ಬೆಂಗಳೂರು: ಐತಿಹಾಸಿಕ, ವಿಶ್ವದಾಖಲೆಯ ಯೋಗಥಾನ್‌ಗೆ ವೇದಿಕೆ ಸಜ್ಜಾಗಿದ್ದು, ರವಿವಾರ 10ಲಕ್ಷಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ|ನಾರಾಯಣ ಗೌಡ ಹೇಳಿದರು.
ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಏಕಕಾಲದಲ್ಲಿ ಸುಮಾರು 5 ಲಕ್ಷ ಜನರು ಯೋಗ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ, ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಈಗಾಗಲೇ ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಯೋಗ ಪಟುಗಳು, ತರಬೇತುದಾರರು, ಶಿಕ್ಷಕರು, ಯೋಗ ಸಂಸ್ಥೆಗಳು ಸ್ವಯಂ ಸೇವಕರು ಸಹಿತ 13 ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿದ್ದಾರೆ. ಈಗಾಗಲೇ ಎಲ್ಲ ಸ್ಥಳಗಳಲ್ಲಿ ರಿಹರ್ಸಲ್ ಮಾಡಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 8ರಿಂದ 8.45ರ ವರೆಗೆ ಯೋಗಾಭ್ಯಾಸ ನಡೆಯಲಿದೆ. ರಾಜ್ಯವು 26ನೇ ರಾಷ್ಟ್ರೀಯ ಯುವ ಜನೋತ್ಸವದ ಆತಿಥ್ಯವಹಿಸಿ ರುವ ಇದೇ ಸಂದರ್ಭದಲ್ಲಿ, ಇದರ ಭಾಗ ವಾಗಿ ಯೋಗಾಥಾನ್ ಆಯೋ ಜಿಸಲಾಗುತ್ತಿದೆ. 10 ಸಾವಿರ ಯೋಗ ಬೋಧಕರು ಸಹಿತ 10 ಲಕ್ಷಕ್ಕೂ ಅಧಿಕ ಜನರು ಯೋಗಾಭ್ಯಾಸ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗುತ್ತಿದೆ.
ರಾಜಸ್ಥಾನದಲ್ಲಿ ಸುಮಾರು 1.6 ಲಕ್ಷ ಜನರಿಂದ ಮಾಡಿದ್ದ ದಾಖಲೆಯನ್ನು ಯೋಗಥಾನ್ ಮೂಲಕ ಅಳಿಸಲಾ ಗುತ್ತದೆ. ಇದರ ಜತೆಗೆ ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವನ್ನಾಗಿ ಮಾಡಲಾಗುತ್ತದೆ ಎಂದರು.