Advertisement

ಡಾ|ಗುರುರಾಜ ಭಟ್ಟರಿಗೆ ಋಗ್ವೇದದ ಸರ್ಟಿಫಿಕೇಟ್‌!

12:14 PM Apr 18, 2017 | |

ಉಡುಪಿ: ಯಾವ ರೀತಿ ಜೀವನ ನಡೆಸಬೇಕು ಎಂಬುದಕ್ಕೆ ಋಗ್ವೇದದಲ್ಲಿ ಒಂದೇ ವಾಕ್ಯದ ಉತ್ತರವಿದೆ. ಅದುವೇ “ಮುಂದಿನ ಪೀಳಿಗೆ ನೆನಪಿಸಿಕೊಳ್ಳುವಂತೆ ಜೀವನ ನಡೆಸಬೇಕು’ ಎಂಬುದು. ಇದೇ ರೀತಿಯಲ್ಲಿ ಡಾ| ಪಾದೂರು ಗುರುರಾಜ ಭಟ್ಟರು ಬದುಕಿದರು. ಆದ್ದರಿಂದ ಗುರುರಾಜ ಭಟ್ಟರಿಗೆ ಋಗ್ವೇದದ ಪ್ರಮಾಣ ಪತ್ರ ಸಿಕ್ಕಿದಂತಾಗಿದೆ. 

Advertisement

ಸೋಮವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಗುರುರಾಜ ಭಟ್‌ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಪುರಾತತ್ವ, ಪ್ರಾಚೀನ ಇತಿಹಾಸ ಹಾಗೂ ನಾಣ್ಯಶಾಸ್ತ್ರ ಕ್ಷೇತ್ರದ ಸಂಶೋಧಕ ಮೈಸೂರಿನ ಪ್ರೋ| ಎ.ವಿ. ನರಸಿಂಹಮೂರ್ತಿ ಅವರ ಅಭಿಮತವಿದು. 

ತುಳುನಾಡಿನ ಐಡೆಂಟಿಟಿ 
ಮೈಸೂರಿಗೆ ಮಹಾರಾಜರು ಐಡೆಂಟಿಟಿ ಕೊಟ್ಟಂತೆ, ಗುರುರಾಜ ಭಟ್ಟರು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ತುಳುನಾಡಿಗೊಂದು ಘನತೆ ತಂದುಕೊಟ್ಟರು, ಗುರುತಿಸುವಂತೆ ಮಾಡಿದರು. ಮಾತೃಭೂಮಿಯ ಋಣ ತೀರಿಸುವ ಕೆಲಸವನ್ನು ಪರಿಶ್ರಮದಿಂದ, ಶ್ರದ್ಧೆಯಿಂದ ಮಾಡಿದರು ಎಂದು ಅವರ ಒಡನಾಡಿಗಳಾದ ಪ್ರೊ| ನರಸಿಂಹಮೂರ್ತಿ ಹೇಳಿದರು. 

ಸಂಶೋಧನೆಗೆ ಆದ್ಯತೆ: ಡಿವಿಎಸ್‌
ಸುಮಾರು 2,000 ದೇವಸ್ಥಾನಗಳ ಅಧ್ಯಯನ ನಡೆಸಿದ ಡಾ| ಗುರುರಾಜ ಭಟ್ಟರ ಪರಿಶ್ರಮ ಬಹಳ ದೊಡ್ಡದು ಎಂದು ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೇಳಿದರು. ಸಾಂಸ್ಕೃತಿಕ ಇತಿಹಾಸ ಮತ್ತು ಸಂಶೋಧನೆಗೆ ಕೇಂದ್ರ ಸರಕಾರ ಆದ್ಯತೆ ಕೊಡುತ್ತಿದೆ. ನಾಲ್ವರು ಪಿಎಚ್‌ಡಿ ಮಾಡುವವರಿಗೆ ಒಬ್ಬರು ಮಾರ್ಗದರ್ಶಕರು ಇರಬೇಕೆಂಬ ನಿಯಮವಿದೆ. ಆದರೆ ದಿಲ್ಲಿ ವಿ.ವಿ.ಯಲ್ಲಿ 40 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಒಬ್ಬರು ಮಾರ್ಗದರ್ಶಕರಿದ್ದಾರೆ. ವಿದೇಶಗಳಲ್ಲಿ ಶೇ. 3ರಷ್ಟು ಸಂಶೋಧನ ಕ್ಷೇತ್ರದಲ್ಲಿದ್ದರೆ ಭಾರತದಲ್ಲಿ ಶೇ. 0.15 ಮಾತ್ರ ಸಂಶೋಧನ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಸಂಶೋಧನೆ ನಡೆಯದೆ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲ. ಸರಕಾರ ಉನ್ನತ ಶಿಕ್ಷಣ, ಸಂಶೋಧನೆಗೆ ಆದ್ಯತೆ ನೀಡುತ್ತಿದೆ. ಕೇಂದ್ರ ಸರಕಾರ ಪ್ರತಿವರ್ಷ ಐದು ಐಐಟಿ, ಐದು ಐಐಎಸ್‌ಸಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಸದಾನಂದ ಗೌಡ ತಿಳಿಸಿದರು. 

ಮಾಜಿ ಸಚಿವ ಪ್ರೊ| ಬಿ.ಕೆ. ಚಂದ್ರಶೇಖರ್‌, ಕರ್ನಾಟಕ ಜ್ಞಾನ ಆಯೋಗದ ಮಾಜಿ ಸದಸ್ಯ ಕಾರ್ಯದರ್ಶಿ, ಮುಕ್ತ ವಿ.ವಿ. ನಿವೃತ್ತ ಕುಲಪತಿ ಡಾ| ಕೆ. ಸುಧಾ ರಾವ್‌ ಮುಖ್ಯ ಅತಿಥಿಗಳಾಗಿದ್ದರು. ಅರ್ಥಶಾಸ್ತ್ರಜ್ಞ, ಪ್ರಧಾನಿ ಅವರ ಆರ್ಥಿಕ ಸಲಹೆ ಗಾರರಾಗಿದ್ದ ಡಾ| ಮಾರ್ಪಳ್ಳಿ ಗೋವಿಂದ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ಗುರುರಾಜ ಭಟ್‌ ಸ್ಮಾರಕ ಟ್ರಸ್ಟ್‌ ಗೌರವಾಧ್ಯಕ್ಷ ಪೊ›| ಪಿ. ಶ್ರೀಪತಿ ತಂತ್ರಿ
ಸ್ವಾಗತಿಸಿ ಕಾರ್ಯದರ್ಶಿ ವಿಶ್ವನಾಥ ಪಾದೂರು ಪ್ರಶಸ್ತಿ ಪತ್ರ ವಾಚಿಸಿದರು. ಅಧ್ಯಕ್ಷೆ ಪಾರ್ವತಮ್ಮ, ಟ್ರಸ್ಟ್‌ ಸದಸ್ಯರು ಉಪಸ್ಥಿತರಿದ್ದರು. ಜಲಂಚಾರು ರಘುಪತಿ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next