ಕಲಬುರಗಿ: ಕೊರೊನಾ ಮೊದಲ ಡೋಸ್ ಲಸಿಕೆ ಪಡೆದವರು ಎರಡನೇ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಒಂದೇ ಡೋಸ್ ಲಸಿಕೆ ಪಡೆದರೆ ಸಾಕು ಎಂದು ಹಲವರು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಇದುವರೆಗೆ 3,31,259 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.17ರಷ್ಟು ಲಸಿಕೆ ಸಾಧನೆಯಾಗಿದೆ. ಇದರಲ್ಲಿ 66,971 ಜನ ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಹಲವರಿಗೆ ತಮ್ಮ ಎರಡನೇ ಡೋಸ್ ಪಡೆಯವ ಸಮಯವಾದರೂ ಲಸಿಕಾ ಕೇಂದ್ರಗಳಿಗೆ ಬರುತ್ತಿಲ್ಲ. ಬಹುತೇಕರು ಒಂದೇ ಡೋಸ್ ಲಸಿಕೆ ಪಡೆದರೇ ಸಾಕು ಎನ್ನುವ ಮನಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿದೆ.
ಆದರೆ, ಕೊರೊನಾದಿಂದ ರಕ್ಷಣೆ ಪಡೆಯಬೇಕಾದರೆ ಎರಡೂ ಡೋಸ್ ಲಸಿಕೆ ಪಡೆಯಲೇಬೇಕು ಎಂದರು. ಕೊರೊನಾ ಎರಡನೇ ಡೋಸ್ ಲಸಿಕೆ ಪಡೆಯವ ಬಗ್ಗೆ ಸರ್ಕಾರದಿಂದ ಆಯಾ ಸಮಯಕ್ಕೆ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ. ಅಲ್ಲದೇ, ದೂರವಾಣಿ ಕರೆ ಮಾಡಿ ನೆನಪಿಸಲಾಗುತ್ತದೆ. ಮೊದಲ ಡೋಸ್ ಪಡೆದವರು ತಪ್ಪದೇ ಎರಡನೇ ಡೋಸ್ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದರು. ಲಸಿಕೆ ಕೇಂದ್ರಗಳಿಂದ ದೂರು ಇರುವ ಗ್ರಾಮಗಳಲ್ಲಿ ಸಂಚಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ನರೇಗಾ ಸೇರಿ ವಿವಿಧ ಕಾಮಗಾರಿ ಸ್ಥಳಗಳಲ್ಲೂ ಲಸಿಕೆ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ದಿನದಿಂದ ದಿನ ಕೊರೊನಾ ಪಾಸಿಟಿವ್ ಪ್ರಮಾಣ ಕಡಿಮೆ ಆಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಕೇವಲ ಶೇ.1.6ಕ್ಕೆ ಪಾಸಿಟಿವ್ ಪ್ರಮಾಣ ಇಳಿದಿದ್ದು, ಫೆಬ್ರವರಿ ತಿಂಗಳ ಮಟ್ಟಕ್ಕೆ ಕುಸಿದಂತೆ ಆಗಿದೆ. ಆದರೂ, ಪಾಸಿಟಿವ್ ಪ್ರಮಾಣ 1ಕ್ಕಿಂತ ಕಡಿಮೆ ಇಳಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.