ರಾಯಚೂರು: ಬರುವ ಏ.5ರಂದು ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನ್ ರಾಂ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಅವಿನಾಶ್ ರಾಜೇಂದ್ರ ಮೆನನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಸಿರು ಕ್ರಾಂತಿ ಹರಿಕಾರ, ಕಾರ್ಮಿಕ ನಾಯಕ ಡಾ| ಬಾಬೂಜಿ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಅವರ ಜಯಂತಿ ಅರ್ಥಪೂರ್ಣವಾಗಿ ಹಮ್ಮಿಕೊಂಡು ಅವರ ಸಾಧನೆ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಡಾ| ಬಾಬು ಜಗಜೀವನ್ ರಾಂ ಜೀವನ ಚರಿತ್ರೆ ಒಳಗೊಂಡ ಭಾವಚಿತ್ರ ಹಿಡಿದು ಕಲಾ ಹಾಗೂ ತಮಟೆ ತಂಡಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಅಲ್ಲದೇ ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರ ಮುಂಭಾಗದಲ್ಲಿ ಜೀವನ ಚರಿತ್ರೆ ಬಗ್ಗೆ ಮಾಹಿತಿ ನೀಡುವ ಸ್ಟಾಲ್ ಹಾಕಲಾಗುತ್ತದೆ ಎಂದು ತಿಳಿಸಿದರು.
ಜಯಂತಿ ಯಶಸ್ಸಿಗೆ ಸಮಿತಿಗಳನ್ನು ರಚಿಸಲಾಗಿದೆ. ಜಯಂತ್ಯುತ್ಸವ ದಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದರು. ಎಸ್ಪಿ ನಿಖೀಲ್ ಬಿ. ಮಾತನಾಡಿ, ಎಲ್ಲರೂ ಸಹಬಾಳ್ವೆಯಿಂದ ಜಯಂತಿ ಆಚರಿಸೋಣ. ಯಾವುದೇ ರೀತಿಯ ತೊಂದರೆಗಳು ಆಗದ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂದಾಗಿ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ ಎಚ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆ ಅಧಿಕಾರಿ ರಾಜೇಂದ್ರ ಜಲ್ದಾರ್, ನಗರಸಭೆ ಅಧಿಕಾರಿ ಶಷಿ, ಮುಖಂಡರಾದ ರವೀಂದ್ರ ಜಲ್ದಾರ್, ರಾಜು, ಭೀಮಣ್ಣ ಮಂಚಾಲಿ, ಪ್ರಸಾದ್ ಬಂಡಾರಿ, ದುಳ್ಳಯ್ಯ ಗುಂಜಳ್ಳಿ, ಬೋಳಬಂಡೆಪ್ಪ, ಮಹಾವೀರ, ರೆಡ್ಡಿ ತಿಮ್ಮಯ್ಯ ಸೇರಿದಂತೆ ವಿವಿಧ ಮುಖಂಡರು ಇದ್ದರು.