Advertisement

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸುಧಾಕರ್‌ ಕಟ್ಟುನಿಟ್ಟಿನ ಸೂಚನೆ

09:09 PM Jul 14, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Advertisement

ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಪ್ರತಿ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗ ನಿಯಂತ್ರಣ ಮಾಡಬೇಕು. ಇಲ್ಲದಿದ್ದರೆ, ಮಲೇರಿಯಾ, ಡೆಂಗ್ಯು, ಚಿಕೂನ್‌ಗುನ್ಯಾ, ಜಪಾನೀಸ್‌ ಎನ್ಸಫಲೈಟಿಸ್‌, ಆನೆಕಾಲು ಮೊದಲಾದ ರೋಗಗಳು ಹರಡುವ ತೀವ್ರ ಸಾಧ್ಯತೆ ಇದೆ. ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸೂಚಿಸಿದ್ದಾರೆ.

ಜಿಲ್ಲಾ ಮಟ್ಟದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ರಾಪಿಡ್‌ ರೆಸ್ಪಾನ್ಸ್‌ ಟೀಮ್‌ಗಳು ಯಾವಾಗಲೂ ಸಿದ್ಧವಾಗಿರಬೇಕು. ಈ ತಂಡಗಳಿಗೆ ಅಗತ್ಯ ಪರಿಕರ, ಸಾಧನ, ಸಾರಿಗೆ ಸೌಲಭ್ಯವನ್ನು ನೀಡಿ ಜನರ ಆರೋಗ್ಯ ರಕ್ಷಣೆಗೆ ತುರ್ತಾಗಿ ಧಾವಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕುರಿತು ಕೂಡಲೇ ಅಧ್ಯಯನ ನಡೆಸಬೇಕು. ಹಾಗೆಯೇ ರೋಗಿಗಳ ಆರೈಕೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡಿ ರೋಗ ಹರಡದಂತೆ ಕ್ರಮ ವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ಮಾಹಿತಿ ಕಲೆಹಾಕಿ ರೋಗ ಹರಡುವಿಕೆಯ ಸಾಧ್ಯತೆ ಬಗ್ಗೆ ಗಮನಹರಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಈ ಎಲ್ಲಾ ಕಾರ್ಯಗಳು ಎಲ್ಲಾ ಹಂತಗಳಲ್ಲಿ ಸರಿಯಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಹಾಗೂ ಸಮನ್ವಯಕ್ಕಾಗಿ ನಿಯಂತ್ರಣ ಕೊಠಡಿಯೊಂದನ್ನು ಆರಂಭಿಸಬೇಕು ಎಂದು ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next