ನವದೆಹಲಿ: ಘರ್ಷಣೆ ಪೀಡಿತ ಜೆ.ಎನ್.ಯು. ಕ್ಯಾಂಪಸ್ ಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರ ಚಿತ್ರ ಛಪಾಕ್ ಅನ್ನು ದೇಶಪ್ರೇಮಿಗಳು ಬಹಿಷ್ಕರಿಸಬೇಕೆಂಬ ಆಗ್ರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಆದರೆ ಈ ನಿರ್ಧಾರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವಾಗಲೀ ಅಥವಾ ಭಾರತೀಯ ಜನತಾ ಪಕ್ಷವಾಗಲೀ ಬೆಂಬಲಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ದೇಶವಾಸಿಗಳಿಗೆ ಅವರವರ ಮುಕ್ತ ಅಭಿಪ್ರಾಯವನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಇದೆ ಎಂದು ಸಚಿವ ಜಾವ್ಡೇಕರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕೆಲ ಮುಸುಕುಧಾರಿ ವ್ಯಕ್ತಿಗಳು ಜೆ.ಎನ್.ಯು. ಕ್ಯಾಂಪಸ್ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಟಿ ದೀಪಿಕಾ ಪಡುಕೋಣೆ ಅವರು ವಿದ್ಯಾರ್ಥಿಗಳ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇದು ಬಿಜೆಪಿ ಸಹಿತ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು ಮಾತ್ರವಲ್ಲದೇ ದೀಪಿಕಾ ಅವರ ಮುಂಬರುವ ಚಿತ್ರ ಛಪಾಕ್ ಅನ್ನು ದೇಶಪ್ರೆಮಿಗಳು ಬಹಿಷ್ಕರಿಸಬೇಕೆಂಬ ಅಭಿಯಾನವೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ರವಿವಾರದ ಹಿಂಸಾಚಾರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಾವ್ಡೇಕರ್ ಅವರು, ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳೇ ಮೊದಲಿಗೆ ಘರ್ಷಣೆಯನ್ನು ಪ್ರಾರಂಭಿಸಿ ಸರಣಿ ಹಿಂಸಾಚಾರವನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ. ಜೆ.ಎನ್.ಯು. ಹಿಂಸಾಚಾರದ ಹಿಂದೆ ಯಾರಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಲಿದೆ ಮತ್ತು ಮೋದಿ ಸರಕಾರದ ವಿರುದ್ಧ ಅಸಮಧಾನದ ವಾತಾವರಣ ಎಲ್ಲೂ ಇಲ್ಲ ಎಂಬುದಾಗಿ ಸಚಿವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.