ಮೈಸೂರು: ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ‘ಉಚಿತ’ ಆಫರ್ ನೀಡುವುದು ಇತ್ತಿಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿದೆ. ಈ ಪುಕ್ಕಟೆ ಭರವಸೆಗಳಿಗೆ ಜನರು ಮರುಳಾಗಬಾರದು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
ಇದೊಂತರ ಕೇಜ್ರಿವಾಲ್ ಮಾಡೆಲ್ ಆಗಿದೆ. ಪುಕ್ಕಟೆ ನೀರು, ಕರೆಂಟ್, ಕುಕ್ಕರ್, ಟಿವಿ, ಭೂಮಿ ಕೊಡುತ್ತೇನೆ ಎಂದು ಡಿಎಂಕೆ ಹಾಗೂ ಕೇಜ್ರಿವಾಲ್ ಬೇರೆ ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಪ್ರತಿ ಮಹಿಳೆಗೂ ಒಂದು-ಎರಡು ಸಾವಿರ ಕೊಡುವುದಾಗಿ ಆಮ್ ಆದ್ಮಿ ಹೇಳಿತ್ತು. ಸರ್ಕಾರ ಬಂದು ಒಂದು ವರ್ಷದ ಮೇಲಾದರೂ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಅವರ ಅಪ್ಪನ ಆಸ್ತಿ ಮಾರಿ ತಂದು ಕೊಡುತ್ತಾರಾ? ಜನರು ಕೊಡೊ ಅಧಿಕಾರ ದುರುಪಯೋಗ ಮಾಡಿಕೊಂಡು ಮಕ್ಕಳು, ಮರಿ ಮಕ್ಕಳಿಗೆ ಆಸ್ತಿ ಮಾಡುತ್ತಾರೆ. ಇವರು ಜನರಿಗೆ ಏನೂ ಕೊಡುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಏನಾದರೂ ಉಚಿತವಾಗಿ ಕೊಡುತ್ತೀನೆಂದರೆ ಸಿದ್ದರಾಮನಹುಂಡಿಗೆ ಹೋಗಿ ದುಡಿದು ತಂದು ನಿಮಗೆ ಕೊಡುವುದಿಲ್ಲ. ಹಾಸನ ಮೂಲದವರು ಚಿನ್ನದ ಆಲೂಗಡ್ಡೆ ಬೆಳೆದು, ಜೋಳ ಬೆಳೆದು ತಂದು ನಿಮಗೆ ಕೊಡುವುದಿಲ್ಲ. ಬಿಜೆಪಿಯವರೇ ಆದರೂ ಅವರ ಮನೆಯಿಂದ ತಂದು ಕೊಡುವುದಿಲ್ಲ. ಅದಕ್ಕೆ ಉಚಿತವಾಗಿ ಕೊಡುತ್ತೇವೆ ಎಂದು ಯಾರೇ ಹೇಳಿದರೂ ನಂಬಬೇಡಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ಇದನ್ನೂ ಓದಿ:ವೈರಲ್: ಬುಲ್ಡೋಜರ್ ನಲ್ಲಿ ಬಂದ ಮದುವೆ ದಿಬ್ಬಣ; ವರನ ಕನಸು ಕೊನೆಗೂ ನನಸು.!
Related Articles
ನಿಮ್ಮ ತೆರಿಗೆ ಹಣವನ್ನು ನಿಮಗೇ ಹಂಚುತ್ತೇವೆ ಎಂದು ರಾಜ್ಯ ದಿವಾಳಿ ಮಾಡುತ್ತಾರೆ. ದಯವಿಟ್ಟು ಇಂತಹದಕ್ಕೆ ಯಾರೂ ಸೊಪ್ಪು ಹಾಕಬೇಡಿ. ಇದು ನೂರಕ್ಕೆ ನೂರು ಗಿಮಿಕ್ ರಾಜಕಾರಣ. ಜಗತ್ತಿನಲ್ಲಿ ಯಾವ ರಾಜಕಾರಣಿ ತನ್ನ ಮನೆಯಿಂದು ತಂದು ಕೊಟ್ಟು ಉದಾಹರಣೆ ತೋರಿಸಿ. ತನ್ನ ವೈಯಕ್ತಿಕ ಬದುಕು ಹೆಚ್ಚಿಸಿಕೊಂಡಿದ್ದಾನೆಯೇ ಹೊರತು ಸಮಾಜಕ್ಕಾಗಿ ದುಡಿದಿರುವ ಉದಾಹರಣೆಯೇ ಇಲ್ಲ ಎಂದು ಮೈಸೂರು ಸಂಸದರು ಹೇಳಿದರು.