Advertisement

Nipah, ಡೆಂಗ್ಯೂ ಆತಂಕ ಬೇಡ, ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿ: ಡಿಸಿ ಮುಲ್ಲೈ ಮುಗಿಲನ್

08:28 PM Sep 15, 2023 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಡೆಂಗ್ಯೂ, ನಿಫಾ ವೈರಸ್ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳ ಲಕ್ಷಣ, ಹರಡುವಿಕೆ ನಿಯಂತ್ರಣ ಸೇರಿದಂತೆ ಚಿಕಿತ್ಸೆಯ ಬಗ್ಗೆ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣವನ್ನು ನೀಡಿ ಇವುಗಳ ನಿಯಂತ್ರಣಕ್ಕೆ ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಡೆಂಗ್ಯೂ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣದಂತೆ ಡೆಂಗ್ಯೂ ನಿಯಂತ್ರಣ ಮಾಡುವುದು ಅತೀ ಮುಖ್ಯ ಡೆಂಗ್ಯೂ ಈಡಿಸ್ ಎನ್ನುವ ಸೊಳ್ಳೆಯಿಂದ ಹರಡುತ್ತದೆ. ಈಡಿಸ್ ಸೊಳ್ಳೆ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳು ಸೂಕ್ತ ಕಾನೂನನ್ನು ಅಳವಡಿಸಿ ಲಭ್ಯವಿರುವ ಸಾಂಕ್ರಾಮಿಕ ರೋಗಗಳ/ಸಿ ಆರ್ ಪಿ ಸಿ ಅಧಿನಿಯಮದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಸಾಮಾನ್ಯವಾಗಿ ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ನೀರಿನಲ್ಲಿ ಮಾಡುತ್ತವೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಸೊಳ್ಳೆ ಉತ್ಪತ್ತಿ ಸ್ಥಳಗಳನ್ನು ಗುರುತಿಸಿ ಆ ಜಾಗದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಣ ಮಾಡಲು ನೋಟಿಸ್ ನೀಡಲು ಹೇಳಿದರು.

ಡೆಂಗ್ಯೂ ನಿಯಂತ್ರಣದ ಕುರಿತು ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಾಟ್ಸ್ಆಪ್ ಗ್ರೂಪ್ ಮೂಲಕ ಕ್ರಮ ಕೈಗೊಳ್ಳಬೇಕು. ಲಾರ್ವನಾಶಕ ಸಿಂಪಡಣೆ ಕುರಿತು ಕ್ರಿಯಾಯೋಜನೆ ತಯಾರಿಸಿ ಸಮಸ್ಯಾತ್ಮಕ ಪ್ರದೇಶವನ್ನು ಗುರುತಿಸಿ ಲಾರ್ವ ನಾಶ ಮಾಡಬೇಕು. ಡೆಂಗ್ಯೂ ಪ್ರಕರಣ ಕಂಡು ಬಂದ ತಕ್ಷಣ ದೂಮೀಕರಣ, ಲಾರ್ವ ನಾಶಸಿಂಪಡಣೆ ಮತ್ತು ಲಾರ್ವ ಸಮೀಕ್ಷೆ ನಡೆಸಬೇಕು ಎಂದರು.

ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳಲ್ಲಿ ವಾಸ್ತವ್ಯದ ಆದ್ಯತೆಯ ಮೇರೆಗೆ ಲಾರ್ವನಾಶ ಧೂಮಿಕರಣ ಮಾಡಬೇಕು. ಶಾಲಾ ಪರಿಸರ ಹಾಗೂ ಮನೆಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಮಕ್ಕಳಿಂದ ವಿನೂತನ ರೀತಿಯಲ್ಲಿ ಡೆಂಗ್ಯೂ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಬೇಕು. ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವ ಮೂಲಕ ಶಾಶ್ವತವಾದ ಪರಿಹಾರ ಕಂಡುಹಿಡಿಲು ಕ್ರಮವಹಿಸಲು ಹೇಳಿದರು.

Advertisement

ನಿಫಾ ವೈರಸ್ ರೋಗಲಕ್ಷಣದ ಬಗ್ಗೆ ಎಲ್ಲಾ ಆರೋಗ್ಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ವೈದ್ಯಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಬೇಕು ಅದನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎಂದರು.
ಅರಣ್ಯ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಫ್ರೂಟ್ ಬಾವಲಿಗಳ ಇರುವಿಕೆಯ ಬಗ್ಗೆ ಮಾಹಿತಿ ಪಡೆಯಬೇಕು.

ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಮತ್ತು ಎಲ್ಲಾ ಮೆಡಿಕಲ್ ಕಾಲೇಜುಗಳು ಸಕ್ರೀಯವಾಗಿರಬೇಕು. ಸೂಕ್ತ ಐಸೋಲೇಶನ್ ವಾರ್ಡುಗಳನ್ನು ಕಾಯ್ದಿರಿಸಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಔಷಧೀಯ ದಾಸ್ತಾನಿನೊಂದಿಗೆ ಜ್ವರದ ಸಮೀಕ್ಷೆ ಮಾಡಲು ಹೇಳಿದರು.

ಜನರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಮನೆ ಬಳಿ ಬಾವಲಿಗಳು ಇದ್ದರೆ ಎಚ್ಚರಿಕೆ ವಹಿಸಿ, ಪಕ್ಷಿಗಳು ಕಚ್ಚಿರುವ ಹಣ್ಣಗಳನ್ನು ಬಳಸಬಾರದು. ಹಣ್ಣುಗಳನ್ನು ತೊಳೆದು ಉಪಯೋಗಿಸಿ. ನಿಫಾ ವೈರಸ್ ರೋಗ ಲಕ್ಷಣಗಳನ್ನು ಕುರಿತು ಜನರಿಗೆ ಅರಿವು ಮೂಡಿಸಿ. ಜ್ವರ ಬಂದರೆ ಅದಕ್ಕೆ ನಿರ್ಲಕ್ಯ್ಷ ವಹಿಸದೆ ಚಿಕಿತ್ಸೆ ಪಡೆಯಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ ವಸತಿ ನಿಲಯಗಳ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನ ಹರಿಸುವಂತೆ ಹೇಳಿದರು. ಪ್ರತೀ ದಿನದ ಸಂಶಯಾತ್ಮಕ ಡೆಂಗ್ಯೂ ಪ್ರಕರಣದ ಪಟ್ಟಿ ತಯಾರಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಿದರು.

ವೈದ್ಯಾಧಿಕಾರಿಗಳು ಪ್ರತೀ ವಾರ ಸಭೆ ನಡೆಸಿ ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಸೂಕ್ತ ಕ್ರಮವಹಿಸಬೇಕು. ಜನರು ಯಾವುದೇ ಆತಂಕ ಪಡದಂತೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸಬೇಕು ಎಂದರು. ನಗರ ಪ್ರದೇಶಗಳಲ್ಲಿ ಪೈಪ್ ಲೈನ್ ಸೋರಿಕೆ, ನೀರಿನ ಟ್ಯಾಂಕ್ ಗಳ ದುರಸ್ತಿ ಹಾಗೂ ಸ್ವಚ್ಛಗೊಳಿಸಿರುವ ಬಗ್ಗೆ ಕಾಲಕಾಲಕ್ಕೆ ಅಧಿಕಾರಿಗಳು ಖಚಿತಪಡಿಸಿಕೊಂಡು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಆನಂದ್ ಸಿ.ಎಲ್, ಪ್ರೊಬೇಷನರಿ ಅಧಿಕಾರಿ ಮುಕುಲ್ ಜೈನ್, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ಸಿಎಂ, ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್ ಪ್ರಾಂಶುಪಾಲರಾದ ಡಾ. ಕಿಶೋರ್ ಕುಮಾರ್ ಎಂ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶಾನುಭೋಗ್, ಸರ್ಕಾರಿ ಲೇಡಿಘೋಷನ್ ಆಸ್ಪತ್ರೆಯ ವೈದ್ಯಕೀಯ ಅಧಿಕರಾದ ಡಾ. ದುರ್ಗಾ ಪ್ರಸಾದ್ ಎಂ. ಆರ್, ಜಿಲ್ಲಾ ರೋಗವಾಹಕ ಆಶ್ರತ ರೋಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next