ರಾಯಚೂರು: ವಕೀಲ ಡಾ| ಎಂ.ನಾಗಪ್ಪ ಸಾಮಾಜಿಕ ನ್ಯಾಯಕ್ಕಾಗಿ ಜೀವನ ಮುಡಿಪಾಗಿಡುವ ಮೂಲಕ ಮಾದರಿ ವ್ಯಕ್ತಿ ಎನಿಸಿದರು. ಅವರ ಹೋರಾಟದ ಜೀವನ ಶೈಲಿ ಎಂದೆಂದಿಗೂ ಅವಿಸ್ಮರಣೀಯ ಎಂದು ಉತ್ಛ ನ್ಯಾಯಾಲಯದ ನ್ಯಾ| ಬಿ.ಆರ್. ಬೂದಿಹಾಳ ಅಭಿಪ್ರಾಯಪಟ್ಟರು. ನಗರದ ಡಾ| ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಡಾ| ಎಂ.ನಾಗಪ್ಪ ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವ ಹಾಗೂ “ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಶ್ರಮಿಸಿದ್ದ ಡಾ| ಎಂ. ನಾಗಪ್ಪ ಅವರು, ನಂತರ ರಾಯಚೂರು ನಗರ ಕ್ಷೇತ್ರದಿಂದ 1967ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಸದನದಲ್ಲೂ ಹಿಂದುಳಿದ ವರ್ಗಗಳ ಪರವಾಗಿ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ನಾಗಪ್ಪ ವಕೀಲರದ್ದು ನೇರ ನುಡಿಯ ವ್ಯಕ್ತಿತ್ವವಾಗಿತ್ತು. ಅವರು ಯಾವುದೇ ಕಾರ್ಯದಲ್ಲಿ ತೊಡಗುವುದಕ್ಕೂ ಮುಂಚೆ ಪೂರ್ವಾಪರ ಅರಿಯುತ್ತಿದ್ದರು ಎಂದರು.
ನಗರಸಭೆ ಅಧ್ಯಕ್ಷರಾಗಿದ್ದ ನಾಗಪ್ಪನವರು ಪೌರಕಾರ್ಮಿಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕ ಸದೃಢರನ್ನಾಗಿ ಮಾಡಲು ಪ್ರಯತ್ನಿಸಿದ್ದು ಉತ್ತಮ ಕಾರ್ಯವಾಗಿತ್ತು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬೈಲೂರು ಶಂಕರರಾಮ್ ಮಾತನಾಡಿ, ಜನಸಾಮಾನ್ಯರಿಗೆ ನೈಜ ಸೇವೆ ಸಲ್ಲಿಸಿದವರನ್ನು ಸಮಾಜ ಮರೆಯುವುದಿಲ್ಲ. ಬಸವತತ್ವ ಪಾಲಿಸುತ್ತಾ ಬಡವರ ಅಭಿವೃದ್ಧಿಗೆ ಶ್ರಮಿಸಿದ ಡಾ| ನಾಗಪ್ಪ ವಕೀಲರ ಜೀವನ ಮಾದರಿ ಎಂದರು.
ಇದೇ ವೇಳೆ ಡಾ| ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದಿಂದ ಗುವಾಹತಿ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ|ಜೆ.ಎಸ್. ಪಾಟೀಲ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಪ್ರತಿಷ್ಠಾನದ ಉಪಾಧ್ಯಕ್ಷ ನಾಗರಾಜ ಮಸ್ಕಿ ಪ್ರಾಸ್ತಾವಿಕ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಬಸಪ್ಪ ತಿಪ್ಪಾರೆಡ್ಡಿ, ಸದಸ್ಯರಾದ ರುದ್ರಪ್ಪ ಅಂಗಡಿ ಇತರರಿದ್ದರು.