Advertisement

ಚಿನ್ನ ಕಳ್ಳಸಾಗಣೆ ಮಾಡಿ, ಬೇಲ್‌ ಸಿಗುತ್ತೆ : ರಾಜಸ್ಥಾನ ಶಾಸಕ ವಿವಾದ

11:31 AM Jun 01, 2018 | udayavani editorial |

ಜೋಧ್‌ಪುರ : “ಮಾದಕ ದ್ರವ್ಯ ಕಳ್ಳಸಾಗಣೆ ಮಾಡಬೇಡಿ; ಸಿಕ್ಕಿ ಬಿದ್ದರೆ ನಿಮಗೆ ಬೇಲ್‌ ಸಿಗಲ್ಲ; ಆದರೆ ಚಿನ್ನ ಕಳ್ಳಸಾಗಣೆ ಮಾಡಿ; ಸಿಕ್ಕಿಬಿದ್ದರೆ ಸುಲಭದಲ್ಲಿ ಬೇಲ್‌ ಸಿಗುತ್ತೆ”.

Advertisement

ಇಂತಹ ಒಂದು ವಿವಾದಾತ್ಮಕ ಮತ್ತು ವಿವೇಚನಾರಹಿತ ಸಲಹೆಯನ್ನು ನೀಡಿದವರು ರಾಜಸ್ಥಾನದ ಬಿಲಾರಾ ಶಾಸಕ ಅರ್ಜುಲ್‌ ಲಾಲ್‌ ಗರ್ಗ್‌. ಅವರು ದೇವಾಸಿ ಸಮುದಾಯದವರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಪುಂಖಾನುಪುಂಖವಾಗಿ ಅವರಿಂದ ಈ ಸಲಹೆ ಪುಕ್ಕಟೆಯಾಗಿ ಬಂತು. ಅಂತೆಯೇ ಅದೀಗ ವೈರಲ್‌ ಆಗಿದೆ. 

“ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಪಿಡುಗಿನ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಈ ಅಪರಾಧಕ್ಕಾಗಿ ಎಷ್ಟು ಮಂದಿಯನ್ನು ಜೋಧ್‌ಪುರ ಜೈಲಿನಲ್ಲಿ ಇಡಲಾಗಿದೆ ಎಂದು ಪ್ರಶ್ನಿಸಿದ್ದೇನೆ. ಆಗಲೇ ನನಗೆ ಗೊತ್ತಾಯಿತು : ಅತ್ಯಧಿಕ ಸಂಖ್ಯೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಜೈಲಿಗೆ ಹೋಗಿರುವವರು ದೇವಾಸಿ ಸಮುದಾಯದವರು ಮತ್ತು ಇವರು ಈ ವಿಷಯದಲ್ಲಿ ಬಿಷ್‌ಣೋಯಿ ಸಮುದಾಯದವರನ್ನು ಹಿಂದಿಕ್ಕಿದ್ದಾರೆ ಎಂದು ತಿಳಿಯಿತು’ ಎಂಬುದಾಗಿ ಗರ್ಗ್‌ ಹೇಳಿದರು. 

“ಒಂದೊಮ್ಮೆ ನಿಮಗೆ ನಂಬರ್‌ 2 ಬ್ಯುಸಿನೆಸ್‌ ಮಾಡಬೇಕು ಅಂತ ಅನ್ನಿಸಿದರೆ ನೀವು ಮಾದಕ ದ್ರವ್ಯ ಕಳ್ಳಸಾಗಣೆ ಬದಲು ಚಿನ್ನ ಕಳ್ಳಸಾಗಣೆಯ ಬ್ಯುಸಿನೆಸ್‌ ಮಾಡಿ; ಏಕೆಂದರೆ ಅವೆರಡರ ಬೆಲೆಯೂ ಒಂದೇ ತೆರನಾಗಿದೆ; ನೀವು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ಜೈಲಿಗೆ ಹೋಗುತ್ತೀರಿ; ನಿಮಗೆ ಬೇಲ್‌ ಸಿಗಲ್ಲ; ಅದೇ ನೀವು ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ನಿಮಗೆ ಬೇಲ್‌ ಸಿಗುತ್ತೆ; ಜೈಲು ಪಾಲಾಗುವ ಭಯ ಇರುವುದಿಲ್ಲ’ ಎಂದು ಗರ್ಗ್‌ ಅವರು ತಮ್ಮ ಭಾಷಣದಲ್ಲಿ ಹೇಳಿದರು. 

ಬಯಾರಾ ದ ಜೈತವಾಸ್‌ ಗ್ರಾಮದಲ್ಲಿ ದೇವಾಲಯ  ಸಮರ್ಪಣೆ ಕಾರ್ಯಕ್ರಮದಲ್ಲಿ ಗರ್ಗ್‌ ಅವರು ಮಾತನಾಡುತ್ತಿದ್ದರು. ಈ ಸಮಾರಂಭದಲ್ಲಿ ಅನೇಕ ಸಾಧು ಸಂತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲರ ಮುಂದೆ ಗರ್ಗ್‌ ಅವರಿಂದ ಈ ಮಾತುಗಳು ಬಂದವು ಎನ್ನುವುದು ಮುಖ್ಯ. 

Advertisement

ಸಮಾರಂಭದ ಬಳಿಕ ಖಾಸಗಿ ಪ್ರವಾಸಾರ್ಥವಾಗಿ ಗರ್ಗ್‌ ಅವರು ಲಡ್ಡಾಕ್‌ ಗೆ ತೆರಳಿದ ಕಾರಣ ಅವರನ್ನು “ಚಿನ್ನ ಕಳ್ಳಸಾಗಣೆ’ ಕುರಿತ ವಿವಾದಾತ್ಮಕ ಹೇಳಿಕೆಗಾಗಿ ಸ್ಪಷ್ಟೀಕರಣ ಪಡೆಯಲು ಮಾಧ್ಯಮದವರಿಗೆ ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next