ಬೆಂಗಳೂರು:ರಾಜ್ಯ ಹಾಗೂ ದೇಶದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ನೋಡಿದರೆ ರಾಜ್ಯಕ್ಕೆ ಬಂಡವಾಳ ಹರಿದು ಬರುವುದು ಅನುಮಾನ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ತೆರಳಿದ್ದಾರೆ. ಅವರು ರಾಜ್ಯದ ವಸ್ತು ಸ್ಥಿತಿಯನ್ನು ಉದ್ದಿಮೆದಾರರಿಗೆ ಮನವರಿಕೆ ಮಾಡಿ ಹೆಚ್ಚಿನ ಬಂಡವಾಳವನ್ನು ತರುತ್ತಾರೆ ಎಂಬ ನಿರೀಕ್ಷೆ ಇದೆ. ಹೆಚ್ಚಿನ ಬಂಡವಾಳ ಹರಿದು ಬರುವಂತೆ ಉದ್ದಿಮೆದಾರರ ಮನವೊಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದರು.
ದೇಶದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಬಂಡವಾಳ ಹೂಡುವವರೂ ಅವಲೋಕಿಸುತ್ತಾರೆ. ಬೇರೆ ಬೇರೆ ಮೂಲಗಳಿಂದ ದೇಶದ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಬಂಡವಾಳ ಹೂಡುತ್ತಾರೆ. ಆದರೆ, ದೇಶದ ಸದ್ಯದ ಸ್ಥಿತಿಯಲ್ಲಿ ಬಂಡವಾಳ ಹರಿದು ಬರುವುದು ಅನುಮಾನ ಎಂದು ಹೇಳಿದರು.
ಇದೇ ವೇಳೆ, ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷಾಂತರ ಮಾಡಿದವರಿಗೆಲ್ಲರಿಗೂ ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರೂ ಕೂಡ ಮಂತ್ರಿ ಆಗುತ್ತೇವೆ ಎನ್ನುವ ನಂಬಿಕೆಯಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಹೋಗಿದ್ದಾರೆ. ಕೆಲವರು ಮಂತ್ರಿ ಸ್ಥಾನವನ್ನೂ ತೊರೆದು ಹೋಗಿದ್ದಾರೆ. ಎಂ.ಟಿ.ಬಿ. ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಅವರು ಸೋತಿದ್ದಾರೆ. ಅಲ್ಲದೇ ಮುನಿರತ್ನ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರ ಕ್ಷೇತ್ರಗಳಿಗೆ ಇನ್ನೂ ಚುನಾವಣೆ ನಡೆಯಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಕೊಟ್ಟ ಮಾತಿಗೆ ತಪ್ಪಿದಂತಾಗುತ್ತದೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವ ಬಗ್ಗೆ ವಲಸಿಗರು ಯಾರೂ ನನ್ನ ಜೊತೆ ಮಾತನಾಡಿಲ್ಲ. ಅವರು ಮಾತನಾಡದಂತಹ ಸ್ಥಿತಿಯಲ್ಲಿ ಇರುವುದರಿಂದ ನಮ್ಮ ಜೊತೆ ಮಾತನಾಡುವುದಿಲ್ಲ. ಅಲ್ಲಿ ಅಸಮಾಧಾನದಿಂದ ಮತ್ತೆ ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ಪರಮೇಶ್ವರ್ ಹೇಳಿದರು.