ಗ್ರಾಮ ಪಂಚಾಯಿತಿ ಚುನಾವಣೆ: ಯುವಶಕ್ತಿಯಿಂದ ಗ್ರಾಮಸ್ವರಾಜ್ಯ ಗ್ರಾಮದ ಕಲ್ಪನೆ ಪ್ರತಿಯೊಬ್ಬ ಗ್ರಾಮಸ್ಥನಿಂದ ಹುಟ್ಟುವಂತದಾಗಿದೆ. ತಮ್ಮ ಇಷ್ಟಾರ್ಥಗಳ ಬೇಡಿಕೆಗಳ ಚಿಂತನೆ ಹಾಗೂ ಕೊರತೆಗಳ ನೀಗಿಸುವೆಡೆಗೆ ಅಭಿವೃದ್ಧಿ ಜತೆಗೆ ಅನೇಕ ಆಸೆ ಆಕಾಂಶೆಗಳು ಗ್ರಾಮಸ್ಥನಾದವನಲ್ಲಿ ಹುಟ್ಟುವಂತಹದು ಸಹಜ. ಇದಕ್ಕಾಗಿ ವಿದ್ಯಾವಂತರಾದ, ಪ್ರಜ್ಞಾವಂತ ಹಾಗೂ ಬುದ್ಧಿವಂತರಾದ ಯುವಜನತೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ನಮ್ಮ ಸುತ್ತಮುತ್ತಲಿರುವ ನೆಲ -ಜಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಸದ್ಬಳಸಿದಾಗಲೆ ದೇಶದ ಪ್ರಗತಿ ಸಾಧ್ಯವಾಗಲಿದೆ. ಆದರೆ ಅದರೆಡೆಗೆ ಚಿಂತಿಸುವ ಯುವಶಕ್ತಿ ಜಾಗೃತವಾಗಬೇಕಿದೆ. ಪ್ರಕೃತಿ ಮನುಷ್ಯನ ಆಸೆಗಳನ್ನೆಲ್ಲ ಈಡೇರಿಸಬಲ್ಲದು ಆದರೆ ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಂದೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಹಳ್ಳಿಗಳು ಹೊಸ ರೂಪ ತಾಳುವಲ್ಲಿ ಇಂದು ಯುವ ಸಮುದಾಯಕ್ಕೆ ಎಲ್ಲಾ ಕ್ಷೇತ್ರಗಳಲ್ಲು ಅವಕಾಶ ಸಿಗಬೇಕಿದೆ. ಈ ಮೂಲಕ ಗ್ರಾಮ ಸ್ವರಾಜ್ಯದ ಚಿಂತನೆ ಸಾಕಾರಗೊಳ್ಳಬೇಕಿದೆ. ನಮಗೆ ಈ ವಿಚಾರ ಯಾಕೆ ಬಹಳ ಇಷ್ಟವಾಗಿರುವುದೆಂದರೆ ಕಳೆದ 30 ವರ್ಷಗಳಲ್ಲಿ ಸಮಾಜದಲ್ಲಿ ಧ್ವನಿ ಇಲ್ಲದೆ ಇದ್ದವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿವರ್ಗಕ್ಕೆ ಸೇರಿದವರು ಚುನಾವಣೆಗೆ ಬರುವಂತಹಾ ಸಂದರ್ಭ ಬಹಳ ಕಷ್ಟದ ಸವಾಲುಗಳಿದ್ದವು. ಆದರೆ ಪ್ರಜಾಪ್ರಭುತ್ವ ಅನೇಕ ಬದಲಾವಣೆ ತಂದಿದೆ. ಇದರ ಉದ್ದೇಶದಿಂದಲೇ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆವು. ಪ್ರಾಯೋಗಿಕವಾಗಿ ನಾವು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದೆಲ್ಲೆಡೆ ವ್ಯಾಪಿಸಿದ್ದು, ಅಭಿವೃದ್ಧಿಯ ನೆಪದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿಯನ್ನು ಕಡೆಗಣಿಸಬಾರದು ಎಂಬ ಚಿಂತನೆ ಗಾಢವಾಗಿಸಿದ ಪರಿಣಾಮ ಇಂದು ಸಮುದಾಯ ಮಂದಿ ಖುಷಿಯಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ದೊಡ್ಡ ಕೊಡುಗೆ ಏನೆಂದರೆ ಬುದ್ದಿವಂತ, ಕಳಕಳಿ ಇರತ್ತಕ್ಕಂತ ಶ್ರದ್ಧಾವಂತ ಸಮೂಹವನ್ನ ತಯಾರಿಸಿದ್ದೇವೆ. ನಮ್ಮ ಯೋಜನೆಯ ಫಲಾನುಭವಿಗಳೆ ಹೆಚ್ಚಿನ ಕಡೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಾಗಿ ನಾಯಕತ್ವ ವಹಿಸಿಕೊಂಡು ಪ್ರಗತಿಯ ಪಾಲುದಾರರಾಗಿದ್ದಾರೆ. ಮಹಿಳೆಯರು ಸಾಕ್ಷರರಾಗಿ, ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ನಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ. ಇಂದು ಪ್ರಬುದ್ಧರಾಗಿರುವ ಯುವ ಸಮೂಹ ಚುನಾವಣೆ ಸ್ಪರ್ಧೆಗೆ ದುಮುಕುತ್ತಿದೆ. ಇದು ಒಂದು ರೀತಿ ಪರಿವರ್ತನೆಯ ಸೃಷ್ಟಿಯಾಗಿದೆ. ಏಕೆಂದರೆ 50 ವರ್ಷ ಮೇಲ್ಪಟ್ಟವರು ಇಂದು ಆಧುನಿಕ ಯಂತ್ರೋಪಕರಣ (ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಬಳಕೆ ಒಗ್ಗಿಕೊಳ್ಳುವುದು ಕಷ್ಟಸಾಧ್ಯ. ಇದು ವಯಸ್ಸಿನ ಧರ್ಮಕ್ಕುನುಗುಣವಾಗಿ ಸಹಜವೇ ಸರಿ. ಆದರೆ ಇಂದಿನ ಯುವ ಸಮೂಹ ಪತ್ರಿಕೆ ಓದುವುದು, ಮೊಬೈನಲ್ಲಿ ವಿಷಯಗಳನ್ನ ಸಂಗ್ರಹಿಸುವುದು, ಮಾಧ್ಯಮಗಳ ಮೂಲಕ ಪ್ರಾಪಂಚಿಕ ಜ್ಞಾನ ಬಹುಬೇಗನೆ ಗ್ರಹಿಸಿಕೊಳ್ಳುವಂತವರಾಗಿದ್ದಾರೆ. ಹಾಗಾಗಿ ಪ್ರಬುದ್ಧರಾಗಿರತ್ತಕ್ಕಂತ, ಜ್ಞಾನಿಗಳಗಳಾಗಿರತ್ತಕ್ಕಂತ ಉತ್ಸಾಹಿ ಯುವಕರು ಗ್ರಾಮದ ಪ್ರಗತಿಯ ರೂವಾರಿಗಳಾಗಬೇಕು. ಆಧುನಿಕ ಭಾರತ ಕಲ್ಪನೆ ಜತೆಗೆ ಜನತೆ ಆಶೋತ್ತರ ಈಡೇರಿಸೊಕೊಳ್ಳಲು ಯುವ ಚಿಂತನೆಯ ಜ್ಞಾನಿಗಳು ಚುನಾವಣೆ ಸ್ಪರ್ಧೆಗೆ ನಿಲ್ಲಬೇಕು ಎಂಬುದು ನಮ್ಮ ಆಶಯವಾಗಿದೆ. ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಇಲ್ಲದಿರುವುದೇ ಉತ್ತಮ. ರಾಜಕೀಯ ಹುಟ್ಟಿದ್ದೇ ಆದಲ್ಲಿ ಗೆದ್ದವರು ಸೋತವರು ಎಂಬ ಎರಡು ಪಕ್ಷ ಒಡೆದು ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಹತಾಷೆಯ ಕದ ತಟ್ಟುತ್ತವೆ. ಚುನಾವಣೆ ಮುಗಿದ ಮುಂದಿನ ಕ್ಷಣವೇ ಜಿದ್ದು, ಹಟ, ಸೋಲಿನ ಸೇಡು ಹುಟ್ಟಿಕೊಳ್ಳುತ್ತವೆ. ಚುನಾವಣೆಯಲ್ಲಿ ಸೋಲು ಗೆಲುವಿನ ದ್ವೇಷದ ವಾತಾವರಣ ಬೆಳೆಸಬಾರದು. ಚುನಾವಣೆ ಪ್ರಕ್ರಿಯೆ ನಡೆದ ಬಳಿಕ ಎಲ್ಲರೂ ನಾವು ಒಂದು ಎಂಬ ನೆಲೆಯಲ್ಲಿ ಗ್ರಾಮದ ಸರ್ವತೋಮುಖ ಪ್ರಗತಿಯ ಕಲ್ಪನೆಯಲ್ಲಿ ಜತೆಯಾಗಬೇಕಿದೆ. ಇದುವೇ ಗ್ರಾಮ ಸ್ವರಾಜ್ಯದ ಗುಟ್ಟಾಗಿದೆ. ಹಾಗಾಗಿ ಶ್ರೀ ಕ್ಷೇ.ಗ್ರಾ. ಯೋಜನೆಯ ಫಲಾನುಭವಿಗಳು, ಪ್ರಜ್ಞಾವಂತ ನಾಗರಿಕರು, ಪ್ರಭುದ್ಧರು, ಬುದ್ಧಿವಂತರು, ಶಶಕ್ತರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲು ನಮ್ಮ ಸಹಮತವಿದೆ. ಆದರೆ ನಾವು ಅವರಿಗೆ ಯಾವುದೇ ಸಂದೇಶ, ಆದೇಶ, ಪ್ರೋತ್ಸಾಹವನ್ನ ನೀಡುವುದಿಲ್ಲ. ಆದರೆ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವರಾಜ್ಯ ಕಲ್ಪನೆಯನ್ನು ಸಾಕಾರಗೊಳಿಸಲಿ ಎಂದು ನಾನು ಆಶಿಸುತ್ತೇನೆ. * ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.