Advertisement

ಡಾ|ಅಂಬೇಡ್ಕರ್‌ ಸಮಾಜದ ಚಿಕಿತ್ಸಕ

04:50 PM Apr 15, 2018 | |

ಯಾದಗಿರಿ: ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ಕೊಡುಗೆ ನೀಡುವುದರ ಮೂಲಕ ಸಮಾಜದ
ಚಿಕಿತ್ಸಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಂಜುನಾಥ್‌ ಜೆ. ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ| ಬಿ.ಆರ್‌.ಅಂಬೇಡ್ಕರ್‌ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾನ್‌ ಮಾನವತಾವಾದಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 127ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಡಾ| ಬಿ.ಆರ್‌.ಅಂಬೇಡ್ಕರ್‌ ಮಾನವ ಹಕ್ಕುಗಳ ಹೋರಾಟಗಾರ, ರಾಜಕೀಯ ತಜ್ಞ, ಸಮಾಜಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಇತಿಹಾಸ ತಜ್ಞ, ಖ್ಯಾತ ಚಿಂತಕ, ವಿಶ್ವಮಾನವ, ಆಧುನಿಕ ಭಾರತದ ನಿರ್ಮಾಪಕ, ಶಿಕ್ಷಣ ತಜ್ಞ, ಕಾನೂನು ತಜ್ಞ, ಸ್ತ್ರೀ ಸ್ವಾತಂತ್ರ್ಯವಾದಿ, ಖ್ಯಾತ ಲೇಖಕ, ಶ್ರೇಷ್ಠ ವಾಗ್ಮಿ, ಶಿಸ್ತಿನ ಸಿಪಾಯಿ, ವಿಚಾರವಾದಿ, ಸಮಾಜವಾದಿ, ಅಹಿಂಸಾವಾದಿ, ಕ್ರಾಂತಿಕಾರಿ, ಬಹುಭಾಷಾ ತಜ್ಞ, ನೀರಾವರಿ ತಜ್ಞ, ಕಾರ್ಮಿಕರ ಕಣ್ಮಣಿ, ಬಡವರ ಬಂಧು, ರೈತರ ಪಾಲಿನ ಭಾಗ್ಯದಾತ, ಜಾತಿ ಪದ್ಧತಿ ನಿವಾರಕ, ಭಾರತೀಯ ರಿಜರ್ವ್‌ ಬ್ಯಾಂಕ್‌ ಸೃಷ್ಟಿಕರ್ತ ಹೀಗೆ ಹತ್ತು ಹಲವು ವ್ಯಾಖ್ಯಾನಗಳಿಂದ ಅವರ ಹೆಸರನ್ನು ಉಲ್ಲೇಖ ಮಾಡಬಹುದು ಎಂದು ಅವರು ಬಣ್ಣಿಸಿದರು.

ವಿಶ್ವಸಂಸ್ಥೆ ಡಾ| ಅಂಬೇಡ್ಕರ್‌ ಅವರ ಜನ್ಮ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿದೆ. ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಆಗಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಪ್ರಕ್ರಿಯೆಯೂ ಕೂಡ ಡಾ| ಅಂಬೇಡ್ಕರ್‌ ಅವರ ಸಂವಿಧಾನದ ಅಡಿಯಲ್ಲಿಯೇ ನಡೆಯುತ್ತಿದೆ ಎಂದು ಹೇಳಿದರು.

ದೇಶದಲ್ಲಿ 134 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಅನೇಕ ಜಾತಿ, ಧರ್ಮ, ಮತ, ಭಾಷೆ, ಸಾಂಪ್ರದಾಯ, ಆಚರಣೆ ಇದ್ದರೂ ದೇಶ ಒಟ್ಟಾಗಿ ಪ್ರಪಂಚದಲ್ಲಿ ಮುನ್ನಡೆಯುತ್ತಿರುವುದಕ್ಕೆ ಸಂವಿಧಾನ ಮೂಲ ಕಾರಣವಾಗಿದೆ. ಯುರೋಪ್‌ನಲ್ಲಿ ಒಂದೇ ಧರ್ಮ ಆಚರಣೆ, ಒಂದೇ ಭಾಷೆ ಹೆಚ್ಚು ಬಳಕೆಯಲ್ಲಿದ್ದರೂ ಹಲವು ರಾಷ್ಟ್ರಗಳಾಗಿವೆ ಎಂದು ವಿವರಿಸಿದರು.

Advertisement

ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು, ಜವಾಬ್ದಾರಿ ಕೊಟ್ಟಿದೆ. ಆದ್ದರಿಂದ ಪ್ರತಿಯೊಬ್ಬರು ಬಾಬಾ ಸಾಹೇಬರ ಆಶಯದಂತೆ  ವಿಧಾನ
ಪಾಲಿಸುವುದರ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು. ಪ್ರತಿ ಪಾಲಕ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುನಾಥ ರೆಡ್ಡಿ ಅವರು ಉಪನ್ಯಾಸ ನೀಡಿ, ಡಾ| ಬಿ.ಆರ್‌.ಅಂಬೇಡ್ಕರ್‌
ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಅವರು ವಿಶ್ವ ನಾಯಕರಾಗಿದ್ದಾರೆ. ಅವರು ನೀಡಿದ ಸಂವಿಧಾನ ಕೊಡುಗೆಯಿಂದ ಪ್ರತಿಯೊಬ್ಬರು ಸಂತೋಷದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ಹಕ್ಕು ಕೇಳಿದರೆ ಅಲ್ಲಿ ಶೋಷಣೆ ಕಡಿಮೆಯಾಗುತ್ತದೆ. ಅಸ್ಪೃಶ್ಯತೆ ಆಚರಣೆ ಭಾರತಕ್ಕೆ ಅಂಟಿದ ರೋಗವಾಗಿದೆ. ಇದು ನಿವಾರಣೆ ಆಗುವವರೆಗೂ ದೇಶದ ಪ್ರಗತಿ ನಿಧಾನಗತಿಯಲ್ಲಿರುತ್ತದೆ. ಆದ್ದರಿಂದ ಅಸ್ಪೃಶ್ಯತೆ ನಿವಾರಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ
ಎಂದು ಡಾ| ಅಂಬೇಡ್ಕರ್‌ ಹೇಳಿದ್ದರು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಬ್ರನಾಯಕ ಇದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಣಪತಿ ಪೂಜಾರಿ ಸ್ವಾಗತಿಸಿದರು. ಸುರಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ದೇವಿಂದ್ರ ರುದ್ರವಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next