Advertisement

ಸಮನ್ವಯ ಸಮಿತಿ ಸಭೆಗೆ ಪರಂ ಭಿನ್ನರಾಗ

06:00 AM Aug 23, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾದಕ್ಕೆ ಬೆಂಬಲ ನೀಡಿದ್ದು, ಸದ್ಯಕ್ಕೆ ಸಮನ್ವಯ ಸಮಿತಿ ಸಭೆ ಬೇಡ ಎಂದಿದ್ದಾರೆ.
ಆದಷ್ಟು ಬೇಗ ಸಮನ್ವಯ ಸಮಿತಿ ಸಭೆಗೆ ದಿನಾಂಕ ನಿಗದಿಪಡಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯದ ನಡುವೆಯೇ ಡಾ.ಜಿ.ಪರಮೇಶ್ವರ್‌ ಭಿನ್ನರಾಗ ಹಾಡಿದ್ದಾರೆ.

Advertisement

ಈ ಕುರಿತು ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಈ ಸಂದರ್ಭದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವುದು ಸೂಕ್ತ ಅಲ್ಲ ಎನ್ನುವ ಕಾರಣಕ್ಕೆ ಸಮನ್ವಯ ಸಮಿತಿ ಸಭೆಯನ್ನು ಮುಂದೂಡಲಾಗಿದೆ ಎಂದರು. ಈ ಮೂಲಕ ಸದ್ಯಕ್ಕೆ ಸಮನ್ವಯ ಸಮಿತಿ ಸಭೆ ನಡೆಯುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಈ ತಿಂಗಳು ಸಮನ್ವಯ ಸಮಿತಿ ಸಭೆ ನಡೆಯುವುದು ಅನುಮಾನ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಸಭೆ ನಡೆಸಲು ಬಯಸಿದರಾದರೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಮನ್ವಯ ಸಮಿತಿ ಸಭೆ ನಡೆಸುವುದು ಬೇಡ ಎಂದು ಹೇಳುತ್ತಿದ್ದಾರೆ. ಇದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ಶೀತಲ ಸಮರ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸಮನ್ವಯ ಸಮಿತಿ ಸಭೆ ನಿಗದಿಪಡಿಸುವಂತೆ ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌ ಮೇಲೆ ಸಿದ್ದರಾಮಯ್ಯ ಒತ್ತಡ ಹೇರಲಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 8 ಜನ ಮೃತ ಪಟ್ಟಿದ್ದಾರೆ. ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣಾ ಕಾರ್ಯ ನಡೆದಿದೆ. ಅನೇಕ ದಾನಿಗಳು ಸಾಕಷ್ಟು ಅಗತ್ಯ ವಸ್ತುಗಳನ್ನು ನೀಡಿದ್ದು, ಕೊಡಗು ಜಿಲ್ಲಾಡಳಿತ ಎಲ್ಲವನ್ನೂ ನಿರಾಶ್ರಿತರಿಗೆ ಹಂಚಿಕೆ ಮಾಡುತ್ತಿದೆ. 40 ಪರಿಹಾರ ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
– ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next