Advertisement

ಕಿಮೋಥೆರಪಿಯ ಸಂದರ್ಭ ಮಾಡಬೇಕಾದ್ದು ಮಾಡಬಾರದ್ದು

03:07 PM Jun 04, 2023 | Team Udayavani |

ಕಿಮೊಥೆರಪಿಯ ಸಂದರ್ಭದಲ್ಲಿ ಮಾಡಿಕೊಳ್ಳಬೇಕಾದ ಜೀವನಶೈಲಿ ಬದಲಾವಣೆಗಳ ಬಗ್ಗೆ ಆಗಾಗ ಕೇಳಲಾಗುವ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳು ಹೀಗಿವೆ:

Advertisement

-ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಎಲ್ಲ ರೀತಿಯ ಆಹಾರಗಳನ್ನು ಸೇವಿಸಬಹುದೇ?
ರೋಗಿಯ ದೇಹದ ವಿವಿಧ ಅಂಗಾಂಗಗಳು ಸಹಜವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ನೀವು ಬಹುತೇಕ ಎಲ್ಲ ವಿಧದ ಆಹಾರಗಳನ್ನು ಸೇವಿಸಬಹುದು. ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಆಹಾರವು ಕಿಮೋಥೆರಪಿಯ ಅಡ್ಡಪರಿಣಾಮಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕಿಮೋಥೆರಪಿಗೆ ಒಳಗಾಗುವ ಸಂದರ್ಭದಲ್ಲಿ ಗ್ಯಾಸ್ಟ್ರೈಟಿಸ್‌/ ಹೊಟ್ಟೆ ಕೆಡುವುದು ಅಥವಾ ಫ‌ುಡ್‌ ಪಾಯ್ಸನಿಂಗ್‌ಗೆ ಒಳಗಾಗದಂತೆ ನೋಡಿಕೊಳ್ಳಬೇಕು. ಕಿಮೊಥೆರಪಿಯ ಸಂದರ್ಭದಲ್ಲಿ ಸೋಂಕಿಗೀಡಾದರೆ ಗುಣಮುಖರಾಗಲು ದೀರ್ಘ‌ಸಮಯ ತಗಲುತ್ತದೆ.

ಹಾಗೆಯೇ ಕಿಮೋಥೆರಪಿಯ ಸಂದರ್ಭದಲ್ಲಿ ಕೆಲವು ಆಹಾರ ವಸ್ತುಗಳು ಬೇಡವೆನ್ನಿಸಬಹುದು ಅಥವಾ ಕೆಲವು ಆಹಾರವಸ್ತುಗಳ ಬಗ್ಗೆ ವಿಶೇಷ ಒಲವು ಉಂಟಾಗಬಹುದು. ಹೀಗಾಗಿ ಯಾವ ಆಹಾರವಸ್ತು ಬೇಕು ಎಂಬುದನ್ನು ದೇಹವೇ ನಿರ್ಧರಿಸಲು ಬಿಡಿ. ಕೆಲವು ಆಹಾರಗಳು ಮಲಬದ್ಧತೆ/ಹೊಟ್ಟೆ ತೊಳೆಸುವಿಕೆ/ಅಜೀರ್ಣ ಉಂಟು ಮಾಡಿದರೆ ಮುಂದಿನ ಬಾರಿ ಅವುಗಳನ್ನು ಸೇವಿಸಬಾರದು.
– ತಾಜಾ ಆಗಿರುವ, ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಸೇವಿಸಲು ಪ್ರಯತ್ನಿಸಿ.
ಹೊರಗಿನ ಆಹಾರಗಳನ್ನು ಸೇವಿಸುವುದೇ ಆಗಿದ್ದರೆ, ಬೇಯಿಸದ ಆಹಾರಕ್ಕಿಂತ ಸರಿಯಾಗಿ ಬೇಯಿಸಿದ, ತಾಜಾ ಆಹಾರಗಳನ್ನು ಆಯ್ದುಕೊಳ್ಳಿ. ಉದಾಹರಣೆಗೆ, ಚಟ್ನಿಯ ಬದಲು ತಾಜಾ ದೋಸೆಯನ್ನು ಸಾಂಬಾರ್‌ ಜತೆಗೆ ಸೇವಿಸಿ.
– ಮೊಸರು: ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಮೊಸರನ್ನು ಸೇವಿಸಬಹುದು, ಆದರೆ ಅದನ್ನು ಕುದಿಸಿದ ಹಾಲಿನಿಂದ ತಯಾರಿಸಿದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
– ಹಣ್ಣುಗಳು: ಕಿಮೋಥೆರಪಿಯ ಸಂದರ್ಭದಲ್ಲಿ ಹಣ್ಣುಗಳನ್ನು ಸೇವಿಸಬಹುದು. ಸಿಪ್ಪೆ ತೆಗೆದು ತಿನ್ನಬಹುದಾದ ಹಣ್ಣುಗಳಿಗೆ ಆದ್ಯತೆ ನೀಡಿ. ಉದಾಹರಣೆಗೆ, ಬಾಳೆಹಣ್ಣು, ಕಿತ್ತಳೆ ಇತ್ಯಾದಿ. ಹಣ್ಣು ಶುಚಿಯಾಗಿದೆ ಎಂಬ ಬಗ್ಗೆ ಖಾತರಿ ಇಲ್ಲದಿದ್ದರೆ ಅಥವಾ ಸಿಪ್ಪೆ ತೆಗೆಯಲು ಆಗದೆ ಇದ್ದರೆ ಬೇಯಿಸಿ ತಿನ್ನಬಹುದು.
– ಒಣಹಣ್ಣುಗಳು: ಒಣಹಣ್ಣುಗಳನ್ನು ತಿನ್ನಬಹುದು. ಪರಿಶುದ್ಧವಾಗಿರುವವುಗಳನ್ನು ಆಯ್ದುಕೊಳ್ಳಿ. ಅವು ಶುಚಿಯಾಗಿಲ್ಲ ಎಂದು ಅನ್ನಿಸಿದರೆ ಹುರಿದು ತಿನ್ನಬಹುದು. ಅಲ್ಲದೆ ಬೇಯಿಸಿ ಅಥವಾ ಬಾದಾಮಿಯಂತಹ ಒಣಹಣ್ಣುಗಳನ್ನು ಸಿಪ್ಪೆ ತೆಗೆದು ಸೇವಿಸಬಹುದು.
– ಹಣ್ಣಿನ ರಸಗಳು: ಮನೆಯಲ್ಲಿ ಹಣ್ಣಿನ ರಸಗಳನ್ನು ತಯಾರಿಸುವ ವೇಳೆ ಕುದಿಸಿ ಆರಿಸಿದ ನೀರನ್ನು ಉಪಯೋಗಿಸಬೇಕು ಮತ್ತು ಶುಚಿಯಾದ ಕೈಗಳಿಂದ ಹಣ್ಣುಗಳನ್ನು ಕತ್ತರಿಸಬೇಕು. ಮಿಕ್ಸರ್‌/ಬ್ಲೆಂಡರ್‌ ಉಪಯೋಗಿಸುವುದಾಗಿದ್ದಲ್ಲಿ ಅವುಗಳು ಶುಚಿಯಾಗಿರಲಿ ಅಥವಾ ಬಳಸುವುದಕ್ಕೆ ಮುನ್ನ ಕುದಿಸಿದ ನೀರಿನಲ್ಲಿ ಶುಚಿಗೊಳಿಸಿಕೊಳ್ಳಿ. ಹಣ್ಣಿನ ರಸ ತಯಾರಿಸುವುದಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ಶುಚಿಗೊಳಿಸಿಕೊಳ್ಳಿ.
ಪ್ಯಾಕ್ಡ್ ಹಣ್ಣಿನ ರಸಗಳನ್ನು ಸೇವಿಸುವುದಾಗಿದ್ದಲ್ಲಿ ಜ್ಯೂಸ್‌ ಪುಡಿಯಿಂದ ನೀವೇ ನೀರು ಸೇರಿಸಿ ತಯಾರಿಸಲು ಪ್ರಯತ್ನಿಸಿ. ಈಗಾಗಲೇ ತಯಾರಾದ ಜ್ಯೂಸ್‌ ಉಪಯೋಗಿಸಲು ಬಯಸುವುದಾದರೆ ವಿಶ್ವಾಸಾರ್ಹ ಉತ್ಪನ್ನಗಳನ್ನು ಆರಿಸಿಕೊಳ್ಳಿ.
– ಎಳನೀರು: ಕಿಮೋಥೆರಪಿಯ ಸಂದರ್ಭದಲ್ಲಿ ದೇಹಕ್ಕೆ ದ್ರವಾಂಶ ಮತ್ತು ಇಲೆಕ್ಟ್ರೊಲೈಟ್‌ಗಳನ್ನು ಪೂರೈಸಲು ಬೊಂಡ/ ಎಳನೀರು ಉತ್ತಮ. ಆದರೆ ಎಳನೀರಿಗೆ ರಂಧ್ರವನ್ನು ಶುಚಿಯಾದ ಚೂರಿಯಿಂದ ಮಾಡಿಕೊಳ್ಳಬೇಕು.
– ಕಾಫಿ/ಚಹಾ/ ಸಕ್ಕರೆ: ಕಿಮೋಥೆರಪಿಯ ಸಂದರ್ಭದಲ್ಲಿ ಹಿಂದಿನಂತೆಯೇ ಕಾಫಿ/ಚಹಾ/ ಸಕ್ಕರೆ ಸೇವಿಸಬಹುದು.
– ಮಾಂಸಾಹಾರ: ಸುರಕ್ಷಿತವಾಗಿ ಪಡೆದ ಮತ್ತು ತಾಜಾ ಆಗಿ ತಯಾರಿಸಿದ ಮಾಂಸಾಹಾರವನ್ನು ಸೇವಿಸಬಹುದು. ಮಾಂಸ ಮೃದುವಾಗಿ ಸುಲಭವಾಗಿ ತಿನ್ನಲು ಅನುವಾಗುವ ತನಕ ಚೆನ್ನಾಗಿ ಬೇಯಿಸಬೇಕು. ಮಾಂಸವನ್ನು ಚೂರು ಮಾಡಿ ಸೂಪ್‌ ರೂಪದಲ್ಲಿಯೂ ಸೇವಿಸಬಹುದು.
– ಕಿಮೋಥೆರಪಿಯ ಸಂದರ್ಭದಲ್ಲಿ ಮತ್ತು ಬಳಿಕ ಸಾಕಷ್ಟು ನೀರು ಮತ್ತು ಇತರ ಆರೋಗ್ಯಕರ ದ್ರವಾಹಾರಗಳಾದ ಮಜ್ಜಿಗೆ ನೀರು, ಎಳನೀರು, ಒಆರ್‌ಎಸ್‌ ಸೇವಿಸಬೇಕು.
– ಕಿಮೋಥೆರಪಿಯ ಸಂದರ್ಭದಲ್ಲಿ ಆಹಾರ ಒಗ್ಗದಿಕೆ ಮತ್ತು ಆಹಾರ ಸೇವನೆ ಕಡಿಮೆಯಾಗುವುದನ್ನು ತಪ್ಪಿಸಲು ಆಹಾರ ಶೈಲಿಯಲ್ಲಿ ಭಾರೀ ಬದಲಾವಣೆ ಮಾಡಿಕೊಳ್ಳಬಾರದು.
– ಮಸಾಲೆ ಪದಾರ್ಥಗಳ ಬಳಕೆ: ಕಿಮೋಥೆರಪಿಯ ಸಂದರ್ಭದಲ್ಲಿ ಅಡುಗೆಯಲ್ಲಿ ಎಲ್ಲ ಬಗೆಯ ಮಸಾಲೆ ಪದಾರ್ಥಗಳನ್ನು ಉಪಯೋಗಿಸಬಹುದು. ಅನೇಕ ಬಗೆಯ ಕಿಮೋಥೆರಪಿಗಳು ಬಾಯಿ ರುಚಿ ಕಡಿಮೆಯಾಗಲು ಮತ್ತು ಹಸಿವು ಕಡಿಮೆಯಾಗಲು, ಬಾಯಿ ಹುಣ್ಣು ಹಾಗೂ ವಾಂತಿ/ ಹೊಟ್ಟೆ ತೊಳೆಸುವಿಕೆಗೆ ಕಾರಣವಾಗುತ್ತವೆ.
– ರುಚಿ ಬದಲಾವಣೆ/ ಬಾಯಿ ರುಚಿ ಕಡಿಮೆಯಾಗುವ ಸಮಸ್ಯೆಗೆ ಪರಿಹಾರವಾಗಿ ತೀಕ್ಷ್ಣ ರುಚಿಯ ಆಹಾರಗಳನ್ನು ಉಪಯೋಗಿಸಿ ನೋಡಬಹುದು.
– ಹಸಿವು ಕಡಿಮೆಯಾಗುವ ಸಮಸ್ಯೆಗೆ ಪರಿಹಾರವಾಗಿ ಆಗಾಗ ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬಹುದು. ಕುಟುಂಬ ಸದಸ್ಯರು ರೋಗಿಯ ಆಹಾರ ಸೇವನೆಯ ಪ್ರಯತ್ನಕ್ಕೆ ಕೈಜೋಡಿಸಬೇಕು
ಮತ್ತು ಅವರು ಉತ್ತಮ ಆಹಾರ ಸೇವಿಸುವಂತೆ ಪೂರಕ ವಾತಾವರಣವನ್ನು ಸೃಷ್ಟಿಸಬೇಕು. ಇದೇವೇಳೆ ಕಿಮೋಥೆರಪಿಯಿಂದ ಅವರ ಆಹಾರ ಸೇವಿಸುವಿಕೆ ತಾತ್ಕಾಲಿಕವಾಗಿ ಕಡಿಮೆಯಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆಹಾರ ಸೇವನೆಯ ವಿಚಾರದಲ್ಲಿ ಒತ್ತಾಯ ಸಲ್ಲದು.
– ಬಾಯಿ ಹುಣ್ಣು ಆಗಿದ್ದರೆ ಸಾತ್ವಿಕ, ಮೃದು ಆಹಾರಗಳನ್ನು ಉಪಯೋಗಿಸಿ ನೋಡಬೇಕು. ಬಾಯಿ ಹುಣ್ಣು ಆಗಿದ್ದರೆ ಆಹಾರ ಜಗಿದು ನುಂಗುವುದು ಕಷ್ಟವಾಗುತ್ತದೆ. ಆಗ ಮೃದುವಾದ ಅರೆ ಘನ ಆಹಾರವಸ್ತುಗಳನ್ನು ಸೇವಿಸಬಹುದು. ಕ್ಯಾಲೊರಿ ಪ್ರಮಾಣವನ್ನು ಕಾಯ್ದುಕೊಳ್ಳುವುದಕ್ಕಾಗಿ ಶಕ್ತಿ ಸಾಕಷ್ಟು ಪ್ರಮಾಣದಲ್ಲಿ ಇರುವ ಶಿಶು ಆಹಾರದಂತಹವುಗಳನ್ನು ತುಪ್ಪ/ ತೆಂಗಿನೆಣ್ಣೆ ಸೇರಿಸಿಕೊಂಡು ಉಪಯೋಗಿಸಬಹುದು.

– ಕಿಮೋಥೆರಪಿಯು ಕ್ಯಾನ್ಸರ್‌ ರೋಗಿಯ
ಮಕ್ಕಳನ್ನು ಪಡೆಯುವ ಸಾಮರ್ಥ್ಯದ
ಮೇಲೆ ಪರಿಣಾಮ ಬೀರುತ್ತದೆಯೇ?
ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಕಿಮೋಥೆರಪಿಯ ಪರಿಣಾಮವು ಕ್ಯಾನ್ಸರ್‌ಗೆ ತುತ್ತಾಗಿರುವ ಅಂಗ ಮತ್ತು ಕಿಮೋಥೆರಪಿಯ ವಿಧವನ್ನು ಅವಲಂಬಿಸಿರುತ್ತದೆ. ಕಿಮೋಥೆರಪಿಯಲ್ಲಿ ಉಪಯೋಗಿಸಲಾಗುವ ಅನೇಕ ಏಜೆಂಟ್‌ಗಳು ಸಂತಾನೋತ್ಪತ್ತಿ ವಿಳಂಬ ಪರಿಣಾಮವನ್ನು ಬೀರಬಹುದಾಗಿವೆ. ಆದರೆ ಇದಕ್ಕೆ ಪರಿಹಾರವಾಗಿ ಕಿಮೋಥೆರಪಿ ಆರಂಭಿಸುವುದಕ್ಕೆ ಮುನ್ನವೇ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸಂರಕ್ಷಿಸಿಡುವ ವಿಧಾನಗಳಿವೆ. ಅಂಡಾಶಯ ಮತ್ತು ಗರ್ಭಾಶಯದ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದಾಗಿದ್ದು, ಇದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ನಷ್ಟವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಿಮೋಥೆರಪಿ, ಕ್ಯಾನ್ಸರ್‌ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನವೇ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸಂರಕ್ಷಿಸಿಡುವ ಸಂಬಂಧ ಈ ವಿಚಾರವಾಗಿ ಓಂಕಾಲಜಿಸ್ಟ್‌ ಬಳಿ ಸಮಾಲೋಚಿಸುವುದು ಉತ್ತಮ.

 ಕಿಮೋಥೆರಪಿಗೆ ಒಳಗಾಗುತ್ತಿರುವ
ರೋಗಿಗಳು ಸಣ್ಣ ಮಕ್ಕಳು/ಗರ್ಭಿಣಿಯರ
ಜತೆಗೆ ಸಂವಹನ ನಡೆಸಬಹುದೇ?
ರೋಗಿಗಳು ಸಣ್ಣ ಮಕ್ಕಳು ಮತ್ತು ಗರ್ಭಿಣಿಯರ ಜತೆಗೆ ಮುಕ್ತವಾಗಿ ವ್ಯವಹರಿ ಸಬಹುದು. ಕಿಮೋಥೆರಪಿಯ ಪರಿಣಾಮ ಗಳು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಗಳು ತೀರಾ ಅತ್ಯಲ್ಪ. ಆದರೆ ರೇಡಿಯೋ -ಅಯೋಡಿನ್‌ ಥೆರಪಿಯಂತಹ ಚಿಕಿತ್ಸೆಗಳಲ್ಲಿ ಇರುವಂತೆ ರೇಡಿಯೋ ಆ್ಯಕ್ಟಿವ್‌ ವಸ್ತುಗಳನ್ನು ಉಪಯೋಗಿಸಿದ್ದಲ್ಲಿ ರೋಗಿ ಯನ್ನು ಪ್ರತ್ಯೇಕಿಸುವ ಅಗತ್ಯ ಬೀಳ ಬಹುದು. ರೋಗಿಗಳು ಈ ವಿಚಾರವನ್ನು ನ್ಯೂಕ್ಲಿಯರ್‌ ಮೆಡಿಸಿನ್‌ ವೈದ್ಯರ ಬಳಿ ಚರ್ಚಿಸಬೇಕು.

Advertisement

ಕಿಮೋಥೆರಪಿಗೆ ಒಳಗಾಗುತ್ತಿರುವ
ಸಮಾರಂಭಗಳಲ್ಲಿ ಭಾಗವಹಿಸಬಹುದೇ?
ಕಿಮೋಥೆರಪಿಗೆ ಒಳಗಾಗುತ್ತಿರುವ ರೋಗಿ ಗಳಲ್ಲಿ ಬಿಳಿರಕ್ತ ಕಣಗಳ ಪ್ರಮಾಣ ಕಡಿಮೆ ಇರುವುದರಿಂದ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಿಮೋಥೆರಪಿಯ ಸಂದರ್ಭದಲ್ಲಿ ಸೋಂಕುಗಳಿಗೆ ತುತ್ತಾದರೆ ಅನಗತ್ಯ ಸಂಕೀರ್ಣ ಸಮಸ್ಯೆಗಳು ಉದ್ಭವಿಸಬಹುದು ಮತ್ತು ಕಿಮೋಥೆರಪಿ ವಿಳಂಬವಾಗಬಹುದು. ಆದ್ದರಿಂದ ಜನರು ಕಿಕ್ಕಿರಿದು ಸೇರಿದ ಪ್ರದೇಶಗಳು ಮತ್ತು ದೊಡ್ಡ ಸಮಾರಂಭಗಳಿಂದ, ವಿಶೇಷವಾಗಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವ ಅವಧಿಯಲ್ಲಿ, ದೂರ ಉಳಿಯುವುದು ಉತ್ತಮ.ಭಾಗವಹಿಸಲೇ ಬೇಕಾದ ಸಮಾರಂಭ ಇರುವ ಸಂದರ್ಭದಲ್ಲಿ ಈ ವಿಚಾರವನ್ನು ಓಂಕಾಲಜಿಸ್ಟ್‌ ಜತೆಗೆ ಚರ್ಚಿಸಿ ಆ ಸಮಾರಂಭದ ವೇಳೆಗೆ ಬಿಳಿ ರಕ್ತ ಕಣಗಳ ಸಂಖ್ಯೆ ಸಹಜ ಸ್ಥಿತಿಗೆ ಮರಳು ರೀತಿಯಲ್ಲಿ ಕಿಮೋಥೆರಪಿಯ ವೇಳಾಪಟ್ಟಿಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಬಹುದು. ರೋಗಿಗಳು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಶ್ವಾಸಾಂಗ ಸುರಕ್ಷೆಯ ಎಲ್ಲ ಕ್ರಮಗಳನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವಂತಹ ಎಲ್ಲ ಕ್ರಮಗಳನ್ನು ಅನುಸರಿಸಬೇಕು.

 ಹೇರ್‌ಡೈ/ ಮೆಹಂದಿ
ಉಪಯೋಗಿಸಬಹುದೇ?
ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಹೇರ್‌ಡೈ ಬಳಕೆ ನೈಲ್‌ ಪಾಲಿಶ್‌ ಬಳಿಯುವುದು ಅಥವಾ ಕೂದಲು, ಕೈಗಳಿಗೆ ಮೆಹಂದಿ ಹಾಕುವುದರಿಂದ ಯಾವ ಸಮಸ್ಯೆಯೂ ಇಲ್ಲ. ಆದರೆ ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ತಿಳಿದಿರುವ ಅಲರ್ಜಿಕಾರಕಗಳಿಂದ ದೂರವಿರಬೇಕು.

 ಕಿಮೋಥೆರಪಿಗೆ ಒಳಗಾಗುತ್ತಿರುವ
ಸಂದರ್ಭದಲ್ಲಿ ರೋಗಿಗಳು ಪ್ರಯಾಣ
ಮಾಡಬಹುದೇ?
ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಪ್ರಯಾಣ ಮಾಡಬಾರದು ಎಂದೇನಿಲ್ಲ. ಆದರೆ ಪ್ರಯಾಣ ಕಾಲದಲ್ಲಿ ವಾಂತಿ ಮಾಡಿಕೊಳ್ಳುವ ತೊಂದರೆ ಇರುವವರಿಗೆ ಕಿಮೋಥೆರಪಿ ಸಂದರ್ಭದಲ್ಲಿ ಪ್ರಯಾಣ ಮಾಡಿದರೆ ವಾಂತಿ ಹೆಚ್ಚಬಹುದು. ಜತೆಗೆ, ದೀರ್ಘ‌ ಪ್ರಯಾಣ ಮಾಡುವುದಾದಲ್ಲಿ ಕಿಮೋಥೆರಪಿಯ ಸಮ್ಮರಿ ಮತ್ತು ರೋಗ ಸ್ಥಿತಿಯ ಬಗೆಗಿನ ವೈದ್ಯಕೀಯ ವಿವರಗಳನ್ನು ಪ್ರಯಾಣ ಕಾಲದಲ್ಲಿ ಜತೆಗಿರಿಸಿಕೊಳ್ಳುವುದು ಒಳ್ಳೆಯದು. ತುರ್ತು ಪರಿಸ್ಥಿತಿ ಎದುರಾದಲ್ಲಿ ಈ ವರದಿಗಳನ್ನು ಆಧರಿಸಿ ಸೂಕ್ತ ಆರೈಕೆ ಪಡೆಯಬಹುದು.
ಕಿಮೋಥೆರಪಿಯ ಸಮಯದಲ್ಲಿ ರಕ್ತದ ಅಂಶಗಳ ಪ್ರಮಾಣ ಸಹಜ ಸ್ಥಿತಿಗೆ ಬಂದ ಬಳಿಕ ಪ್ರಯಾಣ ಮಾಡುವುದು ಒಳಿತು. ರಕ್ತ ಅಂಶಗಳ ಪ್ರಮಾಣ ಕಡಿಮೆ ಇದ್ದಾಗ ರೋಗಿಗಳು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಇದ್ದು, ತುರ್ತು ಆರೈಕೆಯ ಅಗತ್ಯ ಬೀಳಬಹುದು.

ಕಿಮೋಥೆರಪಿಯ
ಸಂದರ್ಭದಲ್ಲಿ ರೋಗಿ ಗರ್ಭ
ಧರಿಸಬಹುದೇ?
ಕಿಮೋಥೆರಪಿ ಕೋರ್ಸ್‌ ಅಥವಾ ಒಟ್ಟಾರೆಯಾಗಿ ಕ್ಯಾನ್ಸರ್‌ ಚಿಕಿತ್ಸೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಗರ್ಭ ಧರಿಸದೆ ಇರುವುದು ಅತ್ಯುತ್ತಮ. ತಾಯಿಯ ಪ್ರಾಣಕ್ಕೆ ಅಪಾಯವಿರುವುದರ ಜತೆಗೆ ಕಿಮೋಥೆರಪಿಯಲ್ಲಿ ಉಪಯೋಗಿಸುವ ಬಹುತೇಕ ಏಜೆಂಟ್‌ಗಳು ಗರ್ಭ ಧಾರಣೆಗೆ ಸುರಕ್ಷಿತವಲ್ಲ. ಹೀಗಾಗಿ ಈ ವಿಚಾರವನ್ನು ಓಂಕಾಲಜಿಸ್ಟ್‌ ಬಳಿ ಚರ್ಚಿಸುವುದು ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ವಿಶ್ವಾಸಾರ್ಹ ಗರ್ಭನಿರೋಧಕ ವಿಧಾನಗಳನ್ನು ಉಪಯೋಗಿಸುವುದು ಬಹಳ ಮುಖ್ಯ.

ಕಿಮೋಥೆರಪಿಗೆ ಒಳಗಾಗುತ್ತಿರುವ ರೋಗಿಗಳು ಸಂಗಾತಿಯ ಜತೆಗೆ
ಸಹಜ ಲೈಂಗಿಕ ಜೀವನವನ್ನು ನಡೆಸಬಹುದೇ?
ಕಿಮೋಥೆರಪಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಲೈಂಗಿಕ ಜೀವನವನ್ನು ನಡೆಯುವ ಸಾಮರ್ಥ್ಯವು ಕ್ಯಾನ್ಸರ್‌ಗೆ ತುತ್ತಾಗಿರುವ ಅಂಗ ಮತ್ತು ಕಿಮೋಥೆರಪಿಯ ವಿಧವನ್ನು ಅವಲಂಬಿಸಿರುತ್ತದೆ. ಶಿಶ°ದ ಕ್ಯಾನ್ಸರ್‌, ಯೋನಿ/ ಗರ್ಭಕಂಠದ ಕ್ಯಾನ್ಸರ್‌ಗಳಂತಹ ಕ್ಯಾನ್ಸರ್‌ಗಳಿಗೆ ಕೆಲವು ವಿಧದ ಚಿಕಿತ್ಸೆಯ ಸಂದರ್ಭದಲ್ಲಿ ತೆಗೆದುಹಾಕುವುದು ಅಗತ್ಯವಾಗಬಹುದು. ಹೀಗಾಗಿ ಈ ವಿಚಾರವಾಗಿ ರೋಗಿಗಳು ಓಂಕಾಲಜಿಸ್ಟ್‌ ಜತೆಗೆ ಸಮಾಲೋಚನೆ ನಡೆಸಬೇಕು.
ಕೆಲವು ವಿಧವಾದ ಕಿಮೋಥೆರಪಿಗಳು ಪುರುಷರು ಮತ್ತು ಮಹಿಳೆಯರಲ್ಲಿ ನಿಶ್ಶಕ್ತಿ ಮತ್ತು ಲೈಂಗಿಕ ಆಸಕ್ತಿ ಕಡಿಮೆಯಾಗುವುದಕ್ಕೆ, ಮಹಿಳೆಯರಲ್ಲಿ ಯೋನಿ ಶುಷ್ಕತೆಗೆ/ ಹುಣ್ಣಿಗೆ ಕಾರಣವಾಗಬಹುದು. ಇದಲ್ಲದೆ ರೋಗಿಯ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವಾಗ ಅಥವಾ ರೋಗ ನಿರೋಧಕ ಶಕ್ತಿ ಕುಂದಿಸಲ್ಪಟ್ಟಿರುವಾಗ ಯೋನಿಯಲ್ಲಿ ಆಗುವ ಸಣ್ಣ ಗಾಯಗಳು ಕೂಡ ಸೋಂಕಿಗೀಡಾಗುವ ಸಂಭವ ಇರುವುದರಿಂದ ಈ ಅವಧಿಯಲ್ಲಿ ಲೈಂಗಿಕ ಸಂಪರ್ಕ ನಡೆಸದೆ ಇರುವುದು ಉತ್ತಮ. ಅಲ್ಲದೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಲೈಂಗಿಕ ಸಂಪರ್ಕ ನಡೆಸಿದರೆ ರಕ್ತಸ್ರಾವಕ್ಕೆ ಒಳಗಾಗುವ ಸಾಧ್ಯತೆಗಳು ಕೂಡ ಇರುತ್ತವೆ.
ಇತರ ರೋಗಿಗಳು ಓಂಕಾಲಜಿಸ್ಟ್‌ ಬಳಿ ಸಮಾಲೋಚಿಸಿದ ಬಳಿಕ ತಮ್ಮ ಸಂಗಾತಿಯ ಜತೆಗೆ ಲೈಂಗಿಕ ಸಂಪರ್ಕವನ್ನು ಮುಂದುವರಿಸಬಹುದು.

ಮುಂದಿನ ವಾರಕ್ಕೆ

-ಡಾ| ಶಾರದಾ ಮಾಯಿಲಂಕೋಡಿ
ಅಸೋಸಿಯೇಟ್‌ ಪ್ರೊಫೆಸರ್‌, ಮೆಡಿಕಲ್‌ ಓಂಕಾಲಜಿ ವಿಭಾಗ, ಮಣಿಪಾಲ ಕಾಂಪ್ರಹೆನ್ಸಿವ್‌ ಕ್ಯಾನ್ಸರ್‌ ಕೇರ್‌ ಸೆಂಟರ್‌ , ಕೆಎಂಸಿ, ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next