ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಲ್ಲಿ ವರ್ಗಾವಣೆ ಸುಗ್ಗಿ ಮುಗೀತು. ಈಗ ಬಡ್ತಿ ಸುಗ್ಗಿ! ಹಿಂದಿನ ಸರ್ಕಾರದ ಪತನ ಮತ್ತು ಹೊಸ ಸರ್ಕಾರದ ಅಸ್ತಿತ್ವದ ‘ಸೈಕಲ್ ಗ್ಯಾಪ್’ನಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು, ನೂರಕ್ಕೂ ಹೆಚ್ಚು ಪದೋನ್ನತಿ ನೀಡಲು ಮುಂದಾಗಿದ್ದಾರೆ.
ನೂತನ ಸರ್ಕಾರ ಇನ್ನೂ ಟೇಕ್‌ಆಫ್ ಆಗಿಲ್ಲ. ಸಾರಿಗೆ ಸಚಿವರೂ ಇಲ್ಲ. ಈ ‘ತರಾತುರಿ ನೀತಿ’ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಕಾಣದ ಕೈಗಳು ಇದರ ಹಿಂದೆ ಕೆಲಸ ಮಾಡಿವೆ ಎಂಬ ಆರೋಪ ಅಧಿಕಾರಿ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆದರೆ, ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಇಲಾಖಾ ಬಡ್ತಿ ಸಮಿತಿ ಈ ತೀರ್ಮಾನ ಕೈಗೊಳ್ಳಲಿದ್ದು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರೇ ಈ ಸಮಿತಿ ಅಧ್ಯಕ್ಷರಾಗಿರುತ್ತಾರೆ.
ದರ್ಜೆ-2ರಿಂದ ಆಯ್ಕೆ ಶ್ರೇಣಿವರೆಗಿನ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈಚೆಗೆ ಕೆಎಸ್‌ಆರ್‌ಟಿಸಿ ಪ್ರಕಟಿಸಿದೆ. ಆದರೆ, ಸೇವಾ ಜೇಷ್ಠತೆಯನ್ನು ಬದಿಗೊತ್ತಿದೆ. ಅಷ್ಟೇ ಅಲ್ಲ, ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸದೆ, ಪದೋನ್ನತಿಗೆ ಸಿದ್ಧತೆಗಳು ನಡೆದಿವೆ. ನ್ಯೂನತೆಗಳಿಂದ ಕೂಡಿದ ಈ ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಕಷ್ಟು ಆಕ್ಷೇಪಣೆಗಳು ಬಂದಿದ್ದರೂ, ಅದಕ್ಕೆ ಮೇಲಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆಯೇ ಬಡ್ತಿಗೆ ಮುಂದಾಗಿದೆ ಎಂದು ಅಧಿಕಾರಿ ಆರೋಪಿಸುತ್ತಾರೆ.
ತರಾತುರಿ ಯಾಕೆ?: ‘ಹಿಂದೆಂದಿಗಿಂತ ಏಕಕಾಲದಲ್ಲಿ ಸುಮಾರು 150ಕ್ಕೂ ಅಧಿಕ ಬಡ್ತಿ ನೀಡಲು ಕೆಎಸ್‌ಆರ್‌ಟಿಸಿ ಸಿದ್ಧತೆ ನಡೆಸಿದೆ. ಸೇವಾ ಜೇಷ್ಠತೆಯಲ್ಲಿ ನಮಗಿಂತ ಹತ್ತಾರು ವರ್ಷ ಕಿರಿಯ ಅಧಿಕಾರಿಗಳನ್ನೂ ಪದೋನ್ನತಿ ಮೂಲಕ ನಮ್ಮ ಮೇಲೆ ತಂದು ಕೂರಿಸಲಾಗುತ್ತಿದೆ. ಉದಾಹರಣೆಗೆ 1995ರಲ್ಲಿ ನಾನು ನೇಮಕಗೊಂಡಿದ್ದೇನೆ. ಆದರೆ, 2008ರಲ್ಲಿ ನೇಮಕಗೊಂಡವರನ್ನು ನನ್ನ ಮೇಲೆ ತಂದು ಕೂರಿಸಲಾಗುತ್ತಿದೆ. ಇದು ನಿಯಮಾವಳಿಗೆ ವಿರುದ್ಧವಾಗಿದೆ. ಒಂದು ವೇಳೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗಿದ್ದರೂ, ಸೇವಾ ಜೇಷ್ಠತೆ ಸಂದರ್ಭದಲ್ಲಿ ಅದನ್ನು ಪರಿಗಣಿಸುವಂತಿಲ್ಲ ಎಂದು ನಿಯಮವೇ ಇದೆ. ಇಷ್ಟೊಂದು ತರಾತುರಿ ಯಾಕೆ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.
ಕೆಎಸ್‌ಆರ್‌ಟಿಸಿಯ ಸುಮಾರು 50 ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲುಕೆಆರ್‌ಟಿಸಿ) ವ್ಯಾಪ್ತಿಯಲ್ಲಿ ನೂರಕ್ಕೂ ಅಧಿಕ ಹುದ್ದೆಗಳನ್ನು ಬಡ್ತಿಯ ಮೂಲಕ ತುಂಬಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳಿಂದ ಸೇವಾ ವಿವರ ಮತ್ತು ಮುಚ್ಚಳಿಕೆ ಪತ್ರ, ಅಧಿಕಾರಿಯ ಮೇಲೆ ಶಿಕ್ಷಾದೇಶಗಳ ದಂಡನೆ ಕುರಿತ ವಿವರಗಳು, ಪ್ರಸ್ತುತ ಬಾಕಿ ಇರುವ ಸಂಪೂರ್ಣ ಅಪರಾಧ ಪ್ರಕರಣಗಳ ಕ್ರೋಡೀಕೃತ ಇತಿಹಾಸ ಪಟ್ಟಿ, 2018-19ರವರೆಗಿನ ಐದು ವರ್ಷಗಳ ವಾರ್ಷಿಕ ಗುಣ ವಿಮರ್ಶಣಾ ವರದಿಗಳನ್ನು ಸಲ್ಲಿಸುವಂತೆ ನಿಗಮವು ಸೂಚಿಸಿದೆ. ಈ ಹಿಂದೆ 2015-16ರಲ್ಲಿ ಬಡ್ತಿ ನೀಡಲಾಗಿತ್ತು.
‘ಅನುಮಾನವಿದ್ದರೆ ಕೋರ್ಟ್‌ಗೆ ಹೋಗಬಹುದು’: ಆದರೆ, ಈ ಆರೋಪವನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ‘ಪದೋನ್ನತಿ ನೀಡುವ ಮುನ್ನ ಸೇವಾ ಜೇಷ್ಠತೆ ಜತೆಗೆ ಆಕ್ಷೇಪಣೆಗಳು, ಕಾನೂನು ತಜ್ಞರ ಅಭಿಪ್ರಾಯಗಳು, ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಇಲಾಖೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿರುತ್ತದೆ. ಅದೆಲ್ಲವನ್ನೂ ಕ್ರೋಡೀಕರಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ, ಯಾವುದೇ ಅನುಮಾನಗಳಿಗೆ ಇಲ್ಲಿ ಕಾರಣವೇ ಇಲ್ಲ’ ಎಂದು ಹೇಳಿದರು.
‘ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗಿರುತ್ತದೆ. ಇದಕ್ಕೆ ಹಿಂಬರಹ ನೀಡಲೇಬೇಕೆಂದೇನೂ ಇಲ್ಲ. ಶೇ. 99ರಷ್ಟು ಬಡ್ತಿ ಪ್ರಕ್ರಿಯೆ ನ್ಯಾಯಸಮ್ಮತವಾಗಿದೆ. ಒಬ್ಬರು ಅಥವಾ ಇಬ್ಬರಿಗೆ ಬಡ್ತಿಗೆ ಸಂಬಂಧಿಸಿದಂತೆ ಅಸಮಾಧಾನ ಆಗುವುದು ಸಹಜ. ಆದರೆ, ಅನ್ಯಾಯವಂತೂ ಆಗಿರುವುದಿಲ್ಲ. ಹಾಗೊಂದು ವೇಳೆ ಅನ್ಯಾಯವಾಗಿದೆ ಎಂದೆನಿಸಿದರೆ, ಕೋರ್ಟ್ ಮೊರೆಹೋಗಲಿಕ್ಕೂ ಅವಕಾಶ ಇದೆ’ ಎಂದೂ ಶಿವಯೋಗಿ ಕಳಸದ ‘ಉದಯವಾಣಿ’ ಸ್ಪಷ್ಟಪಡಿಸಿದರು.