Advertisement

ಅರವತ್ತಾಯಿತೆಂದು ಅಳುಕದಿರಿ

08:25 AM Jun 16, 2019 | mahesh |

ಹಾಲಿವುಡ್‌ ನಟಿ, ಫಿಟ್ನೆಸ್‌ ಗುರು ಜೇನ್‌ ಫೊಂಡಾ ಅವರಿಗೀಗ 81 ವರ್ಷ. ತಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಯಿಂದ ಅವರಿಂದು ಜಗತ್ತಿನಾದ್ಯಂತ ಮನೆ ಮಾತಾಗಿದ್ದಾರೆ. ಒಮ್ಮೆ ಫೋಂಡಾ ಅವರು ಮಾತನಾಡುತ್ತಾ, ”60 ವರ್ಷಕ್ಕೆ ಕಾಲಿಟ್ಟ ನಂತರವೇ ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ, ನನ್ನನ್ನು ನಾನು ಹುಡುಕಿಕೊಂಡು, ಮತ್ತೆ ಯುವತಿ ಯಾದೆ” ಎಂದರು.

Advertisement

ವಯಸ್ಸಾಗುವುದು ಎಂದರೆ ಮುಪ್ಪಡರುವುದು ಮತ್ತು ದೈಹಿಕವಾಗಿ ವಿಪರೀತ ದುರ್ಬಲರಾಗಿ, ನಿವೃತ್ತರಾಗುವುದು ಎಂದರ್ಥವಲ್ಲ. ಅದು ”ಕಾಲಾನುಸಾರವಾಗಿ ಹಿರಿಯರಾಗುವುದಷ್ಟೆ”. ಮೊದಲಿನಂತೆ ಈಗೆಲ್ಲ 60ರ ವಯಸ್ಸು ಅಥವಾ ನಿವೃತ್ತ ಜೀವನ ಎಂದಾಕ್ಷಣ ‘ಗಾಲಿ ಕುರ್ಚಿಯ ಮೇಲೆ ಕುಳಿತು ಸೂರ್ಯಾಸ್ತವನ್ನು ನೋಡುವುದು’ ಎಂಬ ರೂಪಕ ಕಣ್ಣೆದುರು ಬರುವುದಿಲ್ಲ. ಈಗ ಜಗತ್ತಿನಾದ್ಯಂತ sixty is the new forty ಎನ್ನುವ ಮಾತು ಹೆಚ್ಚು ಸದ್ದು ಮಾಡಲಾರಂಭಿಸಿದೆ. ಅಂದರೆ 60, ಹೊಸ 40!

ಇದನ್ನು ನಂಬಲು ಕಷ್ಟವಾದರೆ ಈ ಉದಾಹರಣೆಗಳನ್ನು ನೋಡಿ:

1ಯೋಶಿಹಿಸ ಹೊಸಾಕ: ಹಿರಿಯ ಓಟಗಾರರಿವರು. 60+ ವಯೋಮಾನದ ವಿಶ್ವ ಮ್ಯಾರಥಾನ್‌ ಓಟದ ದಾಖಲೆಯನ್ನು 2 ಗಂಟೆ 36 ನಿಮಿಷಗಳಲ್ಲಿ ಸೃಷ್ಟಿಸಿದ್ದಾರೆ. ಅವರಿಗೀಗ 70ರ ವಯೋಮಾನ.

2 ಡೇವಿಡ್‌ ಶೆಫ‌ರ್ಡ್‌: 2,000 ಮಿ. ಒಳಾಂಗಣದ ದೋಣಿ ಸ್ಪರ್ಧೆಯಲ್ಲಿ ದಾಖಲೆಯನ್ನು ಸೃಷ್ಟಿಸಿದರು. ಅವರು ಈ ಸಾಧನೆ ಮಾಡಿದ್ದು 85-89 ವರ್ಷಗಳ ವರ್ಗದಲ್ಲಿ!

Advertisement

3 ಲೂಯಿ ಕೂಪರ್‌: 61 ವರ್ಷೀಯ ಲೂಯಿ ಕೂಪರ್‌ ಸಹಾರಾ ಮರುಭೂಮಿಯಲ್ಲಿ ಮತ್ತು 28,000 ಅಡಿ ಎತ್ತರದ ಸ್ವಿಟ್ಸರ್‌ಲ್ಯಾಂಡ್‌ನ‌ ಮೌಂಟ್ ಬ್ಲಾಂಕ್‌ನ ಮೇಲೆ ಯಶಸ್ವಿಯಾಗಿ ಓಡಿ ದಾಖಲೆ ಬರೆದಿದ್ದಾರೆ.

ಇಂಥವರ ಆರೋಗ್ಯದ, ಚೈತನ್ಯದ, ಹುಮ್ಮಸ್ಸಿನ ಗುಟ್ಟೇನು? ಒಂದು ವಯೋಮಾನವನ್ನು ಜೀವನದ ಹೊಸ ಮೈಲಿಗಲ್ಲು ಎಂದು ಭಾವಿಸುವುದು ಹೇಗೆ? ನಿವೃತ್ತಿ ಪಡೆದ ಮೇಲೂ ಹೊಸ ಕ್ಷೇತ್ರದತ್ತ ದೃಷ್ಟಿ ಹರಿಸುವುದು ಹೇಗೆ? ಹೊಸ ಯಾತ್ರೆಯ ಆರಂಭ ಎಷ್ಟನೇ ವಯಸ್ಸಿಗೆ ಆಗಬೇಕು? ವಯಸ್ಸಾದ ಮೇಲೆ ಏನನ್ನೂ ಆರಂಭಿಸಲು ಆಗುವುದಿಲ್ಲವೇ?

ಒಳ್ಳೆಯ ಸುದ್ದಿಯೆಂದರೆ ಆರಂಭಿಸಲು ತಡವಾಯಿತು ಎನ್ನುವಂಥದ್ದು ಯಾವುದೂ ಇಲ್ಲ. ಎಲ್ಲರೂ ತಮ್ಮ ನವ ಪಯಣವನ್ನು ಯಾವಾಗ ಬೇಕಾದರೂ ಆರಂಭಿಸಬಹುದು. ಇದಕ್ಕೆ ಮುಖ್ಯವಾಗಿ ಬೇಕಾದದ್ದು ಸರಿಯಾದ ಮನೋಧೋರಣೆ ಮತ್ತು ಜೀವನಶೈಲಿ.

•ಸಕಾರಾತ್ಮಕವಾಗಿರಿ: ಖ್ಯಾತ ಲೇಖಕಿ ಡಾ|| ಲಿಸ್ಸ ರಂಕಿನ್‌ರವರು ಒಂದು ಮಾತು ಹೇಳುತ್ತಾರೆ, ”ನಮ್ಮ ದೇಹಕ್ಕೆ ಕ್ಯಾನ್ಸರ್‌ ಕೋಶಗಳನ್ನು ಕೊಲ್ಲುವ, ಮುಪ್ಪನ್ನು ನಿಲ್ಲಿಸುವ ಮತ್ತು ಸೋಂಕನ್ನು ಹೊಡೆದೋಡಿಸುವ ಸಾಮರ್ಥ್ಯವಿದೆ.

ಅಲ್ಸರ್‌ಗಳನ್ನು ಕರಗಿಸಲು, ಚರ್ಮದ ಗಾಯಗಳನ್ನು ಮಾಯವಾಗಿಸಲು ಮತ್ತು ಮುರಿದು ಹೋದ ಮೂಳೆಗಳನ್ನು ಒಂದಾಗಿ ಜೋಡಿಸಲೂ ದೇಹಕ್ಕೆ ಗೊತ್ತು.

ಆದರೆ ಇದೆಲ್ಲ ಸಾಧ್ಯವಾಗಬೇಕಾದರೆ ನಾವು ಒತ್ತಡ ಮುಕ್ತರಾಗಿರಬೇಕು. ಒತ್ತಡದಲ್ಲಿದ್ದರೆ ದೇಹ ತನ್ನ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ!”

ಹೌದು, ಸಹಜವಾಗಿಯೇ ಒಂದು ವಯಸ್ಸು ತಲುಪಿದಾಗ ದೇಹದ ಶಕ್ತಿ ತಗ್ಗುತ್ತದೆ, ಹಲವು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಇವನ್ನು ಮೀರಿ ಸದೃಢರಾಗಬೇಕು, ದೇಹ-ಮನಸ್ಸು ಗಟ್ಟಿಯಾಗಿ ಇರಬೇಕು ಎಂದರೆ ಮನಸ್ಸನ್ನು ಸಕಾರಾತ್ಮಕವಾಗಿ, ಸಂತೋಷವಾಗಿ ಇಟ್ಟುಕೊಳ್ಳಬೇಕು. ಧ್ಯಾನ ಮತ್ತು ಸುದರ್ಶನ ಕ್ರಿಯೆಯ ಅಭ್ಯಾಸವು ಇದನ್ನು ಪಡೆಯುವ ಒಂದು ಪ್ರಮುಖ ದಾರಿ. ಧ್ಯಾನದಿಂದ ಅನೇಕ ಲಾಭಗಳುಂಟು. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಮಾನಸಿಕ ಒತ್ತಡ ತಗ್ಗುತ್ತದೆ ಮತ್ತು ಆಲೋಚನೆಯಲ್ಲಿ ಹೆಚ್ಚು ಸ್ಪಷ್ಟತೆ ದಕ್ಕುತ್ತದೆ. ಏಮ್ಸ್‌ ದೆಹಲಿಯು, ‘ಸುದರ್ಶನ ಕ್ರಿಯೆಯ ಅಭ್ಯಾಸದಿಂದ ಸಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ, ಕೋಪ -ನಿರಾಸೆ ಮತ್ತು ಅಸೂಯೆ ಕುಗ್ಗುತ್ತದೆ’ ಎಂದು ಹೇಳುತ್ತದೆ.

•ಕೂತಲ್ಲೇ ಕೂರದಿರಿ: ವ್ಯಾಯಾಮ ಮಾಡಿ, ಓಡಾಡಿ, ಕ್ರಿಯಾಶೀಲರಾಗಿ. ನೀವು ಯಾವ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಮುಖ್ಯವಲ್ಲ. ಶೀಘ್ರವಾಗಿ ನಡೆಯುವುದು, ಸೈಕಲ್ಲು ಓಡಿಸುವುದು, ಈಜು ವುದು… ಇತ್ಯಾದಿ ಯಾವುದೇ ದೈಹಿಕ ಚಟು ವಟಿಕೆಯಾದರೂ ಅದನ್ನು ಪಾಲಿಸಿ.

•ಏಕ್‌ದಂ ಬೇಡ: ದಿಢೀರೆಂದು ಸ್ಫೂರ್ತಿ ಪಡೆದು ಒಮ್ಮಿಂದೊಮ್ಮೆಗೇ ವಿಪರೀತ ವ್ಯಾಯಾಮ ಮಾಡು ವುದರ ಬದಲಿಗೆ, ನಿತ್ಯವೂ ತಪ್ಪಿಸದೇ ಅರ್ಧಗಂಟೆಯಾದರೂ ವ್ಯಾಯಾಮ ಮಾಡಬೇಕು.

•ಸ್ನೇಹಿತರೊಂದಿಗೆ ಸೇರಿ: ಗುಂಪಾಗಿ ವ್ಯಾಯಾಮ ಮಾಡುವುದು, ಯೋಗಾಭ್ಯಾಸ ಮಾಡುವುದು ಹೆಚ್ಚು ವಿನೋದಮಯವಾಗಿರುತ್ತದೆ ಮತ್ತು ಇದರಿಂದ ವಿಶ್ವಾಸ ಹೆಚ್ಚುತ್ತದೆ. ಏನಾದರೂ ಆಗಿಬಿಡಬಹುದೆಂಬ ಭಯದಿಂದ ಕೆಲವರು ವ್ಯಾಯಾಮ ಮಾಡುವುದಿಲ್ಲ. ಭಯ ಬಿಟ್ಟು, ನಿಮ್ಮ ಸ್ನೇಹಿತರೊಂದಿಗೆ, ತರಬೇತುದಾರರೊಂದಿಗೆ ಚರ್ಚಿಸಿ, ಅವರು ನಿಮಗೆ ಸಹಾಯ ಮಾಡುತ್ತಾರೆ.

•ಸರಿಯಾಗಿ ತಿನ್ನಿ: ಸಕಾರಾತ್ಮಕವಾಗಿರಲು ಮತ್ತು ನಿತ್ಯ ವ್ಯಾಯಾಮದಿಂದ ಸಾಕಷ್ಟು ಪ್ರಯೋಜನ ಪಡೆಯಲು ಆಹಾರವು ಮುಖ್ಯವಾದ ಅಂಶ. ತಾಜಾ ಹಣ್ಣು, ಬೀಜಗಳು, ಕಡಿಮೆ ಸೋಡಿಯಮ್‌ ಸೇವನೆಯಿಂದ ಶಕ್ತಿಯ ಮಟ್ಟ ಮೇಲೇರುತ್ತದೆ ಮತ್ತು ದೇಹಕ್ಕೆ ಹೆಚ್ಚು ಪ್ರಾಣಶಕ್ತಿ ಲಭ್ಯವಾಗುತ್ತದೆ. ಆದ್ದರಿಂದ ಪಾಲಕ್‌, ಮೆಂತ್ಯ, ಬ್ರಾಕ್ಲಿ ಮತ್ತು ಮೂಲಂಗಿಯನ್ನು ಸವಿಯಿರಿ ಮತ್ತು ಚೆನ್ನಾಗಿ ನೀರು ಕುಡಿಯಿರಿ.

•ಮಾನಸಿಕ ಆರೋಗ್ಯಕ್ಕಾಗಿ: ನಿಮ್ಮ ನೆಚ್ಚಿನ ಶ್ಲೋಕವನ್ನು ಪಠಿಸಿ, ನೃತ್ಯ ಕಲಿಯಿರಿ, ಕ್ರಾಸ್‌ವರ್ಡ್‌ – ಸುಡೊಕು ಒಗಟನ್ನು ಬಿಡಿಸಿ, ಹೊಸ ಕೌಶಲವನ್ನು ಕಲಿಯಿರಿ. ಮೆದುಳಿನ ವ್ಯಾಯಾಮದಿಂದ ಅಲ್ಜೈಮರ್ಸ್‌ ಮತ್ತು ಡಿಮೆನ್ಷಿಯಾದಂಥ ಕಾಯಿಲೆ ಗಳನ್ನು ತಡೆಗಟ್ಟಬಹುದು.

•ಎಲ್ಲರೊಡನೆ ಬೆರೆಯಿರಿ: ಸಂಬಂಧಗಳನ್ನು ಜೀವಂತವಾಗಿಡಿ. ನಿಮ್ಮ ಸ್ನೇಹಿತರನ್ನು ಭೇಟಿ ಮಾಡಿ, ಕುಟುಂಬದೊಡನೆ ಸಮಯವನ್ನು ಕಳೆಯಿರಿ, ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ಈ ಸಂಬಂಧಗಳಿಂದ ನೀವು ಸಕಾರಾತ್ಮಕವಾಗಿ ಇರುತ್ತೀರಿ, ಆಗ ನಿಮ್ಮ ಬಿಡುವಿನ ಸಮಯಕ್ಕೆ ಅರ್ಥ ದಕ್ಕುತ್ತದೆ.

ಆರೋಗ್ಯದ ಬಗ್ಗೆ ಇರಲಿ ಕಾಳಜಿ: ಸಮಯಕ್ಕೆ ಸರಿ ಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ವೈದ್ಯರೊಂದಿಗೆ ಆಗಾಗ ಮಾತನಾಡುವ ಪರಿಪಾಠ ವಿಟ್ಟುಕೊಳ್ಳಿ. ಮಲ್ಟಿವಿಟಮಿನ್‌ಗಳನ್ನು, ಪೌಷ್ಟಿಕ ಆಹಾರವನ್ನು ಸೇವಿಸುತ್ತಿರಿ.

”ಅನೇಕ ಜನರು, ವಯಸ್ಸಾಗುವುದು ಎಂದರೆ ತಮ್ಮ ನಿತ್ಯ ಚಟುವಟಿಕೆಗಳನ್ನು ತಗ್ಗಿಸಿಬಿಡುವುದು ಎಂದು ಭಾವಿಸಿದ್ದಾರೆ. ಆದರೆ ಇವೆಲ್ಲ ನಮ್ಮ ಮನಸ್ಥಿತಿಯ ಮೇಲೆ ಅವಲಂಬಿಸಿದೆ. ವೃದ್ಧಾಪ್ಯದ ಬಗ್ಗೆ ನಮ್ಮ ಆಲೋಚನಾ ರೀತಿಯನ್ನು ಬದಲಿಸ ಬೇಕಾದ ಅಗತ್ಯವಿದೆ” ಎನ್ನುತ್ತಾರೆ ಜೇನ್‌ ಫಾಂಡ.

ಸೂಚನೆ: ಈ ಸಲಹೆಗಳು ಎಲ್ಲರೂ ಪಾಲಿಸಬಹುದಾದಷ್ಟು ಸರಳವಾಗಿ ಇವೆ. ಆದರೆ ಪ್ರತಿಯೊಬ್ಬರಿಗೂ ಭಿನ್ನವಾದ ದೈಹಿಕ ಹಾಗೂ ಮಾನಸಿಕ ಸ್ಥಿತಿ ಇರುತ್ತದೆ. ಈ ಕಾರಣಕ್ಕಾಗಿಯೇ ಯಾವುದೇ ವ್ಯಾಯಾಮವನ್ನು ಆರಂಭಿಸುವ ಮೊದಲು ಅಥವಾ ಆಹಾರ ಪದ್ಧತಿ ಬದಲಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ.

ದಿನೇಶ್‌ ಕಾಶೀಕರ್‌, ಯೋಗ ತರಬೇತುದಾರ

Advertisement

Udayavani is now on Telegram. Click here to join our channel and stay updated with the latest news.

Next