Advertisement

ಕುಕ್ಕಿಪಾಡಿ: ವರದಕ್ಷಿಣೆ ತರುವಂತೆ ಒತ್ತಾಯ, ದೈಹಿಕ ಹಲ್ಲೆ: ಪತಿ ಸಹಿತ ಮನೆಯವರ ವಿರುದ್ಧ ಪ್ರಕರಣ ದಾಖಲು

07:16 PM Nov 20, 2022 | Team Udayavani |

ಪುಂಜಾಲಕಟ್ಟೆ: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಪತಿಯ ಕುಟುಂಬದ ವಿರುದ್ಧ ಯುವತಿಯೋರ್ವರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೆ ದೂರು ನೀಡಿದ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.

Advertisement

ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕಾಪಿಗುಡ್ಡೆ ನಿವಾಸಿ ದಿ| ವಿನ್ಸೆಂಟ್‌ ಲೋಬೋ ಅವರ ಪುತ್ರ ಕಿರಣ್‌ ಲೋಬೊ (32) ನೊಂದಿಗೆ ಮೂಲತಃ ಅಸ್ಸಾಂ ಮೂಲದವರಾದ ಶಿಲ್ಪಿ ಚಾಸಾ (25) ಅವರಿಗೆ 2021ರ ಜ. 2ರಂದು ಸಿದ್ಧಕಟ್ಟೆಯಲ್ಲಿ ವಿವಾಹವಾಗಿತ್ತು. ವಿವಾಹದ ಅನಂತರ ಪತಿಯ ಮನೆಯಲ್ಲಿ ವಾಸವಿದ್ದು, ಮದುವೆಯಾದ ಮರುದಿನದಿಂದ ಪತಿ ಕಿರಣ್‌ ಲೋಬೋ ಸಹಿತ ಪತಿಯ ಮನೆಯವರಾದ ರೀಟಾ ಲೋಬೊ, ಹಿಲ್ಡಾ ಲೋಬೊ, ಐಡಾ ಲೋಬೊ, ವಾಲ್ಟರ್‌ ಲೋಬೊ ಅವರು ತನ್ನ ಮನೆಯಿಂದ ಹಣ ಮತ್ತು ಚಿನ್ನಾಭರಣವನ್ನು ವರದಕ್ಷಿಣೆಯಾಗಿ ತಂದು ಕೊಡಲಿಲ್ಲ ಎಂಬುದಾಗಿ ಪೀಡಿಸುತ್ತಿದ್ದಲ್ಲದೆ ದೈಹಿಕವಾಗಿ ಹಲ್ಲೆ ನಡೆಸಿ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಶಿಲ್ಪಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯ 2 ತಿಂಗಳ ಅನಂತರ ಪತಿ ಕಿರಣ್‌ ವರದಕ್ಷಿಣೆ ತರುವಂತೆ ನಿರಂತರ ಮಾನಸಿಕ ಹಿಂಸೆಯನ್ನು ನೀಡಲು ಪ್ರಾರಂಭಿಸಿದ್ದ. ಮದುವೆ ಬಳಿಕ ಶಿಲ್ಪಿ ಅವರ ಸ್ವಂತ ಊರಾದ ಅಸ್ಸಾಂನಲ್ಲಿ ಅವರ ಪೋಷಕರು ಔತಣ ಕೂಟ ಏರ್ಪಡಿಸಿದ್ದು, ಶಿಲ್ಪಿ ಅವರು ತನ್ನ ಗಂಡನ ಮನೆಯವರನ್ನು ಬರುವಂತೆ ಕೋರಿಕೊಂಡಾಗ ಆರೋಪಿಗಳು ಔತಣಕೂಟಕ್ಕೆ ಬರಬೇಕಾದರೆ 50 ಸಾವಿರ ರೂ.ಹಣವನ್ನು ನೀಡುವಂತೆ ಒತ್ತಾಯಿಸಿದ್ದರು. ಈ ಸಮಯದಲ್ಲಿ ಹಣವನ್ನು ಹೊಂದಿಸಲು ಅನಾನೂಕೂಲವಾಗುತ್ತಿರುವ ಬಗ್ಗೆ ತಿಳಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಮಾನಸಿಕ ಹಿಂಸೆಯನ್ನು ನೀಡಿದ್ದರು. ಆದರೂ ಶಿಲ್ಪಿ ಅವರು ತನ್ನ ತಾಯಿ ಹಾಗೂ ಅಕ್ಕನಿಂದ ಹಣವನ್ನು ಪಡೆದು ಗಂಡನಿಗೆ ನೀಡಿದ್ದರು. ಔತಣ ಕೂಟದ ಬಳಿಕವೂ ಆರೋಪಿಗಳು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುವುದನ್ನು ಮುಂದುವರಿಸಿದ್ದಲ್ಲದೇ, ಅನಾರೋಗ್ಯ ಪೀಡಿತಳಾದ ಸಮಯ ಚಿಕಿತ್ಸೆಯನ್ನು ಕೂಡ ಕೊಡಿಸದೇ ತೊಂದರೆ ನೀಡಿದ್ದರು. ಕೆಲವು ಸಮಯ ಶಿಲ್ಪಿ ಅವರನ್ನು ಮನೆಯೊಳಗೆ ಗೃಹಬಂಧನದಲ್ಲಿರಿಸಿ ಆರೋಪಿಗಳು ಹೊರಗಡೆ ಹೋಗುತ್ತಿದ್ದರು. ಈ ವೇಳೆ ಆರೋಪಿಗಳಲ್ಲೋರ್ವನಾದ ವಾಲ್ಟರ್‌ ಲೋಬೋ ಎಂಬಾತನು ಶಿಲ್ಪಿ ಅವರಿಗೆ ಕರೆ ಮಾಡಿ ನಗ್ನ ವೀಡಿಯೋ ಕಳುಹಿಸುವಂತೆ ತೊಂದರೆ ನೀಡುತ್ತಿದ್ದು, ಈ ವಿಷಯವನ್ನು ಗಂಡ, ಅತ್ತೆಯವರ ಬಳಿ ತಿಳಿಸಿದರೂ ಸ್ಪಂದಿಸಿಲ್ಲ ಎಂದು ಶಿಲ್ಪಿ ಅವರು ಆರೋಪಿಸಿದ್ದಾರೆ.

ಶಿಲ್ಪಿ ಅವರು  ಎರಡು ಬಾರಿ ಗರ್ಭವತಿಯಾದಾಗ ಆರೋಪಿಗಳು ಅವರನ್ನು ಸಿದ್ಧಕಟ್ಟೆಯ ಡಾಕ್ಟರ್‌ ಬಳಿ ಕರೆದುಕೊಂಡು ಹೋಗಿ ಮಾತ್ರೆ ನೀಡಿದ್ದರಿಂದ ಗರ್ಭಪಾತವಾಗಿರುತ್ತದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಅನಂತರದ ದಿನಗಳಲ್ಲಿ ಆರೋಪಿಗಳು ವರದಕ್ಷಿಣೆ ತರುವಂತೆ ದೈಹಿಕ, ಮಾನಸಿಕವಾಗಿ ಹಿಂಸೆ ಮುಂದುವರಿಸಿದ್ದಲ್ಲದೇ, ಕಳೆದ ಸೆ. 26, ಅ. 4 ಮತ್ತು ಅ. 5ರಂದು ತೀವ್ರವಾಗಿ ದೈಹಿಕ ಹಲ್ಲೆ ನಡೆಸಿದ್ದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ವಿಚಾರವನ್ನು ಶಿಲ್ಪಿ ತನ್ನ ತಾಯಿ ಮತ್ತು ಅಕ್ಕನಿಗೆ ತಿಳಿಸಿದ್ದು, ಅವರು ಅಸ್ಸಾಂನಿಂದ ಇಲ್ಲಿಗೆ ಆಗಮಿಸಿ ಶಿಲ್ಪಿ ಅವರನ್ನು ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ  ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿ ಸುತೇಶ್‌ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next