Advertisement

ಸುವರ್ಣಾವಕಾಶ ಕಳ್ಕೋಬೇಡಿ!

06:00 AM Nov 09, 2018 | Team Udayavani |

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಅಚ್ಚ ಕನ್ನಡದ ಶೀರ್ಷಿಕೆಗಳು ಜನಪ್ರಿಯವಾಗುತ್ತಿವೆ. “ದಯವಿಟ್ಟು ಗಮನಿಸಿ’, “ಸಾರ್ವಜನಿಕರಲ್ಲಿ ವಿನಂತಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ನಡುವೆ ಅಂತರವಿರಲಿ’ ಹೀಗೆ ಕನ್ನಡ ಶಬ್ಧಕೋಶದಲ್ಲಿ ಹುಡುಕಿ ತೆಗೆದು ಪೋಣಿಸಿದಂತಿರುವ ಇಂತಹ ಶೀರ್ಷಿಕೆಗಳ ಸಾಲಿಗೆ ಈ ವಾರ ಮತ್ತೂಂದು ಹೆಸರು ಸೇರ್ಪಡೆಯಾದೆ. ಅದೇ “ಸಾರ್ವಜನಿಕರಿಗೆ ಸುವರ್ಣಾವಕಾಶ’. 

Advertisement

ಈ ವರ್ಷ ತೆರೆಕಂಡು ಚಿತ್ರರಂಗದಲ್ಲಿ ಒಂದಷ್ಟು ಸುದ್ದಿ ಮಾಡಿದ್ದ “ಗುಳ್ಟು’ ಚಿತ್ರವನ್ನು ನಿರ್ದೇಶಿಸಿದ್ದ ಜನಾರ್ದನ್‌ ಚಿಕ್ಕಣ್ಣ ಮತ್ತು ಎನ್‌. ಹರಿಕೃಷ್ಣ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಕೆಲ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಅನೂಪ್‌ ರಾಮಸ್ವಾಮಿ ಕಶ್ಯಪ್‌ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನೂಪ್‌, “ಇದೊಂದು ಕಾಮಿಡಿ ಥ್ರಿಲ್ಲರ್‌ ಶೈಲಿಯ ಚಿತ್ರ. ಚಿತ್ರದ ನಾಯಕ ತನ್ನ ಜೀವನದಲ್ಲಿ ಗೊತ್ತಿಲ್ಲದಂತೆ ಸಮಸ್ಯೆಯೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಹೊರಬರಲು ಹೇಗೆಲ್ಲ ಹೆಣಗಾಡುತ್ತಾನೆ. ಅಂತಿಮವಾಗಿ ಏನಾಗುತ್ತದೆ? ಎಂಬುದೇ ಚಿತ್ರದ ಒಂದೆಳೆ. ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿದರೆ, ಅದರಲ್ಲಿರುವ ಸಸ್ಪೆನ್ಸ್‌ ಅಂಶಗಳು ಹೊರಬಹುದು. ಹಾಗಾಗಿ ಉಳಿದಂತೆ ಹೆಚ್ಚಿನದನ್ನು ತಿಳಿದುಕೊಳ್ಳಬೇಕೆಂದರೆ, ನೀವು ಚಿತ್ರವನ್ನೇ ನೋಡಬೇಕು’ ಎಂದು ಮಾತಿಗೆ ಬ್ರೇಕ್‌ ಹಾಕಿದರು.

ಈ ಚಿತ್ರದಲ್ಲಿ ನಾಯಕ ರಿಷಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, “ಇದು ನನ್ನ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಫೈನಲ್‌ ಇಯರ್‌ ಎಂಬಿಎ ಓದುತ್ತಿರುವ ಹುಡುಗನ ಪಾತ್ರ ನಿರ್ವಹಿಸುತ್ತಿದ್ದೇನೆ. ಸದಾ ಕ್ರಿಯಾಶೀಲವಾಗಿರುವ, ಏನಾದರೊಂದು ಮಾಡುತ್ತಲೇ 
ಇರುವ ಪಾತ್ರ ಇದು. ನನಗೆ ಗೊತ್ತಿಲ್ಲದಂತೆ ಒಂದು ಸಮಸ್ಯೆಯೊಳಗೆ ಸಿಲುಕಿಕೊಂಡಾಗ ನನ್ನ ಬುದ್ದಿವಂತಿಕೆಯನ್ನು ಅಲ್ಲಿ ಹೇಗೆ ಉಪಯೋಗಿಸುತ್ತೇನೆ ಅನ್ನೋದು ಚಿತ್ರದಲ್ಲಿ ನೋಡಬೇಕು’ ಎನ್ನುತ್ತಾರೆ ನಾಯಕ ರಿಷಿ. ಇಲ್ಲಿಯವರೆಗೆ ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡದ ಹುಡುಗಿ ಧನ್ಯಾ ಈ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

“ಬೇರೆ ಭಾಷೆಯಲ್ಲಿ ಇಷ್ಟು ಚಿತ್ರಗಳಲ್ಲಿ ನಟಿಸಿದ ನಂತರ ಈಗ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಮತ್ತೆ ತವರು ಮನೆಗೆ ಬಂದಂತಹ ಅನುಭವವಾಗುತ್ತಿದೆ. ಇದರಲ್ಲಿ ನನ್ನದು ಎಂಬಿಎ ಓದುತ್ತಿರುವ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹುಡುಗಿಯ ಪಾತ್ರ’ ಎಂದು ತಮ್ಮ ಪಾತ್ರದ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು ಧನ್ಯಾ. ಉಳಿದಂತೆ ದತ್ತಣ್ಣ, ರಂಗಾಯಣ ರಘು, ಶೀನು ಮಿತ್ರ, ಶಾಲಿನಿ, ಜಯ ಮೊದಲಾದ ಕಲಾವಿದರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

Advertisement

“ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರಕ್ಕೆ ವಿಘ್ನೇಶ್‌ ರಾಜ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಶಾಂತ ಕುಮಾರ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಮಿಥುನ್‌ ಮುಕುಂದನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. “ವಿವಿಧ್‌’ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ದೇವರಾಜ್‌ ಆರ್‌. ಪ್ರಶಾಂತ್‌ ರೆಡ್ಡಿ, ಜನಾರ್ಧನ್‌ ಚಿಕ್ಕಣ್ಣ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 
ಚಿತ್ರಕ್ಕೆ ವರದರಾಜ್‌ ಕಲಾ ನಿರ್ದೇಶನ ಮತ್ತು ವಿಕ್ರಂ ಮೋರ್‌ ಸಾಹಸ ನಿರ್ದೇಶನವಿದೆ. ಸದ್ಯ ಚಿತ್ರದ ಚಿತ್ರೀಕರಣವನ್ನು ಚಿಕ್ಕಮಗಳೂರು, ವಯನಾಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲು ಚಿತ್ರತಂಡ ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next