Advertisement

ಎಂಜಿನ್‌ ಸರ್ಕಾರದಿಂದ ಡಬ್ಬಲ್‌ ದ್ರೋಹ: ಸಿದ್ದರಾಮಯ್ಯ

09:17 PM Sep 05, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹೊರಟಿರುವುದು ಮತ್ತು ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆ ಸ್ಥಗಿತಗೊಳಿಸುವ ಸರ್ಕಾರದ ತೀರ್ಮಾನ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿ, ವಿದ್ಯುತ್‌ ಕ್ಷೇತ್ರವನ್ನು ಖಾಸಗಿಯವರಿಗೆ ಅರ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾಯ್ದೆ ತಂದಿದೆ. ಈ ಕಾಯ್ದೆ ಜಾರಿ ಆಗುವ ಮೊದಲೇ ರಾಜ್ಯ ಸರ್ಕಾರ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ತನ್ನು ನಿಲ್ಲಿಸಿದೆ ಎಂದು ದೂರಿದ್ದಾರೆ.

ಪ.ಜಾತಿ ಮತ್ತು ಪ.ವರ್ಗಗಳ ಏಳ್ಗೆ ಬಗ್ಗೆ ಪುಟಗಟ್ಟಲೆ ಜಾಹೀರಾತು ನೀಡಲಾಗಿತ್ತು. ಆದರೆ, ಬಿಪಿಎಲ್‌ ಕಾರ್ಡ್‌ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಪ.ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್‌ ಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಸೆಪ್ಟೆಂಬರ್‌ 3ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರೈತ ಮತ್ತು ದಲಿತ ಸಮುದಾಯಗಳ ವಿಚಾರದಲ್ಲಿ ಡಬ್ಬಲ್‌ ಎಂಜಿನ್‌ ಸರ್ಕಾರ ಡಬ್ಬಲ್‌ ದ್ರೋಹ ಎಸಗಿದೆ ಎಂದು ಆರೋಪಿಸಿದ್ದಾರೆ.

ತ‌ಕ್ಷಣದಿಂದಲೇ ಸರ್ಕಾರ ತನ್ನ ಜನದ್ರೋಹಿ, ರೈತ ವಿರೋಧಿ ಕೃತ್ಯ ನಿಲ್ಲಿಸಬೇಕು. ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್‌ ವ್ಯವಸ್ಥೆಯನ್ನು ಮೊದಲಿಗಿಂತ ಹೆಚ್ಚು ಸಮರ್ಪಕವಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರೈತ ಸಮುದಾಯದ ಹೊಟ್ಟೆಯ ಸಿಟ್ಟು ನಿಮ್ಮನ್ನು ಸುಡುತ್ತದೆ ಎಂದು ಎಚ್ಚರಿಸಿದ್ದಾರೆ.

ಹಾಗೆಯೇ ಪ.ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್‌ ಯೋಜನೆ ಮುಂದುವರಿಸಬೇಕು. ಎಂದು ಅವರು ಆಗ್ರಹಿಸಿದ್ದಾರೆ.

Advertisement

ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದೇ ಡಬ್ಬಲ್‌ ಎಂಜಿನ್‌ ಸರ್ಕಾರದ ಸಾಧನೆಯಾಗಿಬಿಟ್ಟಿದೆ.ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಜನೋದ್ಧಾರದ ಭಾಷಣ ಮಾಡಿ ಹೋದ ಬೆನ್ನಲ್ಲೇ ಸರ್ಕಾರ ಈ ಎರಡು ಜನಾದ್ರೋಹದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರ ಭಾಷಣಗಳೆಲ್ಲಾ ಪೂರ್ತಿ ಬೋಗಸ್‌ ಎನ್ನುವುದನ್ನು ರಾಜ್ಯ ಸರ್ಕಾರ ಪ್ಪಿಕೊಂಡಂತಾಗಿದೆ. ಇದಕ್ಕಿಂತ ದೊಡ್ಡ ಜನದ್ರೋಹ ಮತ್ತೊಂದು ಇರಲಾರದು ಎಂದು ಹೇಳಿದ್ದಾರೆ.

ರೈತ ಸಮುದಾಯಕ್ಕೆ ಸರ್ಕಾರ ನೀಡುವ ಯಾವ ಸವಲತ್ತುಗಳು ಮತ್ತು ರಿಯಾಯ್ತಿ, ವಿನಾಯ್ತಿಗಳನ್ನೂ ಉಚಿತ ಎಂದು ಭಾವಿಸಲೇಬಾರದು.ಸರ್ಕಾರವೇ ರೈತರ ಸಾಲಗಾರ ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದರು. ನಾನೂ ಕೂಡ ಈ ಮಾತನ್ನು ಪೂರ್ತಿಯಾಗಿ ಸಮರ್ಥಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next