Advertisement

ಬದಿಯಡ್ಕದ ದಂತವೈದ್ಯ ಡಾ|ಕೃಷ್ಣಮೂರ್ತಿ ನಿಗೂಢ ಸಾವು: ತನಿಖೆಗೆ ವಿಶೇಷ ತಂಡ ರಚನೆ: ಎಸ್‌ಪಿ

08:50 AM Nov 15, 2022 | Team Udayavani |

ಕುಂದಾಪುರ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವಿನ ತನಿಖೆಗೆ ಕುಂದಾಪುರ ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚಿಂದ್ರ ಹಾಕೆ ತಿಳಿಸಿದ್ದಾರೆ.

Advertisement

ಕೃಷ್ಣಮೂರ್ತಿ ಅವರ ಛಿದ್ರಗೊಂಡ ದೇಹ ಪತ್ತೆಯಾದ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಇಲ್ಲಿನ ಡಿವೈಎಸ್‌ಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಮೂವರು ಎಸ್‌ಐಗಳು ಇರುವ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದೆ. ಒಂದು ತಂಡ ಕಾಸರಗೋಡಿಗೆ ತೆರಳಿದೆ. ಕಾಸರಗೋಡು ಪೊಲೀಸರ ಜತೆ ಸಮನ್ವಯ ಸಾಧಿಸಿದ್ದೇವೆ. ಘಟನ ಸ್ಥಳಕ್ಕೆ ಎರಡನೆ ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾಗಿದೆ. ನುರಿತ ತಾಂತ್ರಿಕ ಸಿಬಂದಿ ತಂಡದಲ್ಲಿದ್ದು ಫೊರೆನ್ಸಿಕ್‌ ವೈದ್ಯರ ಅಭಿಪ್ರಾಯವನ್ನೂ ಪಡೆಯಲಿದ್ದೇವೆ ಎಂದರು.

ಕುಂದಾಪುರ ಡಿವೈಎಸ್ಪಿ ಸಂಪೂರ್ಣ ತನಿಖೆಯ ಉಸ್ತುವಾರಿ ವಹಿಸಲಿದ್ದಾರೆ. ರೈಲ್ವೇಗೆ ಸಂಬಂಧಪಟ್ಟಂತೆ ಹಾಗೂ ಸಿಸಿ ಟಿವಿ ದೃಶ್ಯಾವಳಿ ಕಲೆ ಹಾಕಲಾಗುತ್ತಿದೆ. ಕುಂದಾಪುರ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿರುವುದು ಕೂಡ ನಿಗೂಢ ವಾಗಿದ್ದು ಕುಟುಂಬಿಕರು ಹಾಗೂ ಸ್ನೇಹಿತರು ಸಂಶಯ ವ್ಯಕ್ತಪಡಿಸಿ ದ್ದಾರೆ. ಮನೆಯವರು ಹಾಗೂ ಸಮಾಜದ ಸಂಶಯ ನಿವಾರಣೆ ದೃಷ್ಟಿಯಲ್ಲಿ ತನಿಖೆ ನಡೆಯಲಿದೆ. ತನಿಖೆ ಯಾವ ರೀತಿ ನಡೆಯಬೇಕೆಂದು ರೂಪರೇಖೆ, ಕ್ರಿಯಾಯೋಜನೆಯನ್ನೂ ತಯಾ ರಿಸಲಾಗಿದೆ. ಅತ್ತ ಕಾಸರಗೋಡು ಪೊಲೀಸರೂ ತನಿಖೆ ನಡೆಸುತ್ತಿದ್ದು ಘಟನೆಗೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದಾರೆ. ಇತ್ತ ಕಡೆಯಿಂದಲೂ ತನಿಖೆ ನಡೆದು ಯಾವುದಾದರೊಂದು ಕಡೆ ಸಂಧಿಸಲಿದೆಯೇ ಎಂದು ನೋಡಬೇಕು ಎಂದರು.

ಘಟನೆ ನಡೆದ ರೈಲು ಹಳಿಯ ಪರಿಶೀಲನೆ ವೇಳೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್‌ ಕೆ., ಸಿಪಿಐ ಗೋಪಿಕೃಷ್ಣ, ತನಿಖಾ ತಂಡದ ಪಿಎಸ್‌ಐಗಳಾದ ಪವನ್‌, ಶ್ರೀಧರ್‌ ನಾಯ್ಕ, ಪ್ರಸಾದ್‌ ಹಾಗೂ ಸಿಬಂದಿಗಳಿದ್ದರು. ಶ್ವಾನದಳ ಕೂಡ ಸ್ಥಳಕ್ಕೆ ಭೇಟಿ ನೀಡಿದೆ.

Advertisement

ಸಮಗ್ರ ತನಿಖೆ ಆಗ್ರಹಿಸಿ ಪುತ್ತೂರಿನಲ್ಲಿ ಪ್ರತಿಭಟನೆ
ಪುತ್ತೂರು: ಡಾ| ಕೃಷ್ಣಮೂರ್ತಿ ಅವರ ಅನುಮಾನಾಸ್ಪದ ಸಾವಿನ ಹಿಂದೆ ಜೆಹಾದಿಗಳ ಕೈವಾಡವಿದ್ದು, ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷತ್‌ ನೇತೃತ್ವದಲ್ಲಿ ಸೋಮವಾರ ಕಿಲ್ಲೆ ಮೈದಾನದ ಅಮರ್‌ ಜವಾನ್‌ ಸ್ಮಾರಕ ಜ್ಯೋತಿ ಬಳಿ ಬೃಹತ್‌ ಪ್ರತಿಭಟನೆ ನಡೆಯಿತು.

ವಿಹಿಂಪ ಜಿಲ್ಲಾಧ್ಯಕ್ಷ ಡಾ| ಕೃಷ್ಣಪ್ರಸನ್ನ, ಡಾ| ಸುರೇಶ್‌ ಪುತ್ತೂರಾಯ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವಪ್ರಸಾದ್‌ ಮುಳಿಯ, ಬಜರಂಗದಳ ಕರ್ನಾಟಕ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಡಾ| ಗಣೇಶ್‌ ಪ್ರಸಾದ್‌, ಶಿವಶಂಕರ್‌ ಭಟ್‌ ಬೋನಂತಾಯ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಮೊದಲಾದವರು ಮಾತನಾಡಿ, ಅಮಾಯಕ ವೈದ್ಯರ ಸಾವಿನ ವಿರುದ್ಧ ಹಿಂದೂ ಸಮಾಜ ಸಂಘಟಿತ ಹೋರಾಟ ನಡೆಸಲಿದೆ ಎಂದು ಹೇಳಿದರು.

ಇದನ್ನೂ ಓದಿ : ಮಿಜೋರಾಂ: ಕಲ್ಲು ಕ್ವಾರಿ ಕುಸಿದು 8 ಮಂದಿ ಸಾವು, ನಾಲ್ವರು ನಾಪತ್ತೆ, ರಕ್ಷಣಾ ಕಾರ್ಯ ಚುರುಕು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next