ಮುರ್ಷಿದಾಬಾದ್: ಲೋಕಸಭೆ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಇಲ್ಲ ಎಂದು ಹೇಳಿದ ಕೆಲವು ದಿನಗಳ ನಂತರ, ಕಟುವಾದ ವಾಗ್ದಾಳಿಯನ್ನು ಪ್ರಾರಂಭಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗಳಿಸಬಹುದೇ ಎಂಬ ಅನುಮಾನವಿದೆ ಎಂದು ಲೇವಡಿ ಮಾಡಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, “ಕಾಂಗ್ರೆಸ್, ನೀವು 300 ರಲ್ಲಿ 40 ಸ್ಥಾನಗಳನ್ನು ಗೆಲ್ಲುತ್ತೀರಾ ಎಂದು ನನಗೆ ತಿಳಿದಿಲ್ಲ. ಏಕೆ ಇಂತಹ ದುರಹಂಕಾರ? ನೀವು ಬಂಗಾಳಕ್ಕೆ ಬಂದಿದ್ದೀರಿ, ನಿಮಗೆ ಧೈರ್ಯವಿದ್ದರೆ ವಾರಾಣಸಿಯಲ್ಲಿ ಬಿಜೆಪಿಯನ್ನು ಸೋಲಿಸಿ, ನೀವು ಮೊದಲು ಗೆದ್ದಿರುವ ಸ್ಥಳಗಳಲ್ಲಿಯೂ ನೀವು ಸೋಲುತ್ತೀರಿ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶದಲ್ಲಿ, ರಾಜಸ್ಥಾನದಲ್ಲಿ ನೀವು ಗೆದ್ದಿಲ್ಲ. ಹೋಗಿ ಆ ಸ್ಥಾನಗಳನ್ನು ಗೆಲ್ಲಿರಿ. ನೀವು ಎಷ್ಟು ಧೈರ್ಯಶಾಲಿ ಎಂದು ನಾನು ನೋಡುತ್ತೇನೆ. ಅಲಹಾಬಾದ್‌ನಲ್ಲಿ ಗೆಲ್ಲಿರಿ ನೋಡೋಣ” ಎಂದು ಸವಾಲು ಹಾಕಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಬಂಗಾಳದಲ್ಲಿ ನಡೆದಿರುವುದನ್ನು ಉಲ್ಲೇಖಿಸಿ, ಕಾಂಗ್ರೆಸ್ ನಾಯಕ ಬೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, “ಈಗ ಹೊಸ ಶೈಲಿ ಕಾಣಿಸಿಕೊಂಡಿದ್ದು ಅದು ಫೋಟೋ ಶೂಟ್. ಟೀ ಅಂಗಡಿಗೆ ಎಂದಿಗೂ ಹೋಗದವರು ಈಗ ಬೀಡಿ ಕೆಲಸಗಾರರ ಜತೆ ಕುಳಿತುಕೊಳ್ಳುತ್ತಿದ್ದಾರೆ.ಅವೆಲ್ಲ ವಲಸೆ ಹಕ್ಕಿಗಳು.” ಎಂದು ಕಟು ಟೀಕೆ ಮಾಡಿದ್ದಾರೆ.
ಅಚ್ಚರಿಯೆಂದರೆ ಟಿಎಂಸಿಯೊಂದಿಗೆ ಸೀಟು ಹಂಚಿಕೆ ಮಾತುಕತೆ ಇನ್ನೂ ಮುಂದುವರಿದಿದೆ ಎಂದು ರಾಹುಲ್ ಗಾಂಧೀ ಹೇಳಿಕೆ ನೀಡಿದ್ದಾರೆ.