Advertisement

ಮುಂದುವರಿಯುವುದು ಬೇಡ ವಿವಾದ

01:35 AM Jul 13, 2019 | mahesh |

ಇನ್ನೂ ವಿವಾದವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವೂ ಇಲ್ಲ. ನ್ಯಾಯಾಲಯ ಈ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಆದಷ್ಟು ತ್ವರಿತವಾಗಿ ವಿವಾದವನ್ನು ಬಗೆಹರಿಸುವತ್ತ ಲಕ್ಷ್ಯ ಹರಿಸುವುದು ಅಪೇಕ್ಷಣೀಯ.

Advertisement

ದೀರ್ಘ‌ಕಾಲದಿಂದ ಬಾಕಿಯಿರುವ ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿ ಹಿಂದು-ಮುಸ್ಲಿಂ ಭಾವೈಕ್ಯತೆಯನ್ನು ಕಾಪಾಡಿಕೊಳ್ಳುವ ಸುಪ್ರೀಂ ಕೋರ್ಟಿನ ಪ್ರಯತ್ನಕ್ಕೆ ನಿರೀಕ್ಷಿತ ಫ‌ಲ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಅಯೋಧ್ಯೆ ಜಮೀನು ಮಾಲಕತ್ವದ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ವರದಿ ನೀಡಿದರೆ ಪ್ರಕರಣ ಮರಳಿ ಕೋರ್ಟಿನ ಕಟಕಟೆಯೇರಲಿದೆ. ದಶಕಗಳಷ್ಟು ಹಳೆಯದಾಗಿರುವ ಈ ವಿವಾದವನ್ನು ಈಗಾಗಲೇ ಸಾಕಷ್ಟು ಎಳೆದಾಡಿಯಾಗಿದೆ. ಇನ್ನೂ ವಿಚಾರಣೆಯನ್ನೇ ಮುಂದುವರಿಸುವುದು ಎಂದರೆ ಇನ್ನಷ್ಟು ವರ್ಷ ನ್ಯಾಯಾಲಯಕ್ಕೆ ಎಡತಾಕುವುದು ಎಂದು ಅರ್ಥ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಇನ್ನೆಷ್ಟು ಸಮಯ ಈ ವಿವಾದವನ್ನು ಜೀವಂತವಾಗಿಡಬೇಕು ಎಂಬ ಪ್ರಶ್ನೆಗೆ ಈಗ ಉತ್ತರ ಕಂಡುಕೊಳ್ಳಲು ಸಮಯ ಪಕ್ವವಾಗಿದೆ.

ವಿಶ್ರಾಂತ ನ್ಯಾಯಾಧೀಶ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದಲ್ಲಿ ಧಾರ್ಮಿಕ ಮುಖಂಡ ರವಿಶಂಕರ್‌ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಅವರನ್ನೊಳಗೊಂಡಿರುವ ಸಂಧಾನ ಸಮಿತಿ ರಚಿಸಿದಾಗಲೇ ಅದಕ್ಕೆ ಅಪಸ್ವರ ಕೇಳಿ ಬಂದಿತ್ತು. ಅದಾಗ್ಯೂ ದೀರ್ಘ‌ಕಾಲದಿಂದ ಅನೇಕ ರಾಜಕೀಯ ಪಲ್ಲಟಗಳಿಗೆ ಮತ್ತು ರಕ್ತಪಾತಕ್ಕೆ ಕಾರಣವಾಗಿದ್ದ ವಿವಾದ ಬಗೆಹರಿದರೆ ಉತ್ತಮ ಎಂಬ ನೆಲೆಯಲ್ಲಿ ಈ ಸಮಿತಿಯನ್ನು ಹೆಚ್ಚಿನವರು ಸ್ವಾಗತಿಸಿದ್ದರು.

ಇದು ಬರೀ ಮಾತುಕತೆಯೊಂದರಿಂದಲೇ ಬಗೆಹರಿಸಬಹುದಾದ ಸರಳ ಪ್ರಕರಣ ಅಲ್ಲ ಎನ್ನುವುದು ನಿಜವೇ. ಧಾರ್ಮಿಕ ಭಾವನೆ, ರಾಜಕೀಯ ಮತ್ತು ನ್ಯಾಯಾಂಗವೆಂಬ ತ್ರಿಕೋನದೊಳಗೆ ಸಿಲುಕಿಕೊಂಡಿರುವ ಪ್ರಕರಣವನ್ನು ಮೂವರು ಸದಸ್ಯರ ಸಮಿತಿಯೇ ಇತ್ಯರ್ಥ ಮಾಡಲಿದೆ ಎಂಬ ನಿರೀಕ್ಷೆ ದುಬಾರಿಯಾದೀತು. ಆದರೆ ವರ್ಷಗಳಿಂದ ಕಾಡುತ್ತಿರುವ ರಾಷ್ಟ್ರೀಯ ಸಮಸ್ಯೆಯೊಂದರ ಇತ್ಯರ್ಥಕ್ಕೆ ಅಗತ್ಯವಿರುವ ಒಮ್ಮತದ ವಾತಾವರಣವನ್ನು ಮೂಡಿಸಲು ಒಂದು ವ್ಯವಸ್ಥೆಯನ್ನು ಕಲ್ಪಿಸುವ ಕೆಲಸವಾದರೂ ಅಷ್ಟರಮಟ್ಟಿಗೆ ಸಮಿತಿ ಯಶಸ್ವಿಯಾದಂತೆ.

ಹಾಗೆಂದು ವಿವಾದ ಬಗೆಹರಿಸಲು ಸಮಿತಿ ರಚನೆಯಾಗುತ್ತಿರುವ ಇದೇ ಮೊದಲೇನಲ್ಲ. ಜಸ್ಟಿಸ್‌ ಲಿಬರಾನ್‌ ನೇತೃತ್ವದ ನ್ಯಾಯಾಂಗ ಆಯೋಗ 17 ವರ್ಷಗಳಷ್ಟು ಸುದೀರ್ಘ‌ ತನಿಖೆ ನಡೆಸಿದ ವರದಿ ಇನ್ನೂ ಸಂಸತ್ತಿನಲ್ಲಿ ಧೂಳು ತಿನ್ನುತ್ತಿದೆ. ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ್ದು ಬಿಟ್ಟರೆ ಅದಕ್ಕಿಂತ ಮುಂದೆ ಹೋಗಲು ಸಾಧ್ಯವಾಗಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಅಯೋಧ್ಯೆ ವಿವಾದ ಬಾಬರಿ ಕಟ್ಟಡ ನೆಲಸಮವಾದ ದಿನಗಳಲ್ಲಿ ಇರುವಷ್ಟು ತೀವ್ರವಾಗಿ ಈಗ ಉಳಿದಿಲ್ಲ ಎನ್ನುವ ಅಂಶ ಗಮನಕ್ಕೆ ಬರುತ್ತದೆ. ಕೆಲವು ರಾಜಕೀಯ ಪಕ್ಷಗಳಿಗೆ ವಿವಾದ ಜೀವಂತವಾಗಿರುವುದು ಅಗತ್ಯವಿರಬಹುದು. ಆದರೆ ಜನರಲ್ಲಿ ಈ ವಿವಾದ ಒಮ್ಮೆ ಮುಗಿದರೆ ಸಾಕು ಎಂಬ ಭಾವನೆಯಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಯೋಧ್ಯೆ ವಿಚಾರ ಪ್ರಸ್ತಾವವಾಗುತ್ತಿದ್ದರೂ ಜನರು ಈ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಿಲ್ಲ. ಈಗಾಗಿಯೇ ಈ ವಿವಾದವನ್ನು ಎತ್ತಿ ಹಾಕಿದ್ದ ಪಕ್ಷಗಳೇ ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ಧಿಯಂಥ ಅನ್ಯ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಿವೆ.ಇನ್ನೂ ಸ್ಪಷ್ವಾಗಿ ಹೇಳಬೇಕಾದರೆ ಅಯೋಧ್ಯೆ ಈಗ ಜನಜೀವನವನ್ನು ಬಾಧಿಸುವ ವಿಷಯವಲ್ಲ. ಜನರೀಗ ಉದ್ಯೋಗ, ಬಡತನ ನಿರ್ಮೂಲನೆ, ವಸತಿ, ಆರೋಗ್ಯ, ಶಿಕ್ಷಣ ಮುಂತಾದ ವಾಸ್ತವಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ.

Advertisement

ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತೊಡಕಾಗುತ್ತಿರುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡುವ ವಿವಾದ ಮುಂದುವರಿಯುವುದು ಬೇಡ ಎನ್ನುವ ಸಾರ್ವತ್ರಿಕ ಅಭಿಪ್ರಾಯ ಎಲ್ಲ ಸಮುದಾಯಗಳಲ್ಲಿ ಇದೆ. ಹೀಗಾಗಿ ಇನ್ನೂ ವಿವಾದವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವೂ ಇಲ್ಲ. ನ್ಯಾಯಾಲಯ ಈ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಆದಷ್ಟು ತ್ವರಿತವಾಗಿ ವಿವಾದವನ್ನು ಬಗೆಹರಿಸುವತ್ತ ಲಕ್ಷ್ಯ ಹರಿಸುವುದು ಅಪೇಕ್ಷಣೀಯ.

Advertisement

Udayavani is now on Telegram. Click here to join our channel and stay updated with the latest news.

Next