Advertisement

ಕೃಷಿಯಲ್ಲಿ ಬಂಡವಾಳ ಹೂಡಿಕೆಗೆ ಹತ್ತಾರು ಕಾರ್ಯಕ್ರಮ

11:05 PM Nov 14, 2022 | Team Udayavani |

ಕಲಬುರಗಿ: ರೈತರ ಆದಾಯ ಹೆಚ್ಚಳವಾಗಬೇಕೆಂಬ ನಿಟ್ಟಿನಲ್ಲಿ ಕೃಷಿಯಲ್ಲಿ ಬಂಡವಾಳ ಹೂಡಿಕೆಯಾಗಲು ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಹಾಗೂ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಸೋಮವಾರ ಸೇಡಂನಲ್ಲಿ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದರೆ ರೈತರ ಆದಾಯವೂ ಹೆಚ್ಚುತ್ತದೆ. ಆದಾಯ ಹೆಚ್ಚಾದಲ್ಲಿ ಸ್ವಾಭಿಮಾನ ಬದುಕು ರೂಪಿಸುತ್ತದೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಆತ್ಮವಿಶ್ವಾಸ ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದರು.

ರೈತಪರ ಸರ್ಕಾರ: ಒಂದು ಹೆಕ್ಟೇರ್‌ಗೆ ನೀಡುವ ಸಾಲದ ಮೊತ್ತಕ್ಕೆ ಆರ್ಥಿಕ ಮಾಪನವನ್ನು ಸಹಕಾರ ಸಂಘಗಳೇ ತೀರ್ಮಾನ ಮಾಡಬೇಕು. ಆಗ ಮಾತ್ರ ರೈತರು ಮೀಟರ್‌ ಬಡ್ಡಿಯ ಸುಳಿಗೆ ಸಿಲುಕದೆ ಅವರ ಬಾಳು ಹಸನಾಗುತ್ತದೆ. ಸರ್ಕಾರ ಕೃಷಿ ಮೇಲಿನ ಬಂಡವಾಳ ಹೆಚ್ಚಿಸುವ ಕೆಲಸ ಆರಂಭಿಸಿದೆ. ಅದರಂಗವಾಗಿ ಹತ್ತು ಲಕ್ಷ ಹೊಸ ರೈತರಿಗೆ ಸಾಲ, ಯಶಸ್ವಿನಿ ಮತ್ತೆ ಜಾರಿ, ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಕಂಪ್ಯೂಟರೀಕರಣ, ರೈತರ ಮಕ್ಕಳಿಗೆ ವಿದ್ಯಾನಿ ಧಿ ಸೇರಿ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ. ಈ ಎಲ್ಲ ಯೋಜನೆಗಳು ತಮ್ಮದು ರೈತಪರ ಸರ್ಕಾರ ಎಂಬುದನ್ನು ನಿರೂಪಿಸಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರಿಗೇಕೆ ಆಗಲಿಲ್ಲ: ಪ್ರಸಕ್ತ ರಾಜ್ಯದಲ್ಲಿ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಕೃಷಿ (ಬೆಳೆ) ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಕೇವಲ 18 ಲಕ್ಷ ರೈತರಿಗೆ ಮಾತ್ರ ಕೃಷಿ ಸಾಲ ನೀಡಿತ್ತು. ಆದರೆ ತಮ್ಮ ಸರ್ಕಾರ ಬಂದ ಮೇಲೆ ರೈತರ ಸಂಖ್ಯೆ ದ್ವಿಗುಣಗೊಂಡಿದೆ. ಏಕೆ ರೈತರಿಗೆ ಸಾಲ ಕೊಡಲಿಕ್ಕಾಗಲಿಲ್ಲ ಎಂದು ಸಿಎಂ ಕಾಂಗ್ರೆಸ್‌ ನಾಯಕರಿಗೆ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

Advertisement

ರೈತರ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವ ಯಶಸ್ವಿನಿ ಯೋಜನೆ ಸಹ ಏಕೆ ಆರಂಭಿಸಲಿಲ್ಲ ಎಂದು ಅವರು, ಈ ಯೋಜನೆಗೆ 300 ಕೋಟಿ ರೂ. ಬಜೆಟ್‌ದಲ್ಲಿ ತೆಗೆದಿರಿಸಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಜಾರಿಗೊಳಿಸಲಾಗಿದೆ. ಏಕೆ ಕಾಂಗ್ರೆಸ್ಸಿನವರು ರೈತಪರ ಇಂತಹ ಯೋಜನೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ವಾಗ್ಧಾಳಿ ನಡೆಸಿದ ಸಿಎಂ, ರೈತರ ಸಬಲೀಕರಣಕ್ಕೆ ಸರ್ಕಾರ ಸದಾ ಬದ್ಧವಿದೆ ಎಂದರು.

ಕೇಂದ್ರದಿಂದಲೂ ಸಹಕಾರ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಹಕಾರ ರಂಗ ಬೆಳೆಯುತ್ತಿದೆ. ಪ್ರಜಾಪ್ರಭುತ್ವದಡಿ ಈ ರಂಗವನ್ನು ಇನ್ನಷ್ಟು ಗಟ್ಟಿಗೊಳಿಸಿ ಇದಕ್ಕೆ ಆರ್ಥಿಕ ಬೆಂಬಲ ಕೊಟ್ಟು ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರದಲ್ಲಿ ಪ್ರಥಮ ಬಾರಿಗೆ ಸಹಕಾರಿ ಇಲಾಖೆಯನ್ನು ಸೃಷ್ಟಿಸಲಾಗಿದೆ. ದೂರದೃಷ್ಟಿ ನಾಯಕ ಅಮಿತ್‌ ಶಾ ಸಚಿವರಾಗಿದ್ದಾರೆ ಎಂದರು.

“ಯಶಸ್ವಿನಿ’ಗೆ ಚಾಲನೆ: ಇದೇ ವೇಳೆ ಎಂಟು ಜನ ರೈತರಿಗೆ ಯಶಸ್ವಿನಿ ಕಾರ್ಡ್‌ ವಿತರಿಸುವ ಮುಖಾಂತರ ಯೋಜನೆಗೆ ಚಾಲನೆ ನೀಡಲಾಯಿತು. 13 ಜನ ಸಹಕಾರಿ ಧುರೀಣರಿಗೆ ಮುಖ್ಯಮಂತ್ರಿ ಬೊಮ್ಮಾಯಿ ” ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಮುರುಗೇಶ ನಿರಾಣಿ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ, ಸಂಸದ ಡಾ|ಉಮೇಶ ಜಾಧವ್‌, ಮಾಜಿ ಸಂಸದ ಬಸವರಾಜ ಪಾಟೀಲ್‌ ಸೇಡಂ, ಶಾಸಕರಾದ ರಾಜುಗೌಡ, ಸುಭಾಷ ಆರ್‌. ಗುತ್ತೇದಾರ, ಬಸವರಾಜ ಮತ್ತಿಮಡು, ಅವಿನಾಶ ಜಾಧವ್‌, ವಿಧಾನ ಪರಿಷತ್‌ ಸದಸ್ಯರಾದ ಬಾಬುರಾವ ಚಿಂಚನಸೂರ, ಬಿ.ಜಿ. ಪಾಟೀಲ್‌, ಶಶೀಲ್‌ ಜಿ. ನಮೋಶಿ ಇನ್ನಿತರರಿದ್ದರು.

ದೇವೇಗೌಡ ತಾರೀಫ‌ು
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದು ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಂಸತ್‌ ಮೆಟ್ಟಿಲು ಮುಟ್ಟಿ ನಮಸ್ಕರಿಸಿ ಹೇಗೆ ಸರಳತೆ ಹೊಂದಿದ್ದಾರೋ ಅವರ ಹಾದಿಯಲ್ಲಿ ಎನ್ನುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳತೆ ಹೊಂದಿದ್ದಾರೆ. ಹಗಲಿರುಳು ಅಂದರೆ ದಿನಾಲು 20 ಗಂಟೆ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ರೈತಾಪಿ ವರ್ಗದವರಿಗೆ ಹೆಚ್ಚಿನ ಸಾಲ ಕೊಡುವ ಹಂಬಲ ಹೊಂದಿದ್ದಾರೆ. ಈ ಹಿಂದೆ “ಯಶಸ್ವಿನಿ’ ಯೋಜನೆ ಜಾರಿ ಮಾಡಲ್ಲ ಎಂದು ಕಾಂಗ್ರೆಸ್‌ ಸರಕಾರ ಹೇಳಿತ್ತು. ಆದರೆ ಬೊಮ್ಮಾಯಿ ಅವರು ದೃಢ ಮನಸ್ಸು ಮಾಡಿ ಮತ್ತೆ ಈ ಯೋಜನೆ ಜಾರಿಗೆ ತಂದರು. ಪ್ರಮುಖವಾಗಿ ಸಿಎಂ ಅವರು ಈ ಹಿಂದೆ ಸಹಕಾರಿ, ಗೃಹ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಖಾತೆಗಳನ್ನು ನಿಭಾಯಿಸಿದ್ದಾರೆ. ಹೀಗಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ ಎಂದು ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next