Advertisement

ಪರೀಕ್ಷೆ ಕೇಂದ್ರದ ವ್ಯವಸ್ಥೆಯ ಚಿಂತೆ ಬಿಡಿ, ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗಿ

12:25 AM Mar 23, 2022 | Team Udayavani |

ಮಾ.28ರಿಂದ ಆರಂಭವಾಗಲಿರುವ ಪರೀಕ್ಷೆಗೆ ಆಡಳಿತಾತ್ಮಕವಾಗಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳಿಗೆ ಶಾಲೆಯ ಮೂಲಕ ಈಗಾಗಲೇ ಪ್ರವೇಶ ಪತ್ರ ವಿತರಣೆ ಮಾಡಲಾಗಿದೆ. ಕೊರೊನಾ ಪ್ರಕರಣ ಕಡಿಮೆಯಿದ್ದರೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ತಜ್ಞರು ನೀಡಿರುವ ಸೂಚನೆಯ ಅನುಸಾರವಾಗಿ ಕೆಲವು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಸುಲಲಿತವಾಗಿ ಪರೀಕ್ಷೆ ಬರೆಯಲು ಎಲ್ಲ ರೀತಿಯ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗುತ್ತಿದೆ.

Advertisement

ಎಸೆಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ ಸರಕಾರಿ ಸಾರಿಗೆ ಬಸ್‌ಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ಹೋಗಿ ಬರಬಹುದಾದ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿದೆ.

ವಿದ್ಯಾರ್ಥಿಗಳು ಬಹು ಮುಖ್ಯವಾಗಿ ಪ್ರವೇಶ ಪತ್ರವನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಎಲ್ಲ ಪರೀಕ್ಷೆ ಮುಗಿಯುವವರೆಗೂ ಪ್ರವೇಶ ಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಪ್ರವೇಶ ಪತ್ರದಲ್ಲಿ ಹೆಸರು, ಭಾವಚಿತ್ರ, ಪರೀಕ್ಷಾ ಕೇಂದ್ರ, ವಿಷಯ ಮತ್ತು ನೋಂದಣಿ ಸಂಖ್ಯೆ ಇತ್ಯಾದಿ ಸರಿಯಾಗಿ ಇವೆಯೇ ಎಂಬುದನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು. ಪರೀಕ್ಷೆ ಬರೆಯಲು ಬೇಕಾದ ಪೆನ್‌, ಚಿತ್ರ ಬಿಡಿಸಲು ಅಗತ್ಯವಿರುವ ಪೆನ್ಸಿಲ್‌ ಮೊದಲಾದ ಪರಿಕರಗಳು, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಬೇಕಾದ ಅನುಮತಿ ಇರುವ ಕೆಲವು ಪರಿಕರಗಳು ಜತೆಗಿರಲಿ.

ಮೊಬೈಲ್‌ ಸ್ವಾಧೀನ ಅಧಿಕಾರಿಗಳು
ಪರೀಕ್ಷಾ ಕೊಠಡಿಯ ಒಳಗೆ ಮೊಬೈಲ್‌ ಸಹಿತ ಯಾವುದೇ ಎಲೆಕ್ಟ್ರಾನಿಕ್‌ ವಸ್ತು ಕೊಂಡೊಯ್ಯಲು ಅವಕಾಶ ಇಲ್ಲ. ಪ್ರತೀ ಪರೀಕ್ಷಾ ಕೇಂದ್ರಕ್ಕೂ ಮೊಬೈಲ್‌ ಸ್ವಾಧೀನ ಅಧಿಕಾರಿಯನ್ನು ನಿಯೋಜನೆ ಮಾಡ ಲಾಗಿದೆ. ವಿದ್ಯಾರ್ಥಿಗಳು ಮಾತ್ರ ಅಲ್ಲದೆ ಕೊಠಡಿಯ ಮೇಲ್ವಿಚಾರಕರು ಕೂಡ ಮೊಬೈಲ್‌ ಫೋನ್‌ ಕೊಂಡೊಯ್ಯುವಂತಿಲ್ಲ. ಸ್ಮಾರ್ಟ್‌ ವಾಚ್‌ಗಳಿಗೂ ಅವಕಾಶ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಸ್ಮಾರ್ಟ್‌ ವಾಚ್‌ಗಳನ್ನು ಕಟ್ಟಿಕೊಂಡು ಹೋಗ ಬಾರದು. ಕೆಮರಾ ಮೊದಲಾದ ಎಲೆಕ್ಟ್ರಾ ನಿಕ್‌ ವಸ್ತುಗಳನ್ನು ಕೇಂದ್ರದ ಒಳಗೆ ಒಯ್ಯುವ ಹಾಗಿಲ್ಲ. ಇವೆಲ್ಲವನ್ನೂ ಮೊಬೈಲ್‌ ಸ್ವಾಧೀನಾಧಿಕಾರಿಗಳಿಗೆ ನೀಡಿ ಪರೀಕ್ಷೆ ಬರೆದು, ಬಳಿಕ ವಾಪಸ್‌ ಪಡೆದುಕೊಳ್ಳಬಹುದು.

ಎಚ್ಚರಿಕೆ ಘಂಟೆ
ಪ್ರತೀ ವಿಷಯದಲ್ಲೂ 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿಕೊಳ್ಳಲು ಸಮಯಾವಕಾಶ ಇರುತ್ತದೆ. ಪರೀಕ್ಷೆ ಆರಂಭ ಆಗುತ್ತಿದ್ದಂತೆ ಮೊದಲ ಘಂಟೆ ಬಾರಿಸಲಾಗುತ್ತದೆ. ಬಳಿಕ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನೀಡಿ ಮತ್ತೂಂದು ಘಂಟೆ ಬಾರಿಸುತ್ತಾರೆ. ಕೊನೆಯ ಅರ್ಧ ತಾಸು ಇರುವಾಗ ಮತ್ತೂಂದು ಬೆಲ್‌ ಆಗುತ್ತದೆ. ಕೊನೆಯಲ್ಲಿ ಲಾಂಗ್‌ ಬೆಲ್‌ ಇರುತ್ತದೆ. ಹೀಗೆ ಪರೀಕ್ಷಾ ಅವಧಿ ಆರಂಭ ದಿಂದ ಪೂರ್ಣಗೊಳ್ಳುವ ವರೆಗೆ 6ರಿಂದ 7 ಬಾರಿ ಘಂಟೆ ಬಾರಿಸಿ ಸಮಯದ ಬಗ್ಗೆ ನೆನಪಿಸಲಾಗುತ್ತದೆ.

Advertisement

ಮಾರ್ಗದರ್ಶನ
ಪರೀಕ್ಷಾ ಕೇಂದ್ರದಲ್ಲಿ ಯಾವ ನೋಂದಣಿ ಸಂಖ್ಯೆಯ ವಿದ್ಯಾರ್ಥಿಗಳಿಗೆ ಯಾವ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದರ ಮಾರ್ಗಸೂಚಿಯನ್ನು ಕೇಂದ್ರದ ಪ್ರಮುಖ ಸ್ಥಳಗಳಲ್ಲಿ ಅಳವಡಿ ಸಲಾಗುತ್ತದೆ. ನೋಂದಣಿ ಸಂಖ್ಯೆಯನ್ನು ಗಮನಿಸಿ ಕೊಂಡು ನಿರ್ದಿಷ್ಟ ಕೊಠಡಿಯಲ್ಲಿ ಆಯಾ ನೋಂದಣಿ ಸಂಖ್ಯೆ ಇರುವ ಬೆಂಚ್‌ ಮೇಲೆ ಕುಳಿತು ಪರೀಕ್ಷೆ ಬರೆಯಬೇಕು. ಪರೀಕ್ಷಾ ಕೊಠಡಿಯ ಬಗ್ಗೆ ಕೇಂದ್ರದಲ್ಲಿ ಯಾವುದಾದರೂ ಗೊಂದಲ ಇದ್ದಲ್ಲಿ ಕೇಂದ್ರದಲ್ಲಿರುವ ಸಿಬಂದಿಯ ಸಹಾಯವನ್ನು ಪಡೆಯಬಹುದಾಗಿದೆ. ಎಲ್ಲ ರೀತಿಯ ಮಾಹಿತಿಗಳನ್ನು ಕೇಂದ್ರದಲ್ಲಿ ಇರುವ ಸಿಬಂದಿ ನೀಡಲಿದ್ದಾರೆ.

ಕೊರೊನಾ ಭಯ ಬೇಡ
ಕೊರೊನಾ ಪಾಸಿಟಿವ್‌ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದೆ. ಸೋಂಕು ಹೊಂದಿರುವ ವಿದ್ಯಾರ್ಥಿಗಳು ಈ ವಿಚಾರವನ್ನು ಎರಡು ದಿನ ಮುಂಚಿತವಾಗಿ ಬಿಇಒ ಗಮನಕ್ಕೆ ತರಬೇಕು. ಕೋವಿಡ್‌ ಕೇರ್‌ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಇರಲಿದೆ. ಎಲ್ಲರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಎಲ್ಲ ಕೇಂದ್ರ ಗಳಲ್ಲೂ ವಿಶೇಷ ಕೊಠಡಿ ವ್ಯವಸ್ಥೆ ಇರುತ್ತದೆ. ಪ್ರತೀ ವಿದ್ಯಾರ್ಥಿಯ ಆರೋಗ್ಯ ತಪಾಸಣೆ, ಥರ್ಮಲ್‌ ಸ್ಕ್ರೀನಿಂಗ್‌ ಇತ್ಯಾದಿ ನಡೆಯುತ್ತದೆ. ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಮನೆಯಿಂದ ಪರೀಕ್ಷೆಗೆ ಹೊರಡು ವಾಗಲೇ ಪ್ರವೇಶಪತ್ರ ಸಹಿತ ಪರೀಕ್ಷೆಗೆ ಅಗತ್ಯವಿರುವ ಎಲ್ಲ ವಸ್ತುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೆತ್ತವರು ಈ ಬಗ್ಗೆ ನಿಗಾ ವಹಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಹೋದ ಮೇಲೆ ಪರಿತಪಿಸುವಂತೆ ಆಗಬಾರದು.

ಎಸೆಸೆಲ್ಸಿ ಟಿಪ್ಸ್‌
-ನೀಲಿ ಮತ್ತು ಕಪ್ಪು ಶಾಯಿ ಪೆನ್‌ನಲ್ಲಿ ಪರೀಕ್ಷೆ ಬರೆಯಬಹುದು.
-ನೀರಿನ ಬಾಟಲಿ ಕೊಂಡೊಯ್ಯಲು ಅವಕಾಶವಿದೆ.
-ಮೊಬೈಲ್‌ ಸಹಿತ ಯಾವುದೇ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ.
-ಪ್ರವೇಶ ಪತ್ರ ಜೋಪಾನವಾಗಿ ಇಟ್ಟುಕೊಳ್ಳಬೇಕು.
-ಬೆಳಗ್ಗೆ ಬೇಗ ಮನೆಯಿಂದ ಹೊರಡುವವರು ಉಪಾಹಾರ ಕಟ್ಟಿಕೊಂಡು ಬಂದು, ಪರೀಕ್ಷಾ ಕೇಂದ್ರದ ನಿರ್ದಿಷ್ಟ ಸ್ಥಳದಲ್ಲಿ ಸೇವಿಸಲು ಅವಕಾಶವಿದೆ.
-ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಆರೋಗ್ಯ ತಪಾಸಣ ಕೌಂಟರ್‌ ಇರಲಿದೆ.
-ವಿಶೇಷ ಕೊಠಡಿಯೂ ಇರಲಿದೆ. ದಿಢೀರ್‌ ಅಸೌಖ್ಯ, ಕೆಮ್ಮು, ಜ್ವರ, ಶೀತ ಇತ್ಯಾದಿ ಕಾಣಿಸಿಕೊಂಡಾಗ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಲು ಅವಕಾಶ ಇರಲಿದೆ.
-ಮನೆಯಿಂದ ಮಾಸ್ಕ್ ಧರಿಸದೇ ಬರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣ ಕೌಂಟರ್‌ನಲ್ಲಿ ಮಾಸ್ಕ್ ನೀಡಲಾಗುವುದು.
-ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನವೂ ಇರಲಿದೆ.
-ಕೊರೊನಾ ಪಾಸಿಟಿವ್‌ ವಿದ್ಯಾರ್ಥಿಗಳಿಗೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು.
-ಕೊರೊನಾ ಪಾಸಿಟಿವ್‌ ವಿದ್ಯಾರ್ಥಿಗಳ ಮಾಹಿತಿಯನ್ನು ಬಿಇಒ ಲಾಗಿನ್‌ ಮೂಲಕ ಸಂಗ್ರಹಿಸಲಾಗುತ್ತದೆ.

ಮಾಹಿತಿ: ಜಾಹ್ನವಿ ಸಿ.,ಎಸೆಸೆಲ್ಸಿ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next