Advertisement

ಬಾಗಿಲು ಮುಚ್ಚಿದ ಬೆಳ್ಳಾರೆ ಸಂಚಾರ ನಿಯಂತ್ರಣ ಕೇಂದ್ರ

11:08 PM Nov 15, 2019 | mahesh |

ಬೆಳ್ಳಾರೆ: ಬೆಳೆಯುತ್ತಿರುವ ಬೆಳ್ಳಾರೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣಕ್ಕೆ ಬರುವ ಸಾರಿಗೆ ಸಂಸ್ಥೆ ಬಸ್‌ಗಳನ್ನು ನಿಯಂತ್ರಿಸಲು ಇಲ್ಲಿ ಸಂಚಾರ ನಿಯಂತ್ರಿಕರಿಲ್ಲದೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.

Advertisement

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಹಲವು ವರ್ಷಗಳ ಹಿಂದೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳ್ಳಾರೆಯಲ್ಲಿ ಸಂಚಾರ ನಿಯಂತ್ರಣ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಇಲ್ಲಿ ಸಂಸ್ಥೆಯ ಆದೇಶದಂತೆ ಇಬ್ಬರು ಸಂಚಾರ ನಿಯಂತ್ರಕರನ್ನು ನೇಮಿಸಲಾಗಿತ್ತು. ಪ್ರಾರಂಭದ ದಿನಗಳಲ್ಲಿ ಇಬ್ಬರು ಸಂಚಾರ ನಿಯಂತ್ರಕರು ಪಾಳಿಯಲ್ಲಿ ದಿನಪೂರ್ತಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಒಬ್ಬರೇ ಆದರು. ಅವರ ನಿವೃತ್ತಿಯ ಎರಡು ತಿಂಗಳ ಬಳಿಕ ಮತ್ತೋರ್ವ ಸಂಚಾರ ನಿಯಂತ್ರಕರನ್ನು ನೇಮಿಸಲಾಗಿತ್ತು. ಆದರೆ ಎರಡು ತಿಂಗಳಿನಿಂದ ಇಲ್ಲಿ ಸಂಚಾರ ನಿಯಂತ್ರಕರೇ ಇಲ್ಲದೆ ಕೇಂದ್ರವು ಬಾಗಿಲು ಮುಚ್ಚಿದೆ.

ಪ್ರಯಾಣಿಕರಿಗೆ ತೊಂದರೆ
ಬೆಳ್ಳಾರೆ ಸುಳ್ಯ ತಾಲೂಕಿನ ಎರಡನೇ ಕೇಂದ್ರ ಸ್ಥಳವಾಗಿದ್ದು, ಇಲ್ಲಿನ ಬಸ್‌ ನಿಲ್ದಾಣಕ್ಕೆ ಬೆಳಗ್ಗೆ 6.30ರಿಂದ ರಾತ್ರಿ 9.45ರ ವರೆಗೆ ಹತ್ತಾರು ಬಸ್‌ಗಳು ಬಂದು ಹೋಗುತ್ತಿವೆ.  ಬೆಂಗಳೂರು, ಮೈಸೂರು, ಮಡಿಕೇರಿ, ಕಾರವಾರ, ಕಾಸರಗೋಡು, ಸುಬ್ರಹ್ಮಣ್ಯ, ಮಂಗಳೂರು ಮುಂತಾದ ಪ್ರಮುಖ ಸ್ಥಳಗಳಿಗೆ ತೆರಳುವ ಬಸ್‌ಗಳಿಗೆ ಇದು ಜಂಕ್ಷನ್‌ನಂತಿದೆ. ಬಸ್‌ ನಿಲ್ದಾಣದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ಮಾತ್ರ ಬಸ್‌ ಸಂಚಾರದ ಸೂಕ್ತವಾದ ಮಾಹಿತಿ ಸಿಗದೆ ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ.

ದುರಸ್ತಿಯಾದರೂ ನಿಯಂತ್ರಕರಿಲ್ಲ
ಬೆಳ್ಳಾರೆ ಬಸ್‌ ನಿಲ್ದಾಣಕ್ಕೆ ಇತ್ತೀಚೆಗೆ ದುರಸ್ತಿ ಭಾಗ್ಯ ದೊರೆತಿತ್ತು. ಟಿ.ಸಿ. ಕೊಠಡಿ ತೆರವು ಮಾಡಿ ಪ್ರಾಯಾಣಿಕರ ವಿಶ್ರಾಂತಿ ಕೊಠಡಿಯನ್ನು ವಿಸ್ತರಿಸಿ ಟೈಲ್ಸ್‌ ಅಳವಡಿಸುವುದೂ ಸೇರಿದಂತೆ ಬಣ್ಣ ಬಳಿದು ಬಸ್‌ ನಿಲ್ದಾಣವನ್ನು ನವೀಕರಿಸಲಾಗಿತ್ತು. ಪುತ್ತೂರು-ಸುಳ್ಯ ತಾಲೂಕಿನ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಿರುವ ಬೆಳ್ಳಾರೆಗೆ ನಿತ್ಯ ಸಾವಿರಾರು
ಪ್ರಯಾಣಿಕರು ಬರುತ್ತಾರೆ.

Advertisement

ಬಹುತೇಕರು ಸರಕಾರಿ ಬಸ್‌ಗಳನ್ನೇ ಅವಲಂಬಿಸಿರುವು ದರಿಂದ ಬಸ್‌ ನಿಲ್ದಾಣದಲ್ಲಿ ಕಾಯುವುದು ಸಾಮಾನ್ಯ. ರಾತ್ರಿಯ ವರೆಗೂ ಬಸ್‌ ಸಂಚಾರ ವಿದ್ದರೂ ಸಂಚಾರ ನಿಯಂತ್ರಕರಿಲ್ಲದೆ ಕೆಲವು ಬಸ್‌ಗಳು ಸಮಯಕ್ಕೆ ಸರಿಯಾಗಿ ತೆರಳುತ್ತಿಲ್ಲ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕಿದೆ ಎಂದು
ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

 ಮುಚ್ಚಿದ ಕೇಂದ್ರ ತೆರೆಯಿರಿ
ಪ್ರಯಾಣಿಕರ ಹಿತದೃಷ್ಟಿಯಿಂದ ಇಲ್ಲಿಗೆ ಇಬ್ಬರು ಸಂಚಾರ ನಿಯಂತ್ರಕರ ಅಗತ್ಯ ಇದೆ. ಮುಚ್ಚಿದ ಸಂಚಾರ ನಿಯಂತ್ರಕರ ಕೊಠಡಿ ತೆರೆದು ದಿನ ಪೂರ್ತಿ ಸಂಚಾರ ನಿಯಂತ್ರಕರು ಕರ್ತವ್ಯ ನಿರ್ವಹಿಸಿದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
– ಜೀವನ್‌, ನಿತ್ಯ ಪ್ರಯಾಣಿಕ

 ನಿಯಂತ್ರಕರು ರಜೆಯಲ್ಲಿದ್ದಾರೆ
ಸಂಚಾರ ನಿಯಂತ್ರಕರ ಕೊರತೆ ಇದೆ. ಸುಬ್ರಹ್ಮಣ್ಯ, ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ನಿಯಂತ್ರಕರು ಅನಾರೋಗ್ಯದ ಕಾರಣ ರಜೆಯಲ್ಲಿದ್ದಾರೆ. ಅವರು ಬಂದ ಬಳಿಕ ಬೆಳ್ಳಾರೆ ಗೆ ಸಂಚಾರ ನಿಯಂತ್ರಕರು ಬರುತ್ತಾರೆ.
– ಸುಂದರರಾಜ್‌ , ಡಿಪೋ ಮ್ಯಾನೇಜರ್‌, ಸುಳ್ಯ

 ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next