ನಂಜನಗೂಡು: ನೆರೆಯಿಂದಾಗಿ ತಾಲೂಕಿನಲ್ಲಿ ಕಂಡು ಕೇಳರಿಯದಷ್ಟು ಹಾನಿಯಾಗಿದ್ದು ಪರಿಹಾರ ದ್ವಿಗುಣಗೊಳಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಪ್ರವಾಹದಿಂದಾಗಿ ತಾಲೂಕಿನ ವರುಣಾ ಕ್ಷೇತ್ರದ ಬೊಕ್ಕಳ್ಳಿ, ತೊರೆಮಾವು, ಹೆಜ್ಜಿಗೆ ಸೇರಿ ನಂಜನಗೂಡು ನಗರ ಪ್ರದೇಶದಲ್ಲಿ ಮನೆ ಕಳೆದುಕೊಂಡು ಶ್ರೀಕಂಠೇಶ್ವರ ಕಲಾ ಮಂದಿರದಲ್ಲಿರುವ ಸಂತ್ರಸ್ತರ ಅಹವಾಲು ಸ್ವೀಕರಿಸಿ ಮಾತನಾಡಿದರು.
ನಂಜನಗೂಡು ನಗರ ಪ್ರದೇಶದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ, ಸರ್ಕಾರ ಬದಲಿ ವ್ಯವಸ್ಥೆ ಮಾಡದಿದ್ದಲ್ಲಿ ನೀವೆಲ್ಲಾ ಮರು ಮಾತಿಲ್ಲದೆ ಸುರಕ್ಷಿತವಾದ ಸ್ಥಳಕ್ಕೆ ಹೋಗಿ ಎಂದು ಕಿವಿಮಾತು ಹೇಳಿದರು. ಇಷ್ಟು ಅನಾಹುತ ಆಗುತ್ತದೆ ಎಂದು ಗೊತ್ತಿದ್ದರೆ ತಾವು ಅಧಿಕಾರದಲ್ಲಿ ಇದ್ದಾಗಲೇ ಈ ಜನಕ್ಕೆ ಶಾಶ್ವತ ವ್ಯವಸ್ಥೆಗೆ ಮುಂದಾಗಬಹುದಿತ್ತು. ಈಗ ನಿಮ್ಮಗಳ ಶಾಶ್ವತ ವ್ಯವಸ್ಥೆಗಾಗಿ ತಾವು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದ ಕಾಂಗ್ರೆಸ್ ಸಮಿತಿ ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಹಾನಿ ಕುರಿತು ಪ್ರತ್ಯಕ್ಷ ವರದಿ ಸಿದ್ಧ ಮಾಡಿದೆ. ಮನೆ ಹಾನಿ ಆಧಾರದಲ್ಲಿ ಈಗ ನಿಗದಿಪಡಿಸಿದ 25, 50 ಸಾವಿರ, 5 ಲಕ್ಷ ರೂ.ಬದಲಿಗೆ 50 ಸಾವಿರ, 1ಲಕ್ಷರೂ, ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ನೀಡಬೇಕೆಂಬುದು ತಮ್ಮ ಆಗ್ರಹವೆಂದರು.
ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಬಾಡಿಗೆ ಮನೆ ವ್ಯವಸ್ಥೆ ಮಾಡಿ ಇಲ್ಲವೇ ತಾತ್ಕಾಲಿಕ ಶೆಡ್ ನಿರ್ಮಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಂಸದ ಆರ್.ಧ್ರುವನಾರಾಯಣ, ಶಾಸಕ ಧರ್ಮಸೇನ, ರಾಜ್ಯ ಕಾಂಗ್ರೆಸ್ ಘಟಕದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರನ್ನು ಬರಮಾಡಿಕೊಂಡ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕಿನಲ್ಲಿ ನೆರೆಯಿಂದ 1203 ಮನೆ, 231 ಎಕರೆ ಬೆಳೆ ಹಾನಿ ಬಗ್ಗೆ ಸಿದ್ದರಾಮಯ್ಯಗೆ ವಿವರ ನೀಡಿದರು.
ನಂಜನಗೂಡು ಬ್ಯಾಂಕ್ ಅಧ್ಯಕ್ಷ ಪಿ.ಶ್ರೀನಿವಾಸ, ಮೂಗಶೆಟ್ಟಿ, ಶೆಟ್ಟಿಹಳ್ಳಿ ಗುರುಸ್ವಾಮಿ, ಮುಖಂಡರಾದ ನಂದಕುಮಾರ್, ಶ್ರೀಧರ್, ಸಿ.ಎಂ.ಶಂಕರ್, ಇಂಧನ ಬಾಬು, ಗಂಗಾಧರ್, ದೇವನೂರು ಮಹದೇವಪ್ಪ, ಕೆ.ಬಿ.ಸ್ವಾಮಿ, ಕಮಲೇಶ ಮತ್ತಿತರರಿದ್ದರು. ಈ ವೇಳೆ ನೆರೆ ಸಂತ್ರಸ್ತರಿಗೆ ಬಟ್ಟೆ ವಿತರಿಸಿದರು. ಅಭಿವೃದ್ಧಿ ಆಗಿ ಬರೋದಿಲ್ಲ: ಬಿಜೆಪಿಗೂ ಅಭಿವೃದ್ಧಿಗೂ ಆಗಿ ಬರುವುದಿಲ್ಲ. ಆಪ್ತ ರಾಜ್ಯ ವಾಲ್ಮೀಕಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಅವರ ಮನೆಯಲ್ಲಿ
“ಉದಯವಾಣಿ’ಯೊಂದಿಗೆ ಮಾತನಾಡಿದರು.
ಬಹಳ ವರ್ಷಗಳ ನಂತರ ಮೈಸೂರು ಜಿಲ್ಲೆ ಸೇರಿ ಈ ಭಾಗದಲ್ಲಿ ಸ್ಥಳೀಯ ಸಚಿವರಿಲ್ಲದಿರುವುದು ಅಭಿವೃದ್ಧಿಗೆ ಹಿನ್ನಡೆಯೇ ಎಂದು ಕೇಳಿದ್ದಕ್ಕೆ, ಅಭಿವೃದ್ಧಿ ಎಂಬುದು ಬಿಜೆಪಿಯಲ್ಲೇ ಇಲ್ಲ. ಜಿಡಿಪಿ ಕನಿಷ್ಠ ಮಟ್ಟಕ್ಕೆ ಇಳಿಯಲು ಬಿಜೆಪಿಯೇ ಕಾರಣ. ಈಗಾಗಲೇ ಲಕ್ಷಾಂತರ ಉದ್ಯೋಗ ಕಡಿತಗೊಂಡಿದ್ದು ಇನ್ನಷ್ಟು ಉದ್ಯೋಗಕ್ಕೆ ಹೊಡೆತ ಬೀಳಲಿದೆ. ಇದೇ ಬಿ ಜೆಪಿ ಕೊಡುಗೆ ಎಂದು ಟೀಕಿಸಿದರು. ಇನ್ನು ಬ್ಯಾಂಕ್‌ಗಳ ವಿಲೀನದಿಂದ ಆರ್ಥಿಕ ಚೇತರಿಕೆ ಸಾಧ್ಯವೇ ಇಲ್ಲ. ಅಭಿವೃದ್ಧಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಭಾವನಾತ್ಮಕ ವಿಷಯಗಳಿಂದ ಮತದಾರರನ್ನು ಕೆರಳಿಸಿ ಅಧಿಕಾರಕ್ಕೆ ಬಂದಿದ್ದಾರೆಂದರು.