Advertisement

ಡಾ|ಅಮ್ಮೆಂಬಳ ಬಾಳಪ್ಪರವರ 96ನೇ ಜನ್ಮ ದಿನಾಚರಣೆ 

02:19 PM Feb 24, 2018 | Team Udayavani |

ಮಹಾನಗರ: ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಅವರು ಬಡವರ ಹಾಗೂ ದೀನದಲಿತರ ಕಡೆಗಿದ್ದ ಚಿಂತನೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವುದು ಇಂದಿನ ಅಗತ್ಯ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.

Advertisement

ಸ್ವಾತಂತ್ರ್ಯ ಯೋಧ ಡಾ|ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಪೊಲೀಸ್‌ ಲೇನ್‌ನ ನಾಸಿಕ್‌ ಬಿ.ಎಚ್‌. ಬಂಗೇರ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ| ಅಮ್ಮೆಂಬಳ ಬಾಳಪ್ಪರವರ 96ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ರಾಜ್ಯ ಸರಕಾರ ಯಾವುದೇ ರಾಜಕೀಯ ಪ್ರಭಾವ ಇಲ್ಲದಿದ್ದರೂ ಸರಕಾರವೇ ಕರೆದು ಅವರನ್ನು ಭೂ ನ್ಯಾಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಸಾಮಾಜಿಕ ಕಾರ್ಯಗಳಿಗೆ ಅವರಿಗೆ ಪಕ್ಷ, ಜಾತಿಯ ಹಂಗಿರಲಿಲ್ಲ. ಬಡವರನ್ನು ಸಾಮಾಜಿಕವಾಗಿ ಮೇಲೆತ್ತುವುದೊಂದೇ ಅವರ ಧ್ಯೇಯವಾಗಿತ್ತು ಎಂದವರು ಹೇಳಿದರು.

ಡಾ| ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಅಮ್ಮೆಂಬಳ ಆನಂದ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಚಂದ್ರಕಲಾ ನಂದಾವರ ಅವರು, ‘ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಕರಾವಳಿಯ ಪಾತ್ರ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.

ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್‌, ಪತ್ರಕರ್ತ ಶ್ರೀರಾಮ ದಿವಾಣ, ಜಿಲ್ಲಾ ಕುಲಾಲರ ಸಂಘದ ಅಧ್ಯಕ್ಷ ಸುಜೀರ್‌ ಶ್ರೀಧರ್‌ ಕುಡುಪು ಅತಿಥಿಯಾಗಿದ್ದರು. ಸಂಘದ ಕಾರ್ಯದರ್ಶಿ ಉಮೇಶ್‌ ಪಿ.ಕೆ. ಸ್ವಾಗತಿಸಿದರು. ಡಿ.ಎಂ. ಕುಲಾಲ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Advertisement

ಜನ್ಮದಿನಾಚರಣೆ ಶ್ಲಾಘನೀಯ
2014ರಲ್ಲಿ ತನ್ನ 92ನೇ ವರ್ಷದಲ್ಲಿ ನಿಧನ ಹೊಂದಿರುವ ಡಾ| ಅಮ್ಮೆಂಬಳ ಬಾಳಪ್ಪ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಸೇವಾ ಪ್ರತಿಷ್ಠಾನವನ್ನು ಸ್ಥಾಪಿಸಿ ಆ ಮೂಲಕ ಪ್ರತಿ ವರ್ಷ ಅವರ ಜನ್ಮದಿನ ಹಾಗೂ ಪುಣ್ಯತಿಥಿ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ.
– ಎ.ಸಿ. ಭಂಡಾರಿ, ಅಧ್ಯಕ್ಷ,
ತುಳು ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next