Advertisement

ಡಾ|ದೀಪಶ್ರೀ ಗುಜ್ಜಾರ್‌ ‘ದಾವಣಗೆರೆ ಗೃಹಿಣಿ ‘

09:57 AM Mar 22, 2022 | Team Udayavani |

ದಾವಣಗೆರೆ: ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಸಾಮಾಜಿಕ ಸಾಂಸ್ಕೃತಿಕ ಕಾಳಜಿಯ ಸಮಾಜಮುಖೀ ಕಾಯಕಗಳಲ್ಲಿ ತೊಡಗಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ವಿಜಯಪುರದ ಸಾಹಿತಿ, ಶ್ರೀಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಗಿರಿಜಾ ಮಾಲಿ ಪಾಟೀಲ್‌ ಹೇಳಿದರು.

Advertisement

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ವಿಜಯಲಕ್ಷ್ಮೀ ರಸ್ತೆಯ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ “ದಾವಣಗೆರೆ ಗೃಹಿಣಿ ಸ್ಪರ್ಧೆ-2022′ ಸ್ಪರ್ಧಾ ವಿಜೇತರಿಗೆ ಮಸ್ತಕದ ಮೇಲೆ ಕಿರೀಟವಿಟ್ಟು, ಸ್ಮರಣಿಕೆ, ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕೂಡು ಕುಟುಂಬಗಳಲ್ಲಿ ಸೌಜನ್ಯದ ಹೊಂದಾಣಿಕೆಯ ಪರಮಿತಿಯಿಂದಲೇ ಸಂಸಾರ ಸಮತೋಲನದಲ್ಲಿ ಸಾಗುತ್ತದೆ. ಈ ಹಂತದಲ್ಲಿ ಮಹಿಳೆಯರು, ತಮ್ಮ ಇಚ್ಛಾಶಕ್ತಿಯೊಂದಿಗೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಾಳ್ಮೆಯಿಂದ ಸಾಗಿದಾಗ ಕುಟುಂಬ ನಿರ್ವಹಣೆಯ ಹಾದಿ ಸುಗಮವಾಗುತ್ತದೆ. ಮಹಿಳೆಯರು ಎಲ್ಲ ಹಂತದ ಸಬಲೀಕರಣಕ್ಕೆ ಪುರುಷರ ಬೆಂಬಲ ಬೇಕೇಬೇಕು. ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ. ಈ ನಮ್ಮ ಪರಂಪರೆಗಳನ್ನು ಪುನರೋತ್ಥಾನಗೊಳಿಸುವ ನಿಟ್ಟಿನಲ್ಲಿ ಕಲಾಕುಂಚ ಮಹಿಳಾ ವಿಭಾಗ ಮುಂಚೂಣಿಯಲ್ಲಿ ಇರುವುದು ಹೆಮ್ಮೆ ತರುವ ವಿಚಾರ ಎಂದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೋಜಾ ಮಾತನಾಡಿ, ಮುಂದಿನ ದಿನಗಳಲ್ಲಿ ಗೃಹಿಣಿ ಸ್ಪರ್ಧೆಯನ್ನು ಹಿರಿಯ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸಿದರೆ ಸೂಕ್ತ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಯುವ ಕವಯತ್ರಿ ಮಂಜುಳಾ ಪ್ರಸಾದ್‌ ಬಂಗೇರ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಒಂದು ತಿಂಗಳಿಗೆ ಸೀಮಿತವಾಗಿರದೇ ವರ್ಷಪೂರ್ತಿ ಮಹಿಳೆಯ ಸರ್ವತೋಮುಖ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗುವಂತಾಗಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಪ್ರತಿ ಮನೆ, ಮನಗಳಲ್ಲಿ ಮಹಿಳೆಯರ ಬಗ್ಗೆ ಗೌರವ, ಉತ್ತಮ ಸ್ಥಾನ, ಮಾನ ಕೊಡುವ ಔದಾರ್ಯತೆ ಎಲ್ಲರಲ್ಲಿ ಇರಬೇಕು ಎಂದರು.

ದಾವಣಗೆರೆ ಗೃಹಿಣಿ ಸ್ಪರ್ಧೆಯಲ್ಲಿ ಡಾ| ದೀಪಶ್ರೀ ಪ್ರಮೋದ್‌ ಗುಜ್ಜಾರ್‌ ಪ್ರಥಮ, ಲೀಲಾ ಸುಭಾಷ್‌ ದ್ವಿತೀಯ ಹಾಗೂ ಮಧು ಸಂಕೇತ್‌ ಮತ್ತು ಉಮಾ ಮಹೇಶ್ವರಿ ತೃತೀಯ ಸ್ಥಾನ ಪಡೆದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ನಿಹಾರಿಕ ಬಾಲಪ್ರತಿಭೆಗೆ ಸನ್ಮಾನಿಸಿ, ಗೌರವಿಸಲಾಯಿತು. ಗೃಹಿಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಯಿತು.

ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್‌ ಶೆಣೈ, ಸಂಸ್ಥೆಯ ಗೌರವ ಅಧ್ಯಕ್ಷೆ ವಸಂತಿ ಮಂಜುನಾಥ್‌, ಚನ್ನಗಿರಿ ವಂಶಸ್ಥರ ಐದನೇ ತಲೆಮಾರಿನ ರಶ್ಮಿ ಭರತ್‌ ಚನ್ನಗಿರಿ, ಗುಪ್ತದಾನಿ ಸಮಾಜ ಸೇವಕಿ ಸಾವಿತ್ರಾ ರೇವಣಸಿದ್ದಪ್ಪ ಆನೆಕೊಂಡ ವೇದಿಕೆಯಲ್ಲಿದ್ದರು. ಮಂಜುಳಾ ಸುನೀಲ್‌ ಸ್ವಾಗತಿಸಿದರು. ಸಾವಿತ್ರಿ ಜಗದೀಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next