Advertisement

ಮಂಡ್ಯದಲ್ಲಿ ಹೊಸ ಲೆಕ್ಕಾಚಾರ: ಬಿಜೆಪಿ ಸೇರಿದ ಡಾ. ಲಕ್ಷ್ಮೀ ಅಶ್ವಿನ್ ಗೌಡ

09:06 PM May 07, 2022 | Team Udayavani |

ಬೆಂಗಳೂರು: ಜೆಡಿಎಸ್ ಸೇರಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಆಂತರಿಕ ಕಂದಾಯ ಸೇವೆಯ ಹುದ್ದೆಗೆ ರಾಜೀನಾಮೆ ನೀಡಿದ್ದ ಡಾ. ಲಕ್ಷ್ಮೀ ಅಶ್ವಿನ್ ಗೌಡ ಅವರು ಶನಿವಾರ ಬಿಜೆಪಿ ಸೇರಿದ್ದಾರೆ.

Advertisement

ಎಂಬಿಬಿಎಸ್ ಮುಗಿಸಿ ಅಧಿಕಾರಿಯಾಗಿರುವ ಲಕ್ಷ್ಮೀ ಅವರ ಮೇಲೆ ಬಿಜೆಪಿ ಹೊಸ ಭರವಸೆ ಇಟ್ಟಿದ್ದು, ಮಂಡ್ಯದಲ್ಲಿ ಪಕ್ಷವನ್ನು ಬಲಪಡಿಸಿಕೊಳ್ಳಲು ಹೊಸ ಲೆಕ್ಕಾಚಾರ ಹಾಕಿಕೊಂಡಿದೆ. ಒಂದೆಡೆ ಅಂಬರೀಷ್ ಅವರ ಅಲೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಕಮಲ ಪಾಳಯ, ಪಕ್ಷೇತರ ಸಂಸದೆ ಸುಮಲತಾ ಅವರನ್ನು ಮತ್ತು ಪುತ್ರ ಅಭಿಷೇಕ್ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದೆ.

ಐಆರ್ ಎ ಎಸ್ ಮಾಡಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಜನಸೇವೆಯನ್ನು ಆಯ್ಕೆ ಮಾಡಿಕೊಂಡೆ. ಆದರೆ ನನ್ನ ತ್ಯಾಗಕ್ಕೆ ಸರಿಯಾದ ಅವಕಾಶ ಸಿಗಲಿಲ್ಲ. ಮಂಡ್ಯ ಜಿಲ್ಲೆಯನ್ನು ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿಸಬೇಕು, ಇಲ್ಲಿನ ಬಡವರ, ಮಹಿಳೆಯರ, ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು ಅನ್ನುವ ಉದ್ದೇಶದಿಂದ ಬಿಜೆಪಿ ಪಕ್ಷವನ್ನು ಸೇರುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂಜನಿ ಫೌಂಡೇಶನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಲಕ್ಷ್ಮೀ ಅವರು ಚುನಾವಣೆಗೂ ಮುನ್ನ ಇನ್ನಷ್ಟು ಬಿರುಸಿನ ರಾಜಕೀಯ ಚಟುವಟಿಕೆ ನಡೆಸುವ ಸಾಧ್ಯತೆಗಳಿವೆ.

ಲಕ್ಷ್ಮೀ ಅವರು ಮದ್ದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಒಂದೊಮ್ಮೆ ಅಭಿಷೇಕ್ ಅವರು ಬಿಜೆಪಿಗೆ ಬಂದಲ್ಲಿ ಅವರೂ ಮದ್ದೂರು ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದಲ್ಲಿ ಲೆಕ್ಕಾಚಾರಗಳು ಬದಲಾಗ ಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ತೀರಾ ಕಳಪೆ ಎನ್ನುವ ಮಟ್ಟಕ್ಕೆ ಅಸ್ತಿತ್ವ ಹೊಂದಿರುವ ಮಂಡ್ಯದಲ್ಲಿ ಭರ್ಜರಿಯಾಗಿ ಪಕ್ಷ ಸಂಘಟನೆ ಮಾಡಲು  ಹಲವು ಪ್ರಮುಖ ನಾಯಕರನ್ನು ಸೆಳೆಯಲು ಮುಂದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next