ರಾಮನಗರ/ಮಾಗಡಿ: ರಾಜ್ಯದ ರೈತರು, ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾಕರ ಪರವಾಗಿ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. 1.23 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ನೆರವು ಸಿಗುತ್ತಿದೆ. ಹೀಗಿದ್ದೂ ಅದೇಕೆ ಮೋದಿಗೆ ಮತ ನೀಡಿದ್ದೀರಾ? ಏಕೆ ಅವರು ಸುಳ್ಳು ಹೇಳುತ್ತಾರೆ ಎಂದು ಮತ ಹಾಕಿದಿರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಾಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಬಡವರ ಪರವಾಗಿದ್ದೇನೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದರು. ಬಿಜೆಪಿಯವರ ಕಾಲದಲ್ಲಿ ಮಾಡಬಾರದ್ದನ್ನು ಮಾಡಿದರು. ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಮತ ಹಾಕುತ್ತೀರಾ ಎಂದು ಪ್ರಶ್ನಿಸಿದರಲ್ಲದೆ, ದಯಮಾಡಿ ಸುಳ್ಳು ಹೇಳುವವರನ್ನು ನಂಬಬೇಡಿ. ನಿಮಗೆ ಕೈ ಮುಗಿಯುತ್ತೇನೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
56 ಸಾವಿರ ಕೋಟಿ ರೂ.ಗ್ಯಾರಂಟಿ ಯೋಜನೆಯಿಂದ ಖರ್ಚುಮಾಡುತ್ತಿದ್ದೇವೆ. ಒಂದು ಕುಟುಂಬಕ್ಕೆ 4ರಿಂದ 5 ಸಾವಿರ ರೂ. ಸಿಗುತ್ತಿದೆ. ಇದನ್ನು ಯಾವ ಸರಕಾರ ಮಾಡಿತ್ತು? ನೀವು ನಮ್ಮ ಸರಕಾರದ ಪರ ಮಾತನಾಡುತ್ತಿಲ್ಲ, 1.23 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ನೆರವು ಸಿಗುತ್ತಿದೆ. ಹೀಗಿದ್ದೂ ಅದೇಕೆ ಮೋದಿಗೆ ಮತ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ನಾನು ಎಂದೂ ತಪ್ಪು ಮಾಡಿಲ್ಲ, ಈಗಲೂ ತಪ್ಪು ಮಾಡಲ್ಲ, ಮುಂದೆಯೂ ಮಾಡುವುದಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ಯಾರು ಬೇಕಾದರೂ ತಿರುವಿ ಹಾಕಿ ನೋಡಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ವಾಲ್ಮೀಕಿ ನಿಗಮದಲ್ಲಿ 89.56 ಲಕ್ಷ ದುರ್ಬಳಕೆಯಾಗಿತ್ತು. ಅದರಲ್ಲಿ 56 ಕೋಟಿ ವಸೂಲಿ ಮಾಡಿದ್ದೇವೆ. ಉಳಿದ ಹಣಕ್ಕೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದ್ದೇವೆ. ಪರಿಶಿಷ್ಟರಿಗೆ ನಿಗದಿಯಾಗಿರುವ ಪೂರ್ಣ ಅನುದಾನವನ್ನು ನಾವು ಕೊಟ್ಟೇ ಕೊಡುತ್ತೇವೆ. ನಮ್ಮ ಸರಕಾರ ಎಲ್ಲ ಜಾತಿಯ ಬಡವರ ಪರವಾಗಿ ಕೆಲಸ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಮಣ್ಣಿನ ಮಕ್ಕಳು ಏನು ಮಾಡಿದ್ದಾರೆ?
ಹಾಲು ಉತ್ಪಾದಕರಿಗೆ 2 ರೂ. ಇದ್ದ ಪ್ರೋತ್ಸಾಹ ಧನವನ್ನು 5 ರೂ.ಗೆ ಹೆಚ್ಚಿಸಿದ್ದು ನಾನು. ಹಾಲು ಒಕ್ಕೂಟಗಳು ನಷ್ಟದಲ್ಲಿದ್ದಾಗ, ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಕ್ಷೀರ ಭಾಗ್ಯವನ್ನು ಜಾರಿಗೆ ತಂದೆ. ಬಡ ಮಕ್ಕಳಿಗೆ ಹಾಗೂ ರೈತರಿಗೆ ನೆರವಾದೆ. ರೈತರ ಮಕ್ಕಳು ಎಂದು ಹೇಳಿಕೊಳ್ಳುವವರು ಈ ಕೆಲಸ ಮಾಡಿದ್ದಾರಾ? ಇವರ್ಯಾವ ಮಣ್ಣಿನ ಮಕ್ಕಳು? ಏನೂ ಮಾಡದೆ ನಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳಲು ಯಾವ ನೈತಿಕತೆ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.