Advertisement
‘ಉದಯವಾಣಿ’ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಂಕಾದ ಮುಂಗಾರು; ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ’ ಕುರಿತ ಸಂವಾದದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ, ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರೆ, ಮುಂಗಾರು ಮಳೆಯಿಂದ ಒಳಹರಿವು ಹೆಚ್ಚಳ ಆಗುತ್ತಿತ್ತು. ಆದರೆ, ಜೂನ್ 14ಕ್ಕೆ ಮುಂಗಾರು ಮಳೆ ಪ್ರವೇಶ ಆಗಿದೆ. ಅದೂ ನಿರೀಕ್ಷಿತ ಮಟ್ಟದಲ್ಲಿ ಪ್ರಬಲವಾಗಿಲ್ಲ. ಇದರಿಂದ ಕೆಆರ್‌ಎಸ್‌ಗೆ ಕೇವಲ 2.85 ಟಿಎಂಸಿ ನೀರು ಬಂದಿದೆ. ವಾಡಿಕೆಯಂತೆ ಜೂನ್‌ನಲ್ಲಿ ಅಣೆಕಟ್ಟೆಗೆ 31.57 ಟಿಎಂಸಿ ನೀರು ಬರಬೇಕಿತ್ತು ಎಂದರು. ಕಳೆದ ವರ್ಷ ಈ ಹೊತ್ತಿಗೆ 76 ಟಿಎಂಸಿ ಒಳಹರಿವು ಇತ್ತು.
Related Articles
11 ಜಿಲ್ಲೆಗಳಲ್ಲಿ ಕೊರತೆ
ಮುಂಗಾರಿನ ಮೊದಲ ತಿಂಗಳು ರಾಜ್ಯದಲ್ಲಿ ಶೇ. 27ರಷ್ಟು ಮಳೆ ಕೊರತೆ ಆಗಿದ್ದು, 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದರು. ಒಟ್ಟಾರೆ 30 ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 14 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಉಳಿದ 11ರಲ್ಲಿ ವಾಡಿಕೆಗಿಂತ ಕಡಿಮೆ ಆಗಿದ್ದು, ಇದರಲ್ಲಿ 76 ತಾಲ್ಲೂಕುಗಳು ಬರುತ್ತವೆ. ಆದರೆ, ರಾಜ್ಯದಲ್ಲಿ ಜುಲೈನಲ್ಲಿ ಅತಿ ಹೆಚ್ಚು ಮಳೆ ಬರುತ್ತದೆ ಎಂದ ಅವರು, ವರ್ಷದಲ್ಲಿ ಸುರಿಯುವ ಮಳೆಯಲ್ಲಿ ಶೇ. 35ರಷ್ಟು ಪ್ರಮಾಣ ಇದೇ ತಿಂಗಳಲ್ಲಿ ಬೀಳುತ್ತದೆ ಎಂದೂ ಹೇಳಿದರು.
ಬೆಳೆ ಉಳಿಸಿಕೊಳ್ಳಲು ಆದ್ಯತೆ
‘ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಆ ಅವಧಿಯಲ್ಲಿ ಹೆಸರು, ಉದ್ದು ಹಾಗೂ ಎಳ್ಳು ಬೆಳೆಗಳನ್ನು ಕಳೆದುಕೊಂಡಿದ್ದೇವೆ. ಈಗ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಉಳಿಸಿಕೊಳ್ಳಲು ಆದ್ಯತೆ ನೀಡಬೇಕು’ ಎಂದು ತಜ್ಞರು ತಿಳಿಸಿದರು. ಮುಂಗಾರು ಪೂರ್ವ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು ಐದು ಲಕ್ಷ ಹೆಕ್ಟೇರ್‌ನಲ್ಲಿ ಹೆಸರು, ಉದ್ದು, ತೊಗರಿ, ಮೇವಿನ ಬೆಳೆಗಳು, ಎಣ್ಣೆಕಾಳುಗಳು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಮಳೆ ಕೈಕೊಟ್ಟಿದ್ದರಿಂದ ಈ ಬೆಳೆ ಬರಲಿಲ್ಲ. ಈ ಅವಧಿಯಲ್ಲಿ ಕೇವಲ ಶೇ. 41ರಷ್ಟು ಬಿತ್ತನೆ ಆಗಿತ್ತು ಎಂದು ಡಾ.ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.
Advertisement