತ್ತಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಡಾ.ರಾಜ್‌ಕುಮಾರ್ ಅವರು ನಟ ಸಾರ್ವಭೌಮ, ಕನ್ನಡ ಚಿತ್ರರಂಗದ ಧ್ರುವತಾರೆ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಮೇರು ನಟ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಟ್ವೀಟರ್‌ನಲ್ಲಿ ಕನ್ನಡ ಚಿತ್ರರಂಗದ ಮೇರು ನಟ, ಕನ್ನಡಿಗರ ಕಣ್ಮಣಿ, ಪದ್ಮಭೂಷಣ ಡಾ.ರಾಜಕುಮಾರ ಜನ್ಮದಿನ, ಅವರ ನೆನಪು ಚಿರಸ್ಮರಣೀಯವಾಗಿರಲೆಂದು ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡುವ ಮೂಲಕ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಡಾ.ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಡಾ.ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಸಿಹಿ ವಿತರಿಸಿದರೆ, ಕನ್ನಡಪರ ಸಂಘಟನೆಯೊಂದರ ಪದಾಧಿಕಾರಿಗಳು ರೈಸ್‌ಬಾತ್, ಮೊಸರನ್ನ ವಿತರಿಸಿದರು.
ಪ್ರತಿಮೆ ಎದುರು ಸೆಲ್ಫಿ: ಡಾ.ರಾಜಕುಮಾರ್ ಜನ್ಮ ದಿನದ ಹಿನ್ನೆಲೆಯಲ್ಲಿ ವರನಟನ ಪ್ರತಿಮೆ ಮುಂದೆ ನೂರಾರು ಜನರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೆಲವರು ಪ್ರತಿಮೆಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಧನ್ಯತೆ ಮೆರೆದರೆ, ಹಲವರು ಡಾ.ರಾಜ್ ಪ್ರತಿಮೆಗೆ ಕೈಮುಗಿಯುವ ಭಂಗಿಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದುದು ಕಂಡುಬಂತು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಡಾ.ರಾಜಕುಮಾರ್ ಪುತ್ಥಳಿಗೆ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.