ರಾಮನಗರ: ಡಿಕೆ ಸಹೋದರರ ಅಭೇಧ್ಯ ಕೋಟೆ ಎನಿಸಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಗ್ರಾಮಾಂತರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕನಕಪುರದ ಬಂಡೆ ಹೃದಯ ತಜ್ಞನ ಮುಂದೆ ಕರಗಿ ಹೋಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಮತ್ತು ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ನಡುವಿನ ಸ್ಪರ್ಧೆಯಿಂದಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಅಖಾಡ ಎನಿಸಿತ್ತು. ಗೆಲುವಿಗಾಗಿ ಎರಡೂ ಕಡೆಯವರೂ ಸಾಕಷ್ಟು ಕಸರತ್ತು ನಡೆಸಿದ್ದರು. ಅಬ್ಬರದ ಪ್ರಚಾರ, ಪರ-ವಿರೋಧ ಹೇಳಿಕೆಗಳಿಂದಾಗಿ ಚುನಾವಣಾ ಕಣ ಸಾಕಷ್ಟು ಕಾವು ಪಡೆದಿತ್ತು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದ ಡಾ.ಮಂಜುನಾಥ್ 2.60 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲೂ ಮೈತ್ರಿಗೆ ಮುನ್ನಡೆ
ಕಾಂಗ್ರೆಸ್ ಶಾಸಕರು ಗೆದ್ದಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸುವ ಮೂಲಕ ಗ್ರಾಮಾಂತರದಲ್ಲಿ ಮೈತ್ರಿ ಸಫಲಗೊಂಡಿದೆ. ಕಾಂಗ್ರೆಸ್ ಶಾಸಕರು ಗೆದ್ದಿರುವ ಮಾಗಡಿಯಲ್ಲಿ 30 ಸಾವಿರಕ್ಕೂ ಹೆಚ್ಚು, ಕುಣಿಗಲ್‌ನಲ್ಲಿ 27 ಸಾವಿರ, ಆನೇಕಲ್‌ನಲ್ಲಿ 28 ಸಾವಿರ ಮುನ್ನಡೆ ಬಿಜೆಪಿಗೆ ದೊರೆತಿದೆ. ರಾಮನಗರದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆಯಾದರೂ ಅದು ಕೇವಲ 145 ಮತಗಳು ಮಾತ್ರ. ಡಿಕೆಎಸ್ ಸಹೋಧರರ ಭದ್ರಕೋಟೆ ಎನಿಸಿದ್ದ ಕನಕಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಪಡೆಯುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಅಲ್ಲಿ ಕೇವಲ 26 ಸಾವಿರ ಮತಗಳ ಮುನ್ನಡೆ ದೊರೆತಿದ್ದು ಬಹುದೊಡ್ಡ ಹೊಡೆತವಾಗಿದೆ. ಬಿಜೆಪಿ ಶಾಸಕರು ಗೆದ್ದಿರುವ ಬೆಂಗಳೂರು ದಕ್ಷಿಣದಲ್ಲಿ 1.10 ಲಕ್ಷ, ರಾಜರಾಜೇಶ್ವರಿ ನಗರದಲ್ಲಿ 96 ಸಾವಿರ ಮತಗಳ ಮುನ್ನಡೆ, ಜೆಡಿಎಸ್ ಗೆಲುವು ಸಾಧಿಸಿರುವ ಚನ್ನಪಟ್ಟಣದಲ್ಲಿ 21 ಸಾವಿರ ಮತಗಳ ಮುನ್ನಡೆ ಡಾ.ಮಂಜುನಾಥ್‌ಗೆ ದೊರೆತಿದೆ.
ಮೊದಲ ಸುತ್ತಿನಿಂದಲೂ ಮುನ್ನಡೆ ಕಂಡುಕೊಂಡ ಡಾ.ಮಂಜುನಾಥ್ ಕೊನೆಯವರೆಗೆ ಮುನ್ನಡೆಯನ್ನು ಕಾಯ್ದುಕೊಂಡೇ ಇದ್ದರು. ಒಂದೆರೆಡು ಸುತ್ತುಗಳಲ್ಲಿ ಮುನ್ನಡೆ ಡಿ.ಕೆ.ಸುರೇಶ್ ಮುನ್ನಡೆ ಕಂಡರಾದರೂ ಬಿಜೆಪಿ ಅಭ್ಯರ್ಥಿ ಪಡೆದಿದ್ದ ಮತಗಳನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ.
ಡಾ.ಮಂಜುನಾಥ್ ವರ್ಚಸ್ಸಿಗೆ ಗೆಲವು
ಲೋಕಸಭಾ ಚುನಾವಣೆಗೂ ಮುನ್ನಾ ಕೇಂದ್ರ ಸರ್ಕಾರ ಕನ್ನಡಿಗರಿಗೆ ತಾರತಮ್ಯ ಮಾಡುತ್ತಿದೆ ಎಂದು ದನಿ ಎತ್ತುವ ಮೂಲಕ ಡಿ.ಕೆ.ಸುರೇಶ್ ಸಾಕಷ್ಟು ಸದ್ದು ಮಾಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರರಾಗಿರುವ ಇವರನ್ನು ಚುನಾವಣೆಯಲ್ಲಿ ಮಣಿಸಬೇಕು ಎಂಬ ಉದ್ದೇಶದಿಂದ ಮೈತ್ರಿ ಕೂಟ ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಡಾ.ಮಂಜುನಾಥ್‌ಗಿದ್ದ ವರ್ಚಸ್ಸು ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಗ್ರಾಮಾಂತರದಲ್ಲಿ ಮೈತ್ರಿ ಯಶಸ್ವಿಯಾಗಿದ್ದು, ಬಿಜೆಪಿ ಪರವಾಗಿ ಇದ್ದ ಅಲೆ, ದೇವೇಗೌಡರ ಬಗ್ಗೆಯಿದ್ದ ಅಭಿಮಾನ ಡಾ.ಮಂಜುನಾಥ್ ಗೆಲುವಿಗೆ ಪ್ಲಸ್ ಆಯಿತು.
ಮೂರು ಬಾರಿ ಗೆಲುವು ಸಾಧಿಸಿದ್ದ ಸಂಸದ ಡಿ.ಕೆ.ಸುರೇಶ್ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ, ಡಿ.ಕೆ.ಸುರೇಶ್ ಡೇರ್‌ಡ್ಯಾಶ್ ವ್ಯಕ್ತಿತ್ವ ಬ್ಯಾಕ್ ಫೈಯರ್ ಆಗಿದ್ದು, ಡಿ.ಕೆ.ಸುರೇಶ್ ವಿರುದ್ಧ ಜೆಡಿಎಸ್-ಬಿಜೆಪಿ ಮುಖಂಡರು ಸಂಘಟಿತ ಹೋರಾಟ ಮಾಡಿದ್ದು, ಕಾಂಗ್ರೆಸ್ ಬಲವಾಗಿ ನಂಬಿದ್ದ ಗ್ಯಾರಂಟಿಗಳು ಮತದಾರರ ಮನಗೆಲ್ಲಲು ಮುಂದಾಗದಿದ್ದು ಡಿ.ಕೆ.ಸುರೇಶ್‌ಗೆ ಮುಳುವಾಯಿತು.
ಎಚ್‌ಡಿಡಿ ಕುಟುಂಬದಿಂದಲೇ ಸೋಲು
2013ರಲ್ಲಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವ ಮೂಲಕ ಸಂಸದರಾಗಿದ್ದ ಡಿ.ಕೆ.ಸುರೇಶ್ ಇದೀಗ ದೇವೇಗೌಡರ ಕುಟುಂಬದ ಡಾ.ಮಂಜುನಾಥ್ ವಿರುದ್ಧ 2.60 ಲಕ್ಷ ಮತಗಳ ಅಂತರದಿಂದ ಪರಾಜಿತರಾಗುವ ಮೂಲಕ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ 1985 ರಿಂದ ಇಲ್ಲಿಯವರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬದ ನಡುವೆ ಐದು ಬಾರಿ ಮುಖಾಮುಖಿ ಸ್ಪರ್ಧೆ ನಡೆದಿದ್ದು, ಮೂರು ಬಾರಿ ದೇವೇಗೌಡರ ಕುಟುಂಬದವರು, ಎರಡು ಬಾರಿ ಡಿ.ಕೆ.ಶಿವಕುಮಾರ್ ಕುಟುಂಬದವರು ಗೆಲುವು ಸಾಧಿಸಿದ್ದಾರೆ.
ಭಾವ ಭಾಮೈದ ಇಬ್ಬರೂ ಭರ್ಜರಿ ಜಯ
ಅಕ್ಕಪಕ್ಕದ ಲೋಕಸಭಾ ಕ್ಷೇತ್ರಗಳಾಗಿದ್ದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಭಾವ ಡಾ.ಸಿ.ಎನ್. ಮಂಜುನಾಥ್ ಸ್ಪರ್ಧೆ ಮಾಡಿದ್ದರು. ಸೋಜಿಗವೆಂದರೆ ಇವರಿಬ್ಬರೂ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ವಿಶೇಷ.
ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ 2.84 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ 2.68 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಭಾವ ಭಾಮೈದ ಇಬ್ಬರೂ ಹೆಚ್ಚು ಮತಗಳ ಮುನ್ನಡೆ ಪಡೆದಿರುವುದು ಗಮನಾರ್ಹ.
ಸು.ನಾ.ನಂದಕುಮಾರ್