Advertisement
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಮುಂದಿನ ಕೆಲವು ತಿಂಗಳಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತದೆಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಒಂದೆರಡು ತಿಂಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಿ ಮುಗಿಸಬೇಕು. ಲಸಿಕೆಗಳನ್ನು ಕೇಂದ್ರದಿಂದಾದರೂ ಪಡೆಯಬೇಕು ಇಲ್ಲ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
60 ವರ್ಷ ತುಂಬಿದವರಲ್ಲಿ 841056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 44 ರಿಂದ 59 ವರ್ಷದ ಒಳಗೆ ಇರುವವರಿಗೆ 329952 ಜನರಿಗೆ ಮಾತ್ರ ಎರಡನೆ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಅನ್ನು ಎಷ್ಟೇ ಜನರಿಗೆ ನೀಡಿದ್ದರೂ ಸಹ ನಿಗಧಿತ ಸಮಯದಲ್ಲಿ ಎರಡನೆ ಲಸಿಕೆ ನೀಡದಿದ್ದರೆ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಅವಧಿ ಮೀರುವ ಮೊದಲೇ ಎರಡನೆ ಡೋಸನ್ನು ಶೀಘ್ರವಾಗಿ ನೀಡಬೇಕು. 18 ರಿಂದ 45 ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5759 ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿ ಸಾವು ನೋವುಗಳಿಗೆ ಗುರಿಯಾಗುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯುವ ಸಮುದಾಯಕ್ಕೆ ಯುದ್ಧೋಪಾದಿಯಲ್ಲಿ ಲಸಿಕೆಯನ್ನು ನೀಡಬೇಕಾಗಿದೆ.
Related Articles
Advertisement
ನಮ್ಮ ದೇಶದ ಪ್ರಸ್ತುತ ಆಡಳಿತ ನಡೆಸುತ್ತಿರುವವರು ಕಾರ್ಪೊರೇಟ್ ಕಂಪೆನಿಗಳಿಗೆ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ. ಆದ್ದರಿಂದಲೇ ಲಸಿಕೆ ದರವನ್ನು 150, 300, 400, 600 ರೂಗಳೆಂದು ವ್ಯಾಪಾರಕ್ಕಿಡಲಾಗಿದೆ. ತಾರತಮ್ಯಕರವಾದ ಈ ಬೆಲೆಗಳನ್ನು ಕೇಂದ್ರ ಸರ್ಕಾರವೇ ನಿಗಧಿ ಮಾಡುತ್ತಿದೆ. ಇದನ್ನು ನೋಡಿದರೆ ಕೇಂದ್ರದಲ್ಲಿರುವ ಬಿ ಜೆ ಪಿ ಸರ್ಕಾರ ಅಂಗಡಿ ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಕುರಿತು ಸರ್ವೋಚ್ಛ ನ್ಯಾಯಾಲಯ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ದೇಶದ ಎಲ್ಲ ಜನರಿಗೆ ಏಕ ಕಾಲದಲ್ಲಿ ಸಮರೋಪಾದಿಯಲ್ಲಿ ಉಳಿದ ಎರಡು ತಿಂಗಳಲ್ಲಿ ಲಸಿಕೆ ಹಾಕಿ ಮುಗಿಸಬೇಕು. ಹೀಗೆ ಮಾಡಬೇಕಾದರೆ ಲಸಿಕೆ ಉತ್ಪಾದನೆ ಹೆಚ್ಚಬೇಕು. ಹಾಗಾಗಬೇಕಾದರೆ ಸಮರ್ಥವಾಗಿರುವ ಹತ್ತಾರು ಕಂಪೆನಿಗಳನ್ನು ಆಯ್ಕೆ ಮಾಡಿ ಈಗ ಸಿದ್ಧಪಡಿಸಿರುವ ಲಸಿಕೆ ತಯಾರಿಕೆಯ ಪ್ರೋಟೋಕಾಲನ್ನು, ನಿಯಮಗಳನ್ನು ಎಲ್ಲರಿಗೂ ನೀಡಿ ಸೂಕ್ತವಾದ ಬ್ರಿಡ್ಜ್ ಟ್ರಯಲ್ ನಡೆಸಿ ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಲಸಿಕೆ ನೀಡಬೇಕು. ಎರಡು ಕಂಪೆನಿಗಳು ತಿಂಗಳಿಗೆ ಹತ್ತು ಕೋಟಿ ಲಸಿಕೆಗಳನ್ನು ತಯಾರಿಸಿದರೆ, ಇಪ್ಪತ್ತು ಕಂಪೆನಿಗಳು ನೂರು ಕೋಟಿ ಲಸಿಕೆ ತಯಾರಿಸಬಲ್ಲವು. ಮಹಾರಾಷ್ಟ್ರ ಈಗಾಗಲೆ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಂಪೆನಿಗಳ ಮೂಲಕ ಉತ್ಪಾದನೆಯಲ್ಲಿ ತೊಡಗಿದೆ ಎಂಬ ವರದಿಗಳಿವೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸುತ್ತೇನೆ.
ಕೋವಿಡ್ ನಿಯಂತ್ರಣದಲ್ಲೂ ಮುಂಬೈ ಮಾದರಿಯನ್ನು ಸರ್ವೋಚ್ಛ ನ್ಯಾಯಾಲಯವು ಶ್ಲಾಘಿಸಿದೆ. ಅದರ ಕುರಿತೂ ಕೂಡ ರಜ್ಯ ಸರ್ಕಾರ ಸೂಕ್ತ ತಿಳುವಳಿಕೆ ಪಡೆದುಕೊಳ್ಳುವುದು ಸೂಕ್ತ. 18 ವರ್ಷ ತುಂಬಿದವರಿಗೆ ಲಸಿಕೆ ಹಾಕಲು ಆನ್ ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂಬ ನಿಯಮವನ್ನು ರದ್ದು ಪಡಿಸಬೇಕು. ಹೀಗೆ ಮಾಡಿದರೆ ಕಾರ್ಮಿಕರು, ಬಡವರು ಲಸಿಕೆಗಳಿಂದ ವಂಚಿತರಾಗುತ್ತಾರೆ. ಇದುವರೆಗೂ ಮಾಡುತ್ತಿದ್ದಂತೆ ಸ್ಥಳದಲ್ಲಿಯೇ ನೋಂದಾಯಿಸಿಕೊಂಡು ಲಸಿಕೆ ಹಾಕುವುದೇ ಉತ್ತಮ .