Advertisement

ಸುರಂಗ ಮಾರ್ಗ ಪುನಶ್ಚೇತನಕ್ಕೆ ಡಿಪಿಆರ್‌

03:22 PM Jul 12, 2017 | |

ವಿಜಯಪುರ: ವಿಜಯಪುರ ನಗರಕ್ಕೆ ನೀರು ಪೂರೈಸುವ ಐತಿಹಾಸಿಕ ಸುರಂಗ ಮಾರ್ಗ ವ್ಯವಸ್ಥೆ ಪುನಶ್ಚೇತನಕ್ಕೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಇರಾನ್‌ ದೇಶದ ತಜ್ಞರಿಂದ ಅಧ್ಯಯನ ನಡೆಯಲಿದ್ದು, ಇದಕ್ಕಾಗಿ 8 ಕೋಟಿ ರೂ. ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹೊಂದಿರುವ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದರು.

Advertisement

ಮಂಗಳವಾರ ನಗರದ ಟಕ್ಕೆ ಪ್ರದೇಶದಲ್ಲಿ ಐತಿಹಾಸಿಕ ಸುರಂಗ ಮಾರ್ಗ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ
ಅವರು, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಇಂತಹ ಬಾವಿಗಳ ವ್ಯವಸ್ಥೆ ಇರಾನ್‌, ತುರ್ಕಿ, ಚೀನಾ, ಅಫಘಾನಿಸ್ತಾನ್‌ ಅಲ್ಲದೆ ಭಾರತದ ವಿಜಯಪುರ ಹಾಗೂ ಬೀದರ ನಗರಗಳಲ್ಲಿ ಕಾಣಲು ಸಾಧ್ಯವಿದೆ. ವಿಶ್ವದಲ್ಲೇ ವಿಶಿಷ್ಟವಾಗಿರುವ ವಿಜಯಪುರ ನಗರದ ಐತಿಹಾಸಿಕ ಸುರಂಗ ವ್ಯವಸ್ಥೆ ಅಧ್ಯಯನಕ್ಕೆ ಇರಾನ್‌ ದೇಶದಿಂದ ತಜ್ಞರೊಬ್ಬರು ಆಗಮಿಸಲಿದ್ದಾರೆ ಎಂದರು.

ಹೀಗಾಗಿ ಕೆರೆ, ಬಾವಿ, ಸುರಂಗ ಮಾರ್ಗ ವ್ಯವಸ್ಥೆಯ ಸಂಪೂರ್ಣ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ 8 ಕೋಟಿ ರೂ. ಮಂಜೂರು ಮಾಡಿದೆ. ಐತಿಹಾಸಿಕ ಸುರಂಗ ಮಾರ್ಗ ವಿದ್ಯುತ್‌ ಸಂಶೋಧನೆ ಇಲ್ಲದ ಆ ಕಾಲಘಟ್ಟದಲ್ಲಿ ರಾಜಧಾನಿಗೆ ಕುಡಿಯುವ ನೀರು, ನೀರಾವರಿ ಯೋಜನೆಗಾಗಿ ರೂಪುಗೊಂಡಿದೆ. ಪುನಶ್ಚೇತನದ ಜತೆಗೆ ಪ್ರವಾಸೋದ್ಯಮಕ್ಕೂ ಪೂರಕವಾಗುವಂತೆ  ಈ ಯೋಜನೆ ರೂಪಿಸಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಸಂಪೂರ್ಣ ಹಾಳಾಗಿದ್ದ ಐತಿಹಾಸಿಕ ಜಲಮೂಲ-ಜಲಸಂಗ್ರಹ ಬಾವಿಗಳ ಪುನಶ್ಚೇತನ ಕಾರ್ಯ ಯಶಸ್ವಿಯಾಗಿದ್ದು ಜಲಮಾರ್ಗ, ಸುರಂಗ ಮಾರ್ಗ ಗುರುತಿಸಿ ಜಲಸಂಗ್ರಹ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಕಾರ್ಯಕ್ರಮ ರೂಪಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ 22 ಐತಿಹಾಸಿಕ ಬಾವಿಗಳನ್ನು ಪುನಶ್ಚೇತನ ಮಾಡಲಾಗಿದೆ. ಮುಂದಿನ ವರ್ಷ ಇನ್ನೂ 20 ಬಾವಿಗಳ ಜೀರ್ಣೋದ್ಧಾರ ಕಾರ್ಯ ನಡೆಯಲಿದೆ ಎಂದರು. ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಪಾಲಿಕೆ ಸದಸ್ಯರಾದ ಅಬ್ದುಲ್‌ರಜಾಕ್‌ ಹೊರ್ತಿ, ಮೈನುದ್ದೀನ್‌ ಬೀಳಗಿ, ಉಮೇಶ ವಂದಾಲ, ವೂಡಾ ಮಾಜಿ ಅಧ್ಯಕ್ಷ ಚಂದ್ರಶೇಖರ ಶಟ್ಟಿ, ಜಲತಜ್ಞ ಪೀಟರ್‌ ಅಲೆಗಾಡರ್‌, ಡಾ| ಎಚ್‌.ಜಿ. ದಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ದುರುಗೇಶ ರುದ್ರಾಕ್ಷಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next