Advertisement

ಮಠಗಳು ಆಯಾ ಧರ್ಮದ ಪ್ರತೀಕ: ಡಾ|ಹೆಗ್ಗಡೆ

09:17 AM Aug 21, 2022 | Team Udayavani |

ಕಾರ್ಕಳ : ಧರ್ಮ ಜಾಗೃತಿ, ಧಾರ್ಮಿಕತೆ ಹೆಚ್ಚಬೇಕು. ಮಠಗಳಲ್ಲಿನ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಗಳು ನಡೆಯುತ್ತಿರಬೇಕು. ಮಠಗಳು ನಮ್ಮ ರಕ್ಷಣೆಯ ಶಕ್ತಿಯಾಗಿ ಕೆಲಸ ಮಾಡುತ್ತಿವೆ. ಎಲ್ಲ ಮಠಗಳು ಆಯಾ ಧರ್ಮದ ಪ್ರತೀಕವಾಗಿವೆ. ಕಾರ್ಕಳದ ಜೈನ ಮಠ ಎಲ್ಲರ ಪಾಲಿನ ಮಠವಾಗಿ ಸುವ್ಯವಸ್ಥೆ, ಸುಭದ್ರ ಹಾಗೂ ಅನುಕೂಲಕರ ವಿನ್ಯಾಸದಲ್ಲಿ ನಿರ್ಮಾಣವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಹಾರೈಸಿದರು.

Advertisement

ಪೂಜ್ಯ ಶ್ರೀ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ 70ನೇ ಜನ್ಮದಿನದ ಸಂಭ್ರಮಾಚರಣೆ ಹಾಗೂ ಶ್ರೀ ಜೈನಮಠ ದಾನಶಾಲೆ ಕಾರ್ಕಳ ಇದರ ಪುನರ್‌ ನಿರ್ಮಾಣದ ಶಿಲಾನ್ಯಾಸ ವಿಧಿ ನೆರವೇರಿಸಿ ಅವರು ಮಾತನಾಡಿದರು.

ಕಾರ್ಕಳದ ಜೈನ ಮಠ ಪುರಾತನವಾಗಿದ್ದು, ಎಲ್ಲರ ಸಹಭಾಗಿತ್ವದಲ್ಲಿ ಮಠದ ಪುನರ್‌ ನಿರ್ಮಾಣ ನಡೆಯಬೇಕು. ಸರಕಾರದಿಂದಲೂ ಸಹಕಾರ ಒದಗಿಸುವಂತೆ ಸಚಿವ ವಿ. ಸುನಿಲ್‌ ಕುಮಾರ್‌ ಅವರ ಬಳಿ ಮನವಿ ಮಾಡಿದರು. ಕನಕಗಿರಿ ಶ್ರೀ ಜೈನಮಠದ ಸ್ವಸ್ತಿ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಧರ್ಮ, ಸಂಸ್ಕೃತಿ, ಆಧ್ಯಾತ್ಮದ ಧರ್ಮ ವಿದ್ಯೆಯನ್ನು ರಾಜರ ಕಾಲದಿಂದಲೂ ತುಳುನಾಡು ನೀಡಿದೆ ಎಂದರು.

ಇದನ್ನೂ ಓದಿ : ದಾಖಲೆ ಪೂರ್ಣವಾಗಿದ್ದರೆ ತತ್‌ಕ್ಷಣ ತೀರ್ಮಾನ : ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜೈನ್‌ ಸರ್ಕ್ನೂಟ್‌ ಆಗಿ ಅಭಿವೃದ್ಧಿ: ಸುನಿಲ್‌
ಸಚಿವ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಮೂಡುಬಿದಿರೆ ಹಾಗೂ ಕಾರ್ಕಳವನ್ನು ಕೇಂದ್ರ ಸರಕಾರದ ಜೈನ್‌ ಸರ್ಕ್ನೂಟ್‌ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೈಲೂರಿನ ಪರಶುರಾಮ ಪ್ರತಿಮೆ ಸಹಿತ ಎಲ್ಲವನ್ನು ಸೇರಿಸಿ ಪ್ರವಾಸಿ ಕೇಂದ್ರವಾಗಿ ಈ ಭಾಗವನ್ನು ಅಭಿವೃದ್ಧಿಗೊಳಿಸಲಾಗುವುದು, ಜೈನ ಮಠ ನಿರ್ಮಾಣ ಸಂಬಂಧ ಸರಕಾರದಿಂದ ಅನುದಾನ ಒದಗಿಸುವಲ್ಲಿ ಮುಂಚೂಣಿಯಲ್ಲಿ ಶ್ರಮಿಸುವುದಾಗಿ ಅವರು ಹೇಳಿದರು.

Advertisement

ವಿವಿಧ ಜೈನಮಠಗಳ 9 ಮಂದಿ ಭಟ್ಟಾರಕ ಸ್ವಾಮೀಜಿಗಳು ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮುಂತಾದವರು ಉಪಸ್ಥಿತರಿದ್ದರು. ಎಂ.ಕೆ. ವಿಜಯಕುಮಾರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಪುಷ್ಪರಾಜ್‌ ಜೈನ್‌ ನೂತನ ಮಠದ ಕಿರುಚಿತ್ರದ ವಿವರ ನೀಡಿದರು. ಮುನಿರಾಜ ರೆಂಜಾಳ ನಿರ್ವಹಿಸಿದರು.

ಡಾ| ಎಂ.ಎನ್‌.ರಿಂದ ತಲಾ 1 ಲಕ್ಷ ರೂ.
ಶ್ರೀ ಜೈನ ಧರ್ಮ ಜಿನೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಮಠದ ಶಿಲನ್ಯಾಸದಲ್ಲಿ ಪಾಲ್ಗೊಳ್ಳುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಸೌಭಾಗ್ಯ ನಮಗೆ ಬಂದಿದೆ. ಎಲ್ಲ ಭಟ್ಟಾರಕ ಸ್ವಾಮೀಜಿಗಳ ಮಠಗಳಿಗೆ ತಲಾ 1 ಲಕ್ಷ ರೂ. ಸಹಾಯಧನ ನೀಡಿದರು. ಜೈನ ಮಠಕ್ಕೆ 15 ಲಕ್ಷ ರೂ. ಘೋಷಣೆ ಮಾಡಿ, 5 ಲಕ್ಷ ರೂ. ಸ್ಥಳದಲ್ಲಿಯೇ ನೀಡಿದರು.

ಹೆಗ್ಗಡೆಯವರಿಂದ ಸ್ವಾಮೀಜಿಗೆ ಸಮ್ಮಾನ
ಗುರುಮನೆಯಲ್ಲಿ ಇರುವ ಗುರು ಸ್ಥಾನದ ಗುರುಗಳನ್ನು ವಿಶೇಷವಾಗಿ ಗುರುತಿಸಬೇಕಿದೆ ಎಂದು ಹೇಳಿದ ಡಾ| ವೀರೇಂದ್ರ ಹೆಗ್ಗಡೆಯವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ವಸ್ತಿ ಶ್ರೀ ಲಲಿತ ಕೀರ್ತಿ ಸ್ವಾಮೀಜಿಯವರನ್ನು ಸಮ್ಮಾನಿಸಿದರು. ಮಠ ನಿರ್ಮಾಣಕ್ಕೆ ಹಲವರು ಆರ್ಥಿಕ ನೆರವನ್ನು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next