Advertisement

Dotihala: ಬಸವಣ್ಣ ಮೂರ್ತಿಯ ಮುಂದೇ ಶಿವ; ವಿಶಿಷ್ಟ ದಿಡಗಿನ ಬಸವೇಶ್ವರ ದೇವಸ್ಥಾನ

03:42 PM Jun 13, 2024 | Team Udayavani |

ದೋಟಿಹಾಳ: ಅನೇಕ ಕಡೆಗಳಲ್ಲಿ ಶಿವನ ದೇವಸ್ಥಾನದ ಮುಂದೆ ಬಸವಣ್ಣನ ಮೂರ್ತಿ ಇರೋದು ಕಂಡಿದ್ದೇವೆ. ಆದರೆ ಈ ದೇವಸ್ಥಾನದಲ್ಲಿ ಬಸವಣ್ಣನ ದೇವರ ಮುಂದೆಯೇ ಈಶ್ವರಲಿಂಗ ಇದೆ. ಈ ದೇವಾಲಯ ಒಂದು ವಿಶಿಷ್ಟ ದೇವಸ್ಥಾನವಾಗಿದೆ.

Advertisement

ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ದಮ್ಮೂರು ಗ್ರಾಮದ ಶ್ರೀ ದಿಡಗಿನ ಬಸವೇಶ್ವರ ದೇವಸ್ಥಾನ ಒಂದು ಪುರಾತನ ದೇವಸ್ಥಾನವಾಗಿದ್ದು, ಈ ದೇವಾಲಯ ಒಂದು ಐತಿಹಾಸಿಕ ಹಿನ್ನೆಲೆಯಿರುವ ದೇವಾಲಯವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ದಿಡಗಿನ ಬಸವೇಶ್ವರ ದೇವಸ್ಥಾನದ ಹೆಸರು ಬರಲು ಮುಖ್ಯ ಕಾರಣ ಬೆಟ್ಟದ ಮೇಲಿಂದ ಹಾಗೂ ಆಲದ ಮರದ ಮಧ್ಯದಿಂದ ನೀರು ಬಸವಣ್ಣ ಮೇಲೆ ದಿಂಡಿನ ರೀತಿಯಲ್ಲಿ ನೀರು ಬೀಳುತ್ತಿತ್ತು. ಹೀಗಾಗಿ ಈ ದೇವಸ್ಥಾನಕ್ಕೆ ದಿಡಗಿನ ಬಸವೇಶ್ವರ ಎಂಬ ಹೆಸರು ಬಂತು ಎಂದು ಗ್ರಾಮಸ್ಥರು ಹೇಳುತ್ತಾರೆ.

ಇನ್ನೂ ಕೆಲವರು ಈ ಭಾಗದಲ್ಲಿ ಅಗಸ್ತ ಮಹಾಋಷಿಗಳು ಸಂಚರಿಸಿ ಹೋಗಿದ್ದಾರೆ. ಇದೇ ಕಾರಣದಿಂದ ಈ ದೇವಸ್ಥಾನ ಒಂದು ಪವಿತ್ರ ಸ್ಥಳವಾಗಿದೆ. ಇತಿಹಾಸ ಪುಟಗಳಲ್ಲಿ ಅಗಸ್ತ ಮಹಾಋಷಿಗಳು ವಾತಾಪಿ ಹಾಗೂ ಇನ್ನೂ ಅವರ ರಾಕ್ಷಸರನ್ನು ಕೊಲ್ಲಲು ವಾತಾಪಿಗೆ ಬಂದು ಹೋಗುವಾಗ ಈ ಮಾರ್ಗದಲ್ಲಿ ಸಂಚರಿಸಿದ್ದಾರೆ ಎಂಬುದು ಇತಿಹಾಸವು ಇದೆ. ಹೀಗಾಗಿ ಈ ಸ್ಥಳ ಒಂದು ಪವಿತ್ರವಾದ ಸ್ಥಳವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಈ ದೇವಸ್ಥಾನ ಹಸಿರಾದ ಬೆಟ್ಟದ ಕೆಳಭಾಗದಲ್ಲಿ ಇರುವ ಕಾರಣ ಮಳೆಗಾಲದಲ್ಲಿ ನೀರು ದೇವಸ್ಥಾನದ ಮೇಲೆ ಜಲಪಾದ ರೀತಿಯಲ್ಲಿ ಧುಮುಕುವುದರಿಂದ ಇಡೀ ದೇವಾಲಯ ಮೇಲೆ ನೀರು ಬೀಳುತ್ತದೆ.

Advertisement

ಜಲಪಾತ ಎರಡು ಕಡೆ ನೀರು ಹರಿದು ಬರುತ್ತದೆ. ಒಂದು ಭಾಗ ತಣ್ಣನೆ ನೀರು ಇದ್ದರೆ, ಇನ್ನೊಂದು ಭಾಗದ ಆಲದ ಮರದ ಬೇರಿನ ಮಧ್ಯದಲ್ಲಿ ಬರುವ ನೀರು ಬಿಸಿಯಾಗಿರುತ್ತದೆ ಹಾಗೂ ಬೆಟ್ಟದ ಮೇಲಿಂದ ಹರಿದು ಬರುವ ಈ ನೀರು ಸಸ್ಯ, ವನಸ್ಪತಿಗಳ ಗಿಡಗಳ ಮಧ್ಯ ಹರಿದು ಬರುವ ಈ ನೀರು ಮೈಮೇಲೆ ಬಿದ್ದರೆ(ಹಾಕಿಕೊಂಡರೆ) ಯಾವ ರೋಗರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಇಲ್ಲಯ ಜನರಲ್ಲಿ ಇದೆ.

ಬೆಟ್ಟದಿಂದ ಬಿದ್ದ ನೀರು ದೇವಸ್ಥಾನ ಮುಂಭಾಗದಲ್ಲಿರುವ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಈ ಮೊದಲು ಬೆಟ್ಟದ ಮೇಲಿಂದ ಬವಸಣ್ಣ ಮೂರ್ತಿಯ ಮೇಲೆ ನಿರಂತರವಾಗಿ ನೀರು ಬೀಳುತ್ತಿತ್ತು. ಸದ್ಯ ದೇವಸ್ಥಾನ ಅಭಿವೃದ್ಧಿಯಾದ ಕಾರಣ ದೇವಾಲಯದ ಪಕ್ಕದಲ್ಲಿ ಹಾಗೂ ದೇವಾಲಯ ಮೇಲೆ ನೀರು ಬೀಳುತ್ತದೆ.

ಕೂಡಲಸಂಗಮನ ರಥಕ್ಕೆ ಗ್ರಾಮದಿಂದಲೇ ತೇರಿನ ಕಾಲಿ ವೈಯಲು ಸಿದ್ಧ ಮಾಡಲಾಗಿತ್ತು. ಈ ವೇಳೆ ಗಾಡಿಗೆ ನೂರಾರು ಎತ್ತುಗಳನ್ನು ಕಟ್ಟಿ ಜಗ್ಗಿದರು. ಮುಂದಕ್ಕೆ ಸಾಗದೆ ಇರುವುದರಿಂದ ಸಾರ್ವಜನಿಕರು ಗಾಬರಿಗೊಂಡರು. ಈ ವೇಳೆ ಹಾನಗಲ್ಲದ ಶ್ರೀಗಳು ನಿಮ್ಮ ಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿಯೇ ನೀರನ್ನು ತೆಗೆದುಕೊಂಡು ಬಂದು ಹಾಕಿ ಮುಂದೆ ಸಾಗುತ್ತೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

ಈ ದೇವಸ್ಥಾನದಲ್ಲಿ ಒಂದಲ್ಲ ಎರಡಲ್ಲ ಅನೇಕ ಪವಾಡಗಳೇ ನಡೆದಿವೆ. ಕುಷ್ಟರೋಗ, ಚರ್ಮರೋಗ ಸಮಸ್ಯೆ ಇರುವವರು ಈ ನೀರಿನಲ್ಲಿ ಸ್ನಾನ ಮಾಡಿದರೆ ವಾಸಿಯಾಗುತ್ತಿದೆ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ.

ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಈಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬಸವಣ್ಣನ ಮೂರ್ತಿ ಇರುವುದು ಕಡಿಮೆ. ಆದರೆ ಈ ದಿಡಗಿನ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ಮೂರ್ತಿಯ ಮುಂದೆ ಈಶ್ವರ ಇರುವುದು ಒಂದು ವಿಶೇಷ.. ಬಸವಣ್ಣನ ಕೋಡಿನ ಮಧ್ಯೆ ಈಶ್ವರನ ನೋಡಬೇಕೆಂಬ ವಾಡಿಕೆ ಇದೆ. ಆದರೆ ಈಶ್ವರನ ತಲೆಯ ಮೇಲಿಂದ ಬಸವಣ್ಣನನ್ನು ಇಲ್ಲಿ ಕಾಣಬಹುದು ಇದೇ ಈ ದೇವಸ್ಥಾನದ ಇನ್ನೊಂದು ವಿಶೇಷತೆ.

ಈ ದೇವಸ್ಥಾನ ಒಂದು ಪವಿತ್ರ ಹಾಗೂ ಪ್ರಸಿದ್ಧಿಯ ದೇವಸ್ಥಾನವಾಗಿದೆ. ಅನೇಕ ಭಕ್ತರು ಮಕ್ಕಳ ಮದುವೆ, ಮಕ್ಕಳ ಭಾಗ್ಯ, ಮನೆಯಲ್ಲಿ ತೊಂದರೆ ಇದ್ದರೆ ದೇವಾಲಯದಲ್ಲಿ ಸ್ನಾನ ಮಾಡಿ ಮನೆಯಲ್ಲಿ ಈ ನೀರು ಚಿಮುಕಿಸಿದರೆ ಸಮಸ್ಯೆಗಳು ಪರಿಹಾರ ಸಿಗುತ್ತದೆ ಎಂಬುದು ಇಲ್ಲಿಯ ಭಕ್ತರ ಅಭಿಪ್ರಾಯ.

ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next