Advertisement

ಅಣ್ಣಾವ್ರ ನೆಪದ ಬಾಡೂಟ

09:00 AM Apr 28, 2019 | Vishnu Das |

ಬಾಡೂಟದ ಬಳಗ! ಇಲ್ಲಿ ಬೈಟೂ ಮಾತೇ ಇಲ್ಲ… ಬಾಡೂಟಪ್ರಿಯ ಮನಸ್ಸುಗಳೆಲ್ಲ ಒಂದಾಗಿ ಸೇರಿದ ಕಟ್ಟಿದ ಈ ಬಳಗಕ್ಕೆ ಅಣ್ಣಾವ್ರೇ ಸ್ಫೂರ್ತಿ. ಸ್ವತಃ ರಾಜಣ್ಣವರೇ ಬಾಡೂಟಪ್ರಿಯರಾಗಿದ್ದರಿಂದ, ಮೊನ್ನೆ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಬಳಗ, ಊಟಕ್ಕೆ ದಾಳಿ ಇಟ್ಟಿದ್ದು, ಗಾಂಧಿನಗರದ “ನವಯುಗ’ ಹೋಟೆಲ್‌ಗೆ. ಅಣ್ಣಾವ್ರ ನೆಚ್ಚಿನ ಹೋಟೆಲ್‌ ಇದು…

Advertisement

ಕೈ ತೊಳೆಯುವ ಮುನ್ನ, ತಿನ್ನುವಿಕೆಯನ್ನು ಯಾರು ಪ್ರೀತಿಸುತ್ತಾರೋ ಅವರು ಯಾವಾಗಲೂ ಶ್ರೇಷ್ಠ ವ್ಯಕ್ತಿಗಳಾಗಿರುತ್ತಾರೆ.
– ಜೂಲಿಯ ಚೈಲ್ಡ್‌ , ಅಮೆರಿಕದ ಪ್ರಖ್ಯಾತ ಪಾಕ ಪ್ರವೀಣೆ

ಅಣ್ಣಾವ್ರ 91ನೇ ಹುಟ್ಟುಹಬ್ಬ, ಮೊನ್ನೆ ಏಪ್ರಿಲ್‌ ಇಪ್ಪತ್ನಾಲ್ಕಕ್ಕೆ ಆಗ್ಹೋಯ್ತು. ತಿಂಗಳಿಗೊಮ್ಮೆ ಬಾಡೂಟಕ್ಕೆ ಸೇರುವ ನಮ್ಮ “ಬಾಡೂಟ ಬಳಗ’ ಅವತ್ತು ಬಿಟ್‌ಬಿಡ್ತೀವಾ? ನಮ್ಮ ತಂಡಕ್ಕೆ ಡಾ. ರಾಜ್‌ ಆದರ್ಶ. ಅವರು ನಾನ್‌ವೆಜ್‌ ಪ್ರಿಯರು. ಅದಕ್ಕೇ ಅವತ್ತು ಅವರ ಹುಟ್ಟುಹಬ್ಬದ ಪ್ರಯುಕ್ತ, ಅಣ್ಣಾವ್ರು ಸದಾ ಇಷ್ಟಪಡುತ್ತಿದ್ದ ನವಯುಗ ಹೋಟೆಲ್‌ನಲ್ಲಿ ಬಾಡೂಟ ಹಮ್ಮಿಕೊಂಡಿದ್ದೆವು. ಆ ಹೋಟೆಲ್‌ನವರಿಗೆ ಹಿಂದಿನ ದಿನವೇ ತಿಳಿಸಿ, ಮೆನು ರೆಡಿ ಮಾಡಿಸಿದ್ದೆವು. ಸುಮಾರು 40 ಜನ ಭರ್ಜರಿ ಜಮಾಯಿಸಿಬಿಟ್ಟೆವು.

ಪ್ರತಿ ವರ್ಷ ನಮ್ಮ ಬಳಗ ವಾರ್ಷಿಕೋತ್ಸವ ಆಗುತ್ತೆ. ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿ ಸ್ನೇಹಿತರ ತೋಟ ಇದೆ. ಅಲ್ಲಿ ಪ್ರತಿವರ್ಷ 100 ಜನ ಸೇರ್ತೀವಿ. ಅಡುಗೆ ಭಟ್ಟರನ್ನು ಕರಕೊಂಡು ಹೋಗಿ, ಇಪ್ಪತ್ನಾಲ್ಕು ತಾಸು ಒಲೆ ಮೇಲೆ ಬಾಡನ್ನು ಬೇಯಿಸುತ್ತಾ, ನಾವು ಹಾಡು- ಹರಟೆ ನಾಟಕದಲ್ಲಿ ಕಳೆಯುತ್ತೇವೆ. ಬಾಡೂಟ ಅಂದಾಕ್ಷಣ ಎಲ್ಲರಿಗೂ ಡ್ರಿಂಕÕ… ಇರುತ್ತೆ ಅನ್ನೋ ಅನುಮಾನ. ಖಂಡಿತ ನಮ್ಮಲ್ಲಿ ಮದ್ಯಪಾನ ನಿಷಿದ್ಧ. ಫ್ಯಾಮಿಲಿ ಮಂದಿಯೇ ಜಾಸ್ತಿ ಇರ್ತಾರೆ. ಮಕ್ಕಳೂ ಇರ್ತಾರೆ. ಧೂಮಪಾನ- ಮದ್ಯಪಾನ ಮಾಡುವವರಿಗೆ ಅವಕಾಶವಿಲ್ಲ.

ನಾವು ಹೊಟ್ಟೆಬಾಕರಲ್ಲ…
ನಮ್ಮ ಬಳಗ ಬಾಡೂಟದ ಬ್ಯಾಟಿಂಗ್‌ ಆರಂಭಿಸಿದ್ದು, 2012ರಿಂದ. ಇಲ್ಲಿ ನಾವ್ಯಾರೂ ಹೊಟ್ಟೆಬಾಕರಲ್ಲ. ನಾವು ಒಳ್ಳೆಯ, ಸಂಪೂರ್ಣತೆಯ ಅಂದರೆ ರುಚಿಕಟ್ಟಾದ ಬಾಡೂಟವನ್ನು ಪರಿಶೋಧಿಸುವ ದಂಡು. ಈ ಬಾಡೂಟ ಎಂಬ ಕಾನ್ಸೆಪ್ಟ್ ಇಂದು ನಿನ್ನೆಯದೇನೂ ಅಲ್ಲ. ಬಾಡು- ಊಟ, ಭುವಿ ಜನ್ಮತಾಳಿದಿಂದಲೇ ಇದೆ. ಇದೊಂದು ಸಂಸ್ಕೃತಿ, ತಲ ತಲಾಂತರದಿಂದಲೂ ಇದನ್ನು ನಿತ್ಯ ಜೀವನ ಕ್ರಿಯೆಯಾಗಿ ನಾಗರೀಕತೆಯಲ್ಲಿ ಬೆರೆತಿದೆ. ಬಾಡೂಟ ಗಲ್ಲಿಯಲ್ಲೇ ಇರಲಿ, ಸಂದಿಯಲ್ಲೇ ಇರಲಿ, ಹಳ್ಳಿಯಲ್ಲೇ ಇರಲಿ, ದಿಲ್ಲಿಯಲ್ಲೇ ಇರಲಿ… ಜಪ್ಪಂತ ನಮ್‌ ಬಳಗ ರೆಡಿ. ಚಕ್ಳ-ಬಕ್ಳ ಹಾಕ್ಕೊಂಡು ಜಮಾಯ್ಸಿಬಿಡೋದೆ… ಈ ಜಮಾಯ್ಸಿಬಿಡೋದೆ ಪದವನ್ನು ನಮ್ಮ ಜಮಾನಕ್ಕೆ ಪರಿಚಯಿಸಿದವರು, ನಮ್ಮೆಲ್ಲರ ಅಣ್ಣ ಡಾ|| ರಾಜಣ್ಣ. “ಬಾಡೂಟನ ಜಮಾಯ್ಸಿಬಿಡಿ ಆದ್ರೆ ಅಲ್ಪ ತೃಪ್ತರಾಗ್ಬೇಡಿ. ತಿಂದ ಮೇಲೆ ಕೈಗೆ ಸಾಬೂನು ಹಚ್ಚದೆ ಕೈತೊಳೆದರೆ, ಇಡೀ ದಿನ ಕೈ ವಾಸನೆ ಕುಡ್ಕೊಂಡು ಸಂಪೂರ್ಣ ತೃಪ್ತರಾಗಿ’ ಎಂಬ ರಾಜಣ್ಣನ ಮಾತುಗಳನ್ನು ಶಿರಸಾವಹಿಸಿ ಪಾಲಿಸೋದು ನಮ್ಮೆಲ್ಲರ ಆಶಯ.

Advertisement

ಅದ್ಸರಿ, ನಮ್ಮ ಬಳಗದಲ್ಲಿ ಪ್ರೀತಿ- ಸ್ನೇಹ ಯಥೇಚ್ಚವಾಗಿ ಹಂಚೊRàತೀವಿ… ಆದರೆ, ಬಾಡೂಟದ ವಿಷ್ಯ ಬಂದಾಗ ಇಲ್ಲಿ ಬೈ-ಟೂ ಶೇರಿಂಗ್‌ ಅನ್ನೋ ಮಾತೇ ಇಲ್ಲ. ಇನ್ನು ಬಿಲ್ಲು ಗಿಲ್ಲು ಅನ್ನೊ ವಿಚಾರಕ್ಕೆ ಬಂದ್ರೆ ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟೋರು, ಸಮಾನವಾಗಿ ಹರಿದುಬಿಡ್ತೀವಿ. ಇನ್ನು ನಮ್ಮಲ್ಲಿನ ಸರಳವಾದ ನಿಯಮ: ಸದಸ್ಯರು ಬಾಡೂಟವನ್ನು ಎಲ್ಲಾದರೂ ತಿನ್ನಲಿ, ಅದು ಬ್ಯಾಡ್‌ ಇರಲಿ – ಬೊಂಬಾಟಾಗಿರಲಿ, ಇತರೆ ಪಾಪದ ಸದಸ್ಯರಲ್ಲಿ ರುಚಿಕಟ್ಟಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು.

ನಮಗೊಂದು ಗಂಭೀರ ನಂಬಿಕೆ ಇದೆ… ಈ ತಿನ್ನೋದು ಅಂದ್ರೆ ರುಚಿ, ಮಿಶ್ರಣಾಂಶ, ರೆಸಿಪಿ ಮತ್ತು ಬಾಣಸಿಗತ್ವ ಅಷ್ಟೇ ಅಲ್ಲ. ತಿನ್ನೋ ಕ್ರಿಯೆ ನಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಯನ್ನೂ ಹೆಚ್ಚಿಸುವ ಪ್ರಕ್ರಿಯೆ ಎಂದೇ ಭಾವಿಸಿದ್ದೇವೆ. ನಮ್‌ ತಾತ- ಮುತ್ತಾತ ಹೇಳ್ತಿದ್ರು, “ಊಟ ಬಲ್ಲವನಿಗೆ ರೋಗವಿಲ್ಲ- ಮಾತು ಬಲ್ಲವನಿಗೆ ಜಗಳ ಇಲ್ಲ’. ಹಂಗೆ ನಾವು ಇಲ್ಲಿ ಪೊಗದಸ್ತಾಗಿ ಊಟನು ಮಾಡ್ತೀವಿ, ಪಸಂದಾಗಿ ಮಾತೂ ಆಡ್ತೀವಿ!

ನಮ್ಮ ಬಳಗಕ್ಕೆ ಈಗ 7 ವರುಷ. 100 ಜನರು ಇದ್ದೇವೆ. ಪ್ರತಿ ಸಾರಿ ಸೇರುವಾಗ 30- 40 ಜನ ಪಕ್ಕಾ ಇರುತ್ತೇವೆ. ತಿಂಗಳಿಗೊಮ್ಮೆ ಒಳ್ಳೊಳ್ಳೆ ಹೋಟೆಲ್‌ ಹುಡುಕಿಕೊಂಡು ಹೋಗೋದು ನಮ್ಮ ಕೆಲಸ. ಹೀಗೆ ಒಟ್ಟಿಗೆ ಸೇರಿದಾಗ, ನಮ್ಮ ಬಾಂಧವ್ಯ ಹೆಚ್ಚುತ್ತೆ. ಆ ಬೆಸುಗೆಗೆ ಕಾರಣವೇ ಬಾಡೂಟ.

ಅದಕ್ಕೇ ನಾವು ಅಣ್ಣಾವ್ರ ಹಾಡನ್ನು ನಾವು ಹೀಗೆ ಹಾಡೋದು… “ಬಾಡಿರುವುದೆ ನಮಗಾಗಿ, ನಾವಿರುವುದೆ ಅದಕ್ಕಾಗಿ… ಕಲ್ಮೀ ಬೇಕೆ? ಕರ್ಮೀನ್‌ ಸಾಕೆ? ಕಡಿಯಿರಿ ಎಲ್ಲಾ ಒಂದಾಗಿ…’!

ಅಣ್ಣಾವ್ರ ಬರ್ತ್‌ಡೇ ದಿನ ನಾವು ಕತ್ತರಿಸಿದ್ದು…
ಮೆನು ಚಿಕನ್‌ ಕಬಾಬ…, ಮಟನ್‌ ಚಾಪ್ಸ್‌, ಕಲಿ¾ ಕಬಾಬ್‌, ಮಟನ್‌ ರೋಸ್ಟ್‌, ಚಿಲ್ಲಿ ಚಿಕನ್‌, ಮಟನ್‌ ಬಿರಿಯಾನಿ

ಸ್ಥಳ: ನವಯುಗ ಹೋಟೆಲ್‌, ಗಾಂಧಿನಗರ

ಒಬ್ಬರಿಗೆ ಬಿದ್ದ ಖರ್ಚು
600-700 ರೂ.

ಜಮಾಯ್ಸಿದ ತಂಡ
ರವೀಂದ್ರ, ಸತೀಶ್‌, ಮಂಜು, ಮುನಿರಾಜು, ನಂದಿನಿ, ಅರವಿಂದ, ಶರತ್‌, ಮಹೇಶ್‌, ಮೇಘಾ, ಸುಮ, ಪ್ರಸನ್ನ, ಸ್ಫೂರ್ತಿ, ಚೈತ್ರಾ, ವೆಂಕಟ…, ಶ್ಯಾಂ ಶಾನ್‌ಭಾಗ್‌, ರಾಘವೇಂದ್ರ, ದೀಪಕ್‌, ರೂಪೇಶ್‌, ದರ್ಶನ್‌, ಕೃಪಾಶಂಕರ, ಸವಿತಾ, ಸ್ವಪ್ನಾ, ಉಮೇಶ್‌, ನಾಗರಾಜ್‌ ಜಿ.ಎನ್‌., ಅರುಣ್‌.

– ಸತೀಶ್‌ ಅವಿರತ

Advertisement

Udayavani is now on Telegram. Click here to join our channel and stay updated with the latest news.

Next